ಪುತ್ತೂರು: ಗ್ರಾಮ ಮಟ್ಟದಲ್ಲಿರುವ ವಿ.ಎ.ಗಳು ಹಿರಿಯರನ್ನು ಗುರುತಿಸಿ ಅವರಿಗೆ ಆದ್ಯತೆಯಲ್ಲಿ ಸೌಲಭ್ಯ ಒದಗಿಸಬೇಕು ಎಂದು ಪುತ್ತೂರು ಸಹಾಯಕ ಕಮಿಷನರ್ ಎಚ್.ಕೆ. ಕೃಷ್ಣಮೂರ್ತಿ ಸೂಚನೆ ನೀಡಿದರು.
ಮಿನಿ ವಿಧಾನಸೌಧದಲ್ಲಿರುವ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ತಾಲೂಕು ಕಂದಾಯ ಇಲಾಖೆಯ ವತಿಯಿಂದ ನಡೆದ ಹೋಬಳಿ ಮಟ್ಟದ ಪಿಂಚಣಿ ಅದಾಲತ್‌ನಲ್ಲಿ ಫಲಾನುಭವಿಗಳಿಗೆ ಪಿಂಚಣಿ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.
ಸರಕಾರದ ಅನೇಕ ಯೋಜನೆಗೆ ಸಂಬಂಧಿಸಿ ಪಿಂಚಣಿ ಸೌಲಭ್ಯ ಪಡೆಯಲು ಹೆಚ್ಚಿನವರಿಗೆ ಹೇಗೆ ಅರ್ಜಿ ಹಾಕುವುದು, ಎಲ್ಲಿ ಅರ್ಜಿಯನ್ನು ನೀಡುವುದು ಎಂಬುದೇ ಗೊತ್ತಿರುವುದಿಲ್ಲ. ಇಂತಹ ಸಂದರ್ಭದಲ್ಲಿ ವಿ.ಎ.ಗಳು ಹೆಚ್ಚಿನ ಜವಾಬ್ದಾರಿ ತೆಗೆದುಕೊಂಡು ಹಿರಿಯರನ್ನು ಗುರುತಿಸಿ ಅವರಿಗೆ ಸೌಲಭ್ಯ ಒದಗಿಸಬೇಕು ಎಂದು ಸೂಚಿಸಿದರು.
ಎಷ್ಟೋ ಮಂದಿಗೆ ಪಿಂಚಣಿ ಸೌಲಭ್ಯದ ಕುರಿತು ಸರಿಯಾದ ಮಾಹಿತಿ ಇಲ್ಲ. ಅವರಾಗಿಯೇ ಅರ್ಜಿ ಹಾಕುತ್ತಾರೆ ಎಂದು ಕಾಯುವುದು ಬೇಡ. ನೀವೇ ಹೋಗಿ ನಿಮ್ಮ ವ್ಯಾಪ್ತಿಯಲ್ಲಿ ಎಷ್ಟು ಮಂದಿ 60 ವರ್ಷ ಮೇಲ್ಪಟ್ಟವರಿದ್ದಾರೆ ಎಂದು ಗುರುತಿಸಿ ಅವರಿಗೆ ಸೌಲಭ್ಯ ವಿತರಣೆ ಮಾಡಬೇಕು. ಮುಂದೆ ಪ್ರತಿ ತಿಂಗಳು ಈ ಕಾರ್ಯಕ್ರಮ ಶಾಸಕರ ಉಪಸ್ಥಿತಿಯಲ್ಲಿ ನಡೆಯಬೇಕು ಎಂದು ಹೇಳಿದರು.
ತಹಶೀಲ್ದಾರ್ ಅನಂತ ಶಂಕರ್ ಉಪಸ್ಥಿತರಿದ್ದರು. ಉಪ ತಹಶೀಲ್ದಾರ್ ಬಿ.ರಾಮಣ್ಣ ನಾಯ್ಕ, ಕಂದಾಯ ನಿರೀಕ್ಷಕ ದಯಾನಂದ ಹೆಗ್ಡೆ, ಉಪ ತಹಶೀಲ್ದಾರ್ ಶಶಿಕಲಾ ಮತ್ತು ವಿ.ಎ. ವೆಂಕಟೇಶ್ ಕಾರ್ಯಕ್ರಮ ನಿರ್ವಹಿಸಿದರು.
ಸಂಧ್ಯಾ ಸುರಕ್ಷಾ, ಇಂದಿರಾಗಾಂಧಿ ರಾಷ್ಟ್ರೀಯ ಪ್ರಮಾಣಪತ್ರ, ವಿಧವಾ ವೇತನ, ಅಂಗವಿಕಲರ ವೇತನ, ಯಶಸ್ವಿನಿ ಪಿಂಚಣಿಗಳ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಒಟ್ಟು 166 ಮಂದಿ ಪ್ರಮಾಣ ಪತ್ರ ಪಡೆದುಕೊಂಡರು.
166 ಮಂದಿಗೆ ಪ್ರಮಾಣ ಪತ್ರ
ಸಂಧ್ಯಾ ಸುರಕ್ಷಾ, ಇಂದಿರಾಗಾಂಧಿ ರಾಷ್ಟ್ರೀಯ ಪ್ರಮಾಣಪತ್ರ, ವಿಧವಾ ವೇತನ, ಅಂಗವಿಕಲರ ವೇತನ, ಯಶಸ್ವಿನಿ ಪಿಂಚಣಿಗಳ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಒಟ್ಟು 166 ಮಂದಿ ಪ್ರಮಾಣ ಪತ್ರ ಪಡೆದುಕೊಂಡರು.