Advertisement

30 ದಿನದೊಳಗೆ ಗಂಗಾ ಕಲ್ಯಾಣ ಸಂಪರ್ಕ: ಸಚಿವ ವಿ.ಸುನೀಲ್ ಕುಮಾರ್

06:25 PM Jan 18, 2022 | Team Udayavani |

ಬೆಂಗಳೂರು : ಠೇವಣಿ ಹಣ ಜಮಾ ಆದ 30 ದಿನದೊಳಗಾಗಿ ಗಂಗಾ ಕಲ್ಯಾಣ ಯೋಜನೆಯ ಅರ್ಜಿಗಳಿಗೆ ವಿದ್ಯುದೀಕರಣ ಸಂಪರ್ಕ ಕಲ್ಪಿಸುವಂತೆ ಕನ್ನಡ-ಸಂಸ್ಕೃತಿ ಹಾಗೂ ಇಂಧನ ಸಚಿವ ವಿ.ಸುನೀಲ್ ಕುಮಾರ್ ಸೂಚನೆ ನೀಡಿದ್ದಾರೆ.ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿರುವ ಅವರು, ಗಂಗಾ ಕಲ್ಯಾಣ ಯೋಜನೆಯ ಸಂಪರ್ಕ ಹಾಗೂ ವಿದ್ಯುದೀಕರಣದಲ್ಲಿ ಯಾವುದೇ ಕಾರಣಕ್ಕೂ ವಿಳಂಬವಾಗಕೂಡದು ಎಂದು ಸ್ಪಷ್ಟ ಸೂಚನೆ ನೀಡಿದ್ದಾರೆ.

Advertisement

ಗಂಗಾ ಕಲ್ಯಾಣ ಯೋಜನೆ ಅನ್ವಯ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಅಂಬೇಡ್ಕರ್ ಅಭಿವೃದ್ಧಿ ನಿಗಮ, ಬಾಬು ಜಗಜೀವನ್ ರಾಂ ಅಭಿವೃದ್ಧಿ ನಿಗಮ ಸೇರಿದಂತೆ ಸರಕಾರದ ನಾನಾ ಇಲಾಖೆಗಳಿಂದ ಧನ ಸಹಾಯ ಮಾಡಲಾಗುತ್ತದೆ. ಅರ್ಜಿದಾರರು ಬೋರ್‌ವೆಲ್ ತೆಗೆಸಿದ ಬಳಿಕ ಸಂಬಂಧಪಟ್ಟ ವಿದ್ಯುತ್ ವಿತರಣಾ ಕಂಪನಿ ವ್ಯಾಪ್ತಿಯಲ್ಲಿ ಈಗಾಗಲೇ ದಾಖಲಿಸಿರುವ ಅರ್ಜಿಯ ಜತೆಗೆ ಸರಕಾರ ನಿಗದಿ ಪಡಿಸಿರುವ 50 ಸಾವಿರ ರೂ. ಠೇವಣಿ ಸಂದಾಯ ಮಾಡಬೇಕಾಗುತ್ತದೆ. ಇದಾದ 30 ದಿನದೊಳಗೆ ವಿದ್ಯುದೀಕರಣ ವ್ಯವಸ್ಥೆ ಕಲ್ಪಿಸಬೇಕೆಂದು ಈಗ ಇಲಾಖೆ ಸಿಬ್ಬಂದಿಗೆ ಸೂಚಿಸಲಾಗಿದೆ.

ವಾಸ್ತವದಲ್ಲಿ ಈ ರೀತಿ ಸಂಪರ್ಕಕ್ಕೆ ಮೂಲ ಸೌಕರ್ಯ ವ್ಯವಸ್ಥೆ ಕಲ್ಪಿಸುವುದಕ್ಕೆ 1.50 ಲಕ್ಷ ರೂ. ವೆಚ್ಚವಾಗುತ್ತದೆ. ಆದರೆ ಪರಿಶಿಷ್ಟ ಜಾತಿ, ಪಂಗಡದ ವಿಶೇಷ ಅಭಿಯೋಜನೆ ಅನ್ವಯ ರಿಯಾಯಿತಿ ನೀಡಲಾಗಿದೆ.

ಸಂಪರ್ಕಕ್ಕೆ ವೇಗ :
ಸುನೀಲ್‌ಕುಮಾರ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಲ್ಲಿ ಪಟ್ಟಿ ಮಾಡಿದ 100 ದಿನಗಳ ಕಾರ್ಯಸೂಚಿಯಲ್ಲೂ ಗಂಗಾ ಕಲ್ಯಾಣ ಯೋಜನೆ ಸಂಪರ್ಕಕ್ಕೆ ವೇಗ ನೀಡುವ ವಿಚಾರ ಪ್ರಸ್ತಾಪಿಸಲಾಗಿತ್ತು. ಐದು ವಿದ್ಯುತ್ ಪ್ರಸರಣ ಕಂಪನಿ ವ್ಯಾಪ್ತಿಯಲ್ಲಿ ಇದುವರೆಗೆ ದಾಖಲಾದ 8377 ಅರ್ಜಿಗಳ ಪೈಕಿ 5982ಕ್ಕೆ 30 ದಿನಗಳ ಅವಧಿಯಲ್ಲೇ ಸಂಪರ್ಕ ಕಲ್ಪಿಸಲಾಗಿದೆ.

2395 ಅರ್ಜಿಗಳು ಸಂಪರ್ಕಕ್ಕೆ ಬಾಕಿ ಇವೆ. ಈ ಪೈಕಿ 1020 ಅರ್ಜಿಗಳ ಕಾಮಗಾರಿ ಪ್ರಗತಿಯಲ್ಲಿದೆ. ಮುಂಗಾರು, ವ್ಯಾಜ್ಯ, ಸಾರಿಗೆ ನಿರ್ಬಂಧ ಇತ್ಯಾದಿ ಕಾರಣಗಳಿಂದ 962 ಅರ್ಜಿಗಳ ವಿಲೇವಾರಿಗೆ ಅಡ್ಡಿ ಇದ್ದು, ಆದಷ್ಟು ಶೀಘ್ರದಲ್ಲಿ ಇವರುಗಳಿಗೆ ಸಂಪರ್ಕ ಕಲ್ಪಿಸಲಾಗುವುದು ಎಂದು ಸುನೀಲ್ ಕುಮಾರ್ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next