ಬೆಂಗಳೂರು: 2022-23ನೇ ಸಾಲಿನ ರಾಜ್ಯದ ಪ್ರತಿಷ್ಠಿತ ಕ್ರೀಡಾ ಪ್ರಶಸ್ತಿಗಳಾದ ಏಕಲವ್ಯ, ಕ್ರೀಡಾರತ್ನ, ಜೀವಮಾನ ಸಾಧನೆ, ಕ್ರೀಡಾ ಪೋಷಕ ಪ್ರಶಸ್ತಿಗಳನ್ನು ಮಂಗಳ ವಾರ ಬೆಂಗಳೂರಿನ ರಾಜಭವನದಲ್ಲಿ ಪ್ರದಾನ ಮಾಡಲಾಯಿತು.
ರಾಜ್ಯಪಾಲ ಥಾವರಚಂದ್ ಗೆಹಲೋತ್, ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ, ಕ್ರೀಡಾಸಚಿವ ಡಾ| ಕೆ.ಸಿ. ನಾರಾಯಣ ಗೌಡ ಉಪಸ್ಥಿತರಿದ್ದರು.
ಒಟ್ಟು 15 ಮಂದಿಗೆ ಏಕಲವ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು (ತಲಾ 2 ಲಕ್ಷ ರೂ.). ಉತ್ತಮ ತರಬೇತಿ ನೀಡಿದ 6 ಮಂದಿಗೆ ಜೀವಮಾನ ಸಾಧನೆ ಪುರಸ್ಕಾರ ನೀಡಲಾಯಿತು (ತಲಾ 1.50 ಲಕ್ಷ ರೂ.). 8 ಮಂದಿಗೆ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು (ನೀಡಲಾಗಿದೆ. ತಲಾ 1 ಲಕ್ಷ ರೂ.). 3 ಸಂಸ್ಥೆಗಳಿಗೆ ಕ್ರೀಡಾ ಪೋಷಕ ಪ್ರಶಸ್ತಿಗಳನ್ನು ನೀಡಲಾಯಿತು (ತಲಾ 5 ಲಕ್ಷ ರೂ.).
ಆಳ್ವಾಸ್‌ನ ಚೇತನ್‌ಗೆ ಏಕಲವ್ಯ
ಮೂವರಿಗೆ ಕರ್ನಾಟಕ ಕ್ರೀಡಾರತ್ನ
ಮೂಡುಬಿದಿರೆ: ಕರ್ನಾಟಕ ಸರಕಾರ ನೀಡುವ 2021ನೇ ಸಾಲಿನ ಏಕಲವ್ಯ ಪ್ರಶಸ್ತಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಕ್ರೀಡಾಪಟು ಚೇತನ್; ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿಗೆ ಕವನಾ, ವೀರಭದ್ರ ನಿಂಗಪ್ಪ ಮುಧೋಳ್ ಮತ್ತು ರಮೇಶ್ ಭಾಜನರಾಗಿದ್ದಾರೆ. ಇವರು ಕ್ರಮವಾಗಿ ಬಾಲ್ ಬ್ಯಾಡ್ಮಿಂಟನ್, ಮಲ್ಲಕಂಬ ಹಾಗೂ ಖೋ ಖೋ ವಿಭಾಗದಲ್ಲಿ ಪ್ರಸಸ್ತಿಗೆ ಆಯ್ಕೆಯಾಗಿ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿದರು.
ಆಳ್ವಾಸ್ ಸಂಸ್ಥೆಯ ಕ್ರೀಡಾ ದತ್ತು ಸ್ವೀಕಾರದಡಿಯಲ್ಲಿ ಉಚಿತ ಶಿಕ್ಷಣ ಪಡೆದ ಪ್ರತಿಭಾವಂತ ಕ್ರೀಡಾಪಟುಗಳ ಸಾಧನೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಅಭಿನಂದಿಸಿದ್ದಾರೆ.