ನವದೆಹಲಿ:“ನೀವು ಈ ದೇಶದ ಯುವ ತಲೆಮಾರಿನ ಮನಸ್ಸನ್ನು ಮಲಿನಗೊಳಿಸುತ್ತಿದ್ದೀರಿ…’
ಇದು ನಿರ್ಮಾಪಕಿ ಏಕ್ತಾ ಕಪೂರ್ ವಿರುದ್ಧ ಸುಪ್ರೀಂ ಕೋರ್ಟ್ ಹರಿಹಾಯ್ದ ಪರಿ. ಏಕ್ತಾ ಕಪೂರ್ ಅವರ ಒಡೆತನದ ಒಟಿಟಿ ಪ್ಲಾಟ್‌ಫಾರಂ ಆಲ್ಟ್ ಬಾಲಾಜಿಯಲ್ಲಿ ಪ್ರದರ್ಶನಗೊಂಡ ವೆಬ್ ಸೀರೀಸ್ “ಗಿಗಿಗಿ’ನಲ್ಲಿರುವ ಆಕ್ಷೇಪಾರ್ಹ ವಿಷಯಗಳಿಗೆ ಸಂಬಂಧಿಸಿ ಶುಕ್ರವಾರ ಸುಪ್ರೀಂ ಕೋರ್ಟ್ ನಿರ್ಮಾಪಕಿಯನ್ನು ತರಾಟೆಗೆ ತೆಗೆದುಕೊಂಡಿದೆ.
ಈ ವೆಬ್ ಸೀರೀಸ್ ಮೂಲಕ ಯೋಧರಿಗೆ ಅವಮಾನ ಮತ್ತು ಅವರ ಕುಟುಂಬಗಳ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ ಆರೋಪದಲ್ಲಿ ಏಕ್ತಾ ಕಪೂರ್ ವಿರುದ್ಧ ಇತ್ತೀಚೆಗೆ ಬಂಧನ ವಾರಂಟ್ ಜಾರಿಯಾಗಿತ್ತು. ಅದನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಆದರೆ, ಈಗ ಅವರ ಅರ್ಜಿ ಅವರಿಗೇ ತಿರುಗುಬಾಣವಾಗಿದ್ದು, “ಇನ್ನು ಮುಂದೆ ಇಂಥ ಅರ್ಜಿಗಳನ್ನು ಸಲ್ಲಿಸಿದರೆ, ದಂಡ ವಿಧಿಸಲಾಗುತ್ತದೆ’ ಎಂದು ಸುಪ್ರೀಂ ಕೋರ್ಟ್ ಎಚ್ಚರಿಸಿದೆ.
ಏಕ್ತಾ ಪರ ಹಿರಿಯ ನ್ಯಾಯವಾದಿ ಮುಕುಲ್ ರೋಹಟಗಿ ವಕಾಲತ್ತು ವಹಿಸಿದ್ದರು.”ನೀವು ಇಂಥ ವೆಬ್‌ಸೀರೀಸ್ ಮೂಲಕ ಯುವಕರ ಮನಸ್ಸನ್ನು ಹಾಳು ಮಾಡುತ್ತಿದ್ದೀರಿ. ಪದೇ ಪದೆ ಇಲ್ಲಿಗೆ ಬರಲು, ಒಳ್ಳೆಯ ವಕೀಲರ ಸೇವೆ ಪಡೆಯಲು ನಿಮ್ಮಲ್ಲಿ ಸಾಕಷ್ಟು ಹಣ ಇರಬಹುದು. ಆದರೆ, ನಾವು ಇರುವುದು ಧ್ವನಿ ಇರುವವರ ಪರವಲ್ಲ, ಧ್ವನಿ ಇಲ್ಲದವರಿಗಾಗಿ ಕೆಲಸ ಮಾಡಲು. ಎಲ್ಲ ರೀತಿಯ ಸೌಲಭ್ಯವಿರುವಂಥ ಯೋಧರ ಕುಟುಂಬಗಳಿಗೇ ನ್ಯಾಯ ಸಿಗುವುದಿಲ್ಲ ಎಂದಾದರೆ, ಜನಸಾಮಾನ್ಯನ ಕಥೆಯೇನು’ ಎಂದೂ ನ್ಯಾಯಪೀಠ ಆಕ್ರೋಶಭರಿತವಾಗಿ ಪ್ರಶ್ನಿಸಿತು. ಜತೆಗೆ, ಅರ್ಜಿಯನ್ನು ಇತ್ಯರ್ಥಗೊಳಿಸದೇ ಬಾಕಿ ಉಳಿಸಿತು.