Advertisement

ದಾವೂದ್‌ ಪ್ರಕರಣದಲ್ಲಿ ಕ್ಲೀನ್‌ ಚಿಟ್‌:ಫಡ್ನವೀಸ್‌ ಸಂಪುಟಕ್ಕೆ ಖಡ್ಸೆ?

04:16 PM Jul 12, 2017 | |

ಮುಂಬಯಿ: ಭೋಸರಿ ಜಮೀನು ಹಗರಣ ಮತ್ತು ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಜತೆಗೆ ನಂಟು ಪ್ರಕರಣದಲ್ಲಿ ಕ್ಲೀನ್‌ ಚಿಟ್‌ ಸಿಕ್ಕಿದ ಬಳಿಕ ಮಾಜಿ ಕಂದಾಯ ಸಚಿವ ಏಕನಾಥ್‌ ಖಡ್ಸೆ  ಅವರನ್ನು  ಶೀಘ್ರವೇ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರು ತಮ್ಮ ಸಚಿವ ಸಂಪುಟದಲ್ಲಿ ಮತ್ತೆ ಸೇರ್ಪಡೆಗೊಳಿಸುವ ಸಾಧ್ಯತೆಯಿದೆ. 

Advertisement

ಅಂತೆಯೇ, ಲೋಕಸಭೆ, ವಿಧಾನಸಭೆ ಮತ್ತು ಮುಂಬಯಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪಕ್ಷದ ಭರ್ಜರಿ ಗೆಲುವಿಗೆ ಕೊಡುಗೆಯನ್ನು ನೀಡಿದ ಮುಂಬಯಿ ಬಿಜೆಪಿ ಅಧ್ಯಕ್ಷ ಆಶಿಷ್‌ ಶೇಲಾರ್‌ ಅವರಿಗೂ ಅವರ ಕೆಲಸಗಳಿಗೆ ಬಹುಮಾನದ ರೂಪದಲ್ಲಿ ಕ್ಯಾಬಿನೆಟ್‌ ಸಚಿವ ಸ್ಥಾನ ಸಿಗುವ ನಿರೀಕ್ಷೆಯಿದೆ.

ಅಧಿವೇಶನ ಪೂರ್ವ ಸಚಿವ ಸಂಪುಟ ವಿಸ್ತರಣೆ ಸಾಧ್ಯತೆ
ಜು. 24ರಿಂದ ಆರಂಭವಾಗಲಿರುವ ರಾಜ್ಯ ವಿಧಾನಮಂಡಲದ ಮಳೆಗಾಲದ ಅಧಿವೇಶನಕ್ಕೆ ಮೊದಲು ಫಡ್ನವೀಸ್‌ ಅವರು ತಮ್ಮ ಸಚಿವ ಸಂಪುಟದಲ್ಲಿ ವಿಸ್ತರಣೆಯನ್ನು ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ. ಬಿಜೆಪಿ ಕೋಟಾದಿಂದ ಸರಕಾರದಲ್ಲಿ 3 ಸಚಿವ ಸ್ಥಾನಗಳು ಖಾಲಿ ಉಳಿದಿದ್ದು, ಈ ಪೈಕಿ 2 ಸ್ಥಾನಗಳು ತುಂಬಲಿವೆ.

ಮೂಲಗಳ ಪ್ರಕಾರ, ಭೋಸರಿ ಜಮೀನು ಹಗರಣದಲ್ಲಿ ತನಿಖೆ ನಡೆಸಿರುವ ಜೋಟಿಂಗ್‌ ಕಮಿಟಿಯ ತನಿಖಾ ವರದಿಯು ಸರಕಾರಕ್ಕೆ ಸಿಕ್ಕಿದ್ದು, ಅದರಲ್ಲಿ ಖಡ್ಸೆ ಅವರಿಗೆ ಕ್ಲೀನ್‌ ಚಿಟ್‌ ನೀಡಲಾಗಿದೆ. ಇದರಿಂದಾಗಿ ರಾಜ್ಯ ಸಚಿವ ಸಂಪುಟದಲ್ಲಿ ಖಡ್ಸೆ ಅವರ  ಪುನರಾಗಮನಕ್ಕೆ ದಾರಿ ಸುಗಮಗೊಂಡಂತಾಗಿದೆ.

ಖಡ್ಸೆ ಇಲ್ಲದೆ ಸಿಎಂ ಫಡ್ನವೀಸ್‌ ಅವರಿಗೆ ಸಚಿವ ಸಂಪುಟವು ಖಾಲಿ ಖಾಲಿ ಇದ್ದಂತೆ ಭಾಸವಾಗುತ್ತಿದ್ದು, ಈ ವಿಷಯವನ್ನು ಅವರು ಈಗಾಗಲೇ ಸಾರ್ವಜನಿಕವಾಗಿಯೂ ಒಪ್ಪಿ ಕೊಂಡಿದ್ದಾರೆ. ರಾಜ್ಯದಲ್ಲಿ ರೈತರ ಪ್ರತಿಭಟನೆಯ ಬಳಿಕ ಸರಕಾರ ಮತ್ತು ಬಿಜೆಪಿಯ ವರ್ಚಸ್ಸಿಗೆ  ಗ್ರಾಮೀಣ ಭಾಗಗಳಲ್ಲಿ  ಧಕ್ಕೆ ಉಂಟಾಗಿದೆ ಎಂದು ಹೇಳಲಾಗುತ್ತಿದೆ.  ಖಡ್ಸೆ ಓರ್ವ ಜನಸಾಮಾನ್ಯರ ನಾಯಕರಾಗಿದ್ದು, ಸಚಿವ ಸಂಪುಟದಲ್ಲಿ ಅವರ ಪುನರಾಗಮನದಿಂದ  ಸರಕಾರ ಮತ್ತು ಬಿಜೆಪಿಗೆ ಗ್ರಾಮೀಣ ಭಾಗ ಗಳಲ್ಲಿ ಬಲಿಷ್ಠ ಮುಖ ಸಿಕ್ಕಿದಂತಾಗಲಿದೆ. ಅಂತೆಯೇ, ರೈತರ ಸಮಸ್ಯೆಗಳ ನಿವಾರಣೆ ವಿಷಯದಲ್ಲಿ ಮಿತ್ರಪಕ್ಷ ಶಿವಸೇನೆ ಸೇರಿದಂತೆ ವಿಪಕ್ಷಗಳ ವಾಗ್ಧಾಳಿಗಳಿಂದಾಗಿ ಚಿಂತೆಯಲ್ಲಿರುವ  ರಾಜ್ಯ ಸರಕಾರಕ್ಕೆ ಖಡ್ಸೆ ಅವರ ಮರಳಿಕೆಯಿಂದ ಶಕ್ತಿ ಸಿಕ್ಕಿದಂತಾಗಲಿದೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರ ಬಳಿಕ ಯಾವುದೇ ವಿಷಯದಲ್ಲೂ ವಿಪಕ್ಷಗಳ ಬಾಯಿ ಮುಚ್ಚಿಸಬಲ್ಲ  ನಾಯಕ  ಇವರಾಗಿದ್ದಾರೆ. ಹಾಗಾಗಿ, ಆದಷ್ಟು ಬೇಗ  ಖಡ್ಸೆ ಅವರು ಸಚಿವ ಸಂಪುಟಕ್ಕೆ ವಾಪಸ್‌ ಆಗಲಿ ಎಂಬುದು ಮುಖ್ಯಮಂತ್ರಿ ಅವರ ಆಶಯವೂ ಆಗಿದೆ.

Advertisement

ಶೇಲಾರ್‌ಗೆ ಪರಿಶ್ರಮದ ಪ್ರತಿಫಲ?
ಶಾಸಕ ಆಶಿಷ್‌ ಶೇಲಾರ್‌ ಅವರಿಗೆ ಅವರ ತಾಳ್ಮೆ ಮತ್ತು ಪರಿಶ್ರಮದ ಪ್ರತಿಫಲ ಸಿಗಲಿದೆ. ಶೇಲಾರ್‌ ಅವರ ನೇತೃತ್ವದಲ್ಲಿ ಪಕ್ಷವು ಇತ್ತೀಚೆಗೆ ನಡೆದ ಮುಂಬಯಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ 82 ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತ ಅಧಿಕಾರದಿಂದ  ಕೇವಲ 2 ಹೆಜ್ಜೆ ದೂರದಲ್ಲಿ ಬಂದು ನಿಂತಿತ್ತು. 

ಮಹಾನಗರ ಪಾಲಿಕೆ ಚುನಾವಣೆಯಲ್ಲಿ  ಬಿಜೆಪಿ ಅಧ್ಯಕ್ಷನ ರೂಪದಲ್ಲಿ ಶೇಲಾರ್‌ ಅವರು ಎಷ್ಟು ಆಕ್ರಮಣಕಾರಿಯಾಗಿ ಶಿವಸೇನೆಗೆ ಪೈಪೋಟಿ ನೀಡಿರುವರೋ, ಅದಕ್ಕೆ ಅವರಿಗೆ ಸಂಚಿವ ಸಂಪುಟದಲ್ಲಿ  ಕ್ಯಾಬಿನೆಟ್‌ ಸಚಿವ ಸ್ಥಾನದ ಬಹುಮಾನ ಸಿಗಲಿದೆ ಎಂದು ಹೇಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next