ಮುಂಬೈ: ಮಹಾರಾಷ್ಟ್ರದ ಬಿಜೆಪಿ ಶಾಸಕ ಗಣಪತ್ ಗಾಯಕ್ವಾಡ್ ಮತ್ತು ಶಿವಸೇನಾ ಶಾಸಕ ಮಹೇಶ್ ಗಾಯಕ್ವಾಡ್ ಅವರ ಜಗಳ ಇದೀಗ ಹೊಸ ರೂಪ ಪಡೆದಿದೆ. ಬಿಜೆಪಿ ಶಾಸಕನು ಮುಖ್ಯಮಂತ್ರಿ ಏಕನಾಥ್ ಶಿಂಧೆ ವಿರುದ್ಧ ಆರೋಪ ಮಾಡಿದ್ದು, ‘ಶಿಂಧೆ ನನ್ನನ್ನು ಕ್ರಿಮಿನಲ್ ಮಾಡಿದರು’ ಎಂದಿದ್ದಾರೆ.
ಶುಕ್ರವಾರ ಬಂಧನಕ್ಕೂ ಮುನ್ನ ಸುದ್ದಿ ವಾಹಿನಿಯೊಂದಕ್ಕೆ ದೂರವಾಣಿ ಮೂಲಕ ಮಾತನಾಡಿದ ಗಣಪತ್ ಗಾಯಕ್ವಾಡ್, ಏಕನಾಥ್ ಶಿಂಧೆ ನನ್ನನ್ನು ಅಪರಾಧಿಯನ್ನಾಗಿ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಘಟನೆಯ ನಂತರ ಪ್ರಸಾರವಾದ ದೂರವಾಣಿ ಸಂಭಾಷಣೆಯ ಆಡಿಯೋ ಕ್ಲಿಪ್ ನಲ್ಲಿ ಕಲ್ಯಾಣ್ ಪೂರ್ವದ ಬಿಜೆಪಿ ಶಾಸಕ ಗಣಪತ್, “ಪೊಲೀಸ್ ಠಾಣೆಯಲ್ಲಿ ನನ್ನ ಮಗನನ್ನು ಅಮಾನುಷವಾಗಿ ಹಲ್ಲೆ ಮಾಡಲಾಗಿದೆ, ನನ್ನ ಭೂಮಿಯನ್ನು ನನ್ನಿಂದ ಬಲವಂತವಾಗಿ ಕಸಿದುಕೊಳ್ಳಲಾಗಿದೆ, ಏಕನಾಥ್ ಶಿಂಧೆ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಮುಂದುವರಿದರೆ, ಎಲ್ಲಾ ಕ್ರಿಮಿನಲ್‌ಗಳು ಹೆಚ್ಚಾಗುವುದನ್ನು ನಾವು ನೋಡುತ್ತೇವೆ, ಅವರು ಇಂದು ನನ್ನಂತಹ ಒಳ್ಳೆಯ ವ್ಯಕ್ತಿಯನ್ನು ಅಪರಾಧಿಯನ್ನಾಗಿ ಮಾಡಿದ್ದಾರೆ” ಎಂದು ದೂರಿದ್ದಾರೆ.
ಪೊಲೀಸ್ ಠಾಣೆಯಲ್ಲಿ ತನ್ನ ಮಗನಿಗೆ ಥಳಿಸಲಾಗುತ್ತಿದ್ದು, ಅದಕ್ಕೆ ಪ್ರತೀಕಾರವಾಗಿ ಮಹೇಶ್ ಗಾಯಕ್ವಾಡ್ ಗೆ ಗುಂಡು ಹಾರಿಸಿದ್ದಾರೆ ಎಂದು ಬಿಜೆಪಿ ಶಾಸಕರು ಆರೋಪಿಸಿದ್ದಾರೆ.
“ನಾನು ಹತಾಶನಾಗಿದ್ದೆ ಮತ್ತು ಅದಕ್ಕಾಗಿಯೇ ನಾನು ಗುಂಡು ಹಾರಿಸಿದೆ. ನನಗೆ ಯಾವುದೇ ಪಶ್ಚಾತ್ತಾಪವಿಲ್ಲ. ಪೊಲೀಸ್ ಠಾಣೆಯಲ್ಲಿ ಯಾರಾದರೂ ನನ್ನ ಮಗನನ್ನು ಥಳಿಸಿದರೆ, ನಾನೇನು ಮಾಡಬೇಕೆಂದು ನೀವು ಬಯಸುತ್ತೀರಿ? ನಾನು ಅವರನ್ನು ಕೊಲ್ಲಲು ಉದ್ದೇಶಿಸಿಲ್ಲ” ಎಂದು ಗಣಪತ್ ಗಾಯಕ್ವಾಡ್ ಹೇಳಿದರು.