ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಏಕಲವ್ಯ, ಜೀವಮಾನ ಸಾಧನೆ, ಕರ್ನಾಟಕ ಕ್ರೀಡಾ ರತ್ನ, ಕ್ರೀಡಾ ಪೋಷಕ ಮತ್ತು ಎನ್.ಎಸ್.ಎಸ್ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.
ಕಂದಾಯ ಸಚಿವ ಆರ್.ಅಶೋಕ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಸಿ.ಟಿ. ರವಿ, ಶಾಸಕ ರಿಜ್ವಾನ್ ಅರ್ಷದ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಕಲ್ಪನಾ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬಿಎಸ್ ವೈ, ಕ್ರೀಡಾಪಟುಗಳು ಇದೊಂದೇ ಪ್ರಶಸ್ತಿಗೆ ತೃಪ್ತರಾಗದೆ ದೇಶವನ್ನು ವಿಶ್ವದಲ್ಲಿ ಬೆಳಗುವಂತೆ ಶ್ರಮ ವಹಿಸಬೇಕು. ಪ್ರಧಾನಿ ಆಶಯದಂತೆ ವಿಶ್ವ ಮಟ್ಟದಲ್ಲಿ ನಿಮ್ಮ ಸಾಧನೆ ತೋರಬೇಕು. ಆರೋಗ್ಯದ ಕಡೆಗೂ ಗಮನ ಹರಿಸಬೇಕು. ಕೇಂದ್ರ ಸರ್ಕಾರ ಖೇಲೊ ಇಂಡಿಯಾ, ಫಿಟ್ ಇಂಡಿಯಾ ಯೋಜನೆಗಳನ್ನು ಯಸ್ವಿಯಾಗಿ ಜಾರಿಗೊಳಿಸಲಾಗುತ್ತಿದೆ. 2028ರಲ್ಲಿ ಒಲಂಪಿಕ್ಸ್ ನಲ್ಲಿ ರಾಜ್ಯದ ಕ್ರೀಡಾಪಟುಗಳು ದೇಶದ ಕೀರ್ತಿ ಪತಾಕೆ ಹಾರಿಸುವ ಕೆಲಸ ಮಾಡಬೇಕು .ಅದಕ್ಕೆ ಅಗತ್ಯವಿರುವ ಎಲ್ಲ ನೆರವು ನೀಡಲು ರಾಜ್ಯ ಸರ್ಕಾರ ಸಿದ್ದವಿದೆ ಎಂದರು.
ಇದನ್ನೂ ಓದಿ:ರಾಜ್ಯ ಕ್ರೀಡಾ ಪ್ರಶಸ್ತಿ ಪ್ರಕಟ: ರಾಹುಲ್, ಮಯಾಂಕ್, ವೇದಾ ಕೃಷ್ಣಮೂರ್ತಿಗೆ ಏಕಲವ್ಯ ಪ್ರಶಸ್ತಿ
ಸಚಿವ ಸಿ ಟಿ ರವಿ ಮಾತನಾಡಿ, ಮೂರು ವರ್ಷಗಳ ಕ್ರೀಡಾ ಪ್ರಶಸ್ತಿ ನೀಡಲು ಆಗಿರಲಿಲ್ಲ. ಕೋವಿಡ್ ಕಾರಣದಿಂದ ಸರಳವಾಗಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಇದುವರೆಗೂ ಕ್ರೀಡೆ ಪಠ್ಯದ ಭಾಗವಾಗಿರಲಿಲ್ಲ. ನೂತನ ಶಿಕ್ಷಣ ನೀತಿಯಲ್ಲಿ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ ಸೇರಿಸಿರುವುದರಿಂದ ಮನೆಗಳಲ್ಲೂ ಕ್ರೀಡೆಗೆ ಮುಕ್ತ ಅವಕಾಶ ಇದೆ. ಮುಂದಿನ ವರ್ಷದಿಂದ ನೂತನ ಪಠ್ಯ ಕ್ರಮ ಜಾರಿಗೆ ಬರುತ್ತದೆ ಎಂದು ಹೇಳಿದರು.