ಮುಂಬೈ: ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಮುಖ್ಯಮಂತ್ರಿ ಏಕನಾಥ ಶಿಂಧೆ ತಿರುಗೇಟು ನೀಡಿದ್ದಾರೆ.
ಒಂದು ಕಾಲದಲ್ಲಿ ಆಟೋ ಚಾಲಕನಾಗಿದ್ದ ತಾನಿಂದು ಮುಖ್ಯಮಂತ್ರಿಯಾಗಿದ್ದೇನೆ. ಆಟೋ ಈಗ ಮರ್ಸಿಡೆಸ್ ಕಾರನ್ನು ಹಿಂದಿಕ್ಕಿದೆ ಎಂದು ಹೇಳಿದ್ದಾರೆ.
ಇದಕ್ಕೂ ಮೊದಲು ಟೀಕೆ ಮಾಡಿದ್ದ ಉದ್ಧವ್, ಶಿಂಧೆ ತನ್ನ ಬೆನ್ನಿಗೆ ಚೂರಿ ಹಾಕಿದರು ಎಂದು ಆರೋಪಿಸಿದ್ದರು. ತಮ್ಮದು ಸಾಮಾನ್ಯರ ಸರ್ಕಾರ. ಸಮಾಜದ ಪ್ರತೀ ವರ್ಗಕ್ಕೂ ನ್ಯಾಯ ದೊರೆಯುವಂತೆ ಮಾಡು ವುದು ತಮ್ಮ ಕರ್ತವ್ಯ ಎಂದು ಶಿಂಧೆ ಹೇಳಿದ್ದಾರೆ. ಇದೇ ವೇಳೆ, ಜು.10ರ ಆಷಾಢ ಏಕಾದಶಿ ದಿನ ಪಂಢರಾಪುರಕ್ಕೆ ಭೇಟಿ ನೀಡುವ ಭಕ್ತರಿಗೆ ಟೋಲ್ ಶುಲ್ಕ ಮನ್ನಾ ಮಾಡಿ ಸಿಎಂ ಶಿಂಧೆ ಬುಧವಾರ ಆದೇಶ ಹೊರಡಿಸಿದ್ದಾರೆ.
ಲೋಕಸಭೆ ಚೀಫ್ ವಿಪ್ ನೇಮಕ: ಈ ನಡುವೆ, ಉದ್ಧವ್ ನೇತೃತ್ವದ ಶಿವಸೇನೆ ಬುಧವಾರ ಲೋಕಸಭೆಯಲ್ಲಿ ಪಕ್ಷದ ಮುಖ್ಯ ಸಚೇತಕರನ್ನಾಗಿ ರಾಜನ್ ವಿಚಾರೆ ಅವರನ್ನು ನೇಮಕ ಮಾಡಿದೆ. ಭವಾನಾ ಗವಾಲಿ ಸ್ಥಾನದಲ್ಲಿ ವಿಚಾರೆ ಅವರನ್ನು ಕೂರಿಸಲಾಗಿದೆ ಎಂದು ಸಂಸದ ಸಂಜಯ್ ರಾವತ್ ತಿಳಿಸಿದ್ದಾರೆ.
ಡ್ರಮ್ ಬಾರಿಸಿ ಪತಿಯನ್ನು ಸ್ವಾಗತಿಸಿದ ಲತಾ: ಶಿಂಧೆ ಪತ್ನಿಯ ಹೆಸರು ಲತಾ ಶಿಂಧೆ. ಬುಧವಾರ ಥಾಣೆಯ ತಮ್ಮ ನಿವಾಸಕ್ಕೆ ಬಂದ ಶಿಂಧೆಗೆ ಸ್ವತಃ ಡ್ರಮ್ ಬಾರಿಸುವ ಮೂಲಕ ಪತ್ನಿ ಲತಾ ಸ್ವಾಗತ ನೀಡಿದ್ದಾರೆ. ಅವರ ಮುಖದಲ್ಲಿದ್ದ ಹೆಮ್ಮೆ ಎಲ್ಲ ಕಡೆ ಸುದ್ದಿಯಾಗಿದೆ. ಈಕೆ ಶಿಂಧೆಯ ಬದುಕನ್ನೇ ಬದಲಿಸಿದ ವ್ಯಕ್ತಿ. 2000ನೇ ಇಸವಿಯಲ್ಲಿ ನೀರಿನಲ್ಲಿ ಮುಳುಗಿ, ದಂಪತಿಯ ಇಬ್ಬರು ಮಕ್ಕಳು ಸಾವನ್ನಪ್ಪಿದ್ದರು. ಆಗ ಶಿಂಧೆ ಎಲ್ಲವೂ ಸಾಕು ಎಂದು ನಿರ್ಧರಿಸಿದ್ದರು. ಆದರೆ ಅಂತಹ ಬಿರುಗಾಳಿಯ ಮಧ್ಯೆಯೂ ಲತಾ ಪತಿಯನ್ನು ಹುರಿದುಂಬಿಸಿ ರಾಜಕೀಯಕ್ಕೆ ಮರಳುವಂತೆ ಮಾಡಿದರು.