ನವದೆಹಲಿ:ವಿಧಾನಸಭೆ ಚುನಾವಣೆ ನಡೆಯಲಿರುವ ಪಂಚ ರಾಜ್ಯಗಳಲ್ಲಿ ಆಮ್ ಆದ್ಮಿ ಪಕ್ಷದ ವರಿಷ್ಠ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೋಮವಾರ(ಜನವರಿ 24) ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ದೆಹಲಿ ಸರ್ಕಾರದ ಉತ್ತಮ ಕೆಲಸದ ವಿಡಿಯೋಗಳನ್ನು ಅಪ್ ಲೋಡ್ ಮಾಡುವಂತೆ ದೆಹಲಿ ನಿವಾಸಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:ಅಂತಹ ಸಭೆಗೆ ಹೋಗಲ್ಲ: ಬೆಳಗಾವಿ ಬಿಜೆಪಿ ಸಭೆಗೆ ರಮೇಶ್ ಜಾರಕಿಹೊಳಿ ಅಸಮಾಧಾನ
“ನಮ್ಮ ಸರ್ಕಾರ ಉಚಿತ ವಿದ್ಯುತ್, ನೀರು ಸೇರಿದಂತೆ ಹಲವಾರು ಉತ್ತಮ ಕೆಲಸಗಳನ್ನು ಜಾರಿಗೊಳಿಸಿದೆ. ಈ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಒಂದು ಅವಕಾಶ ನೀಡುವಂತೆ ಪಂಜಾಬ್, ಉತ್ತರಪ್ರದೇಶ, ಗೋವಾ ಮತ್ತು ಉತ್ತರಾಖಂಡ್ ರಾಜ್ಯಗಳ ಮತದಾರರಲ್ಲಿ ದೆಹಲಿ ನಿವಾಸಿಗಳು ಮನವಿ ಮಾಡಿಕೊಳ್ಳುವಂತೆ” ಕೇಜ್ರಿವಾಲ್ ತಿಳಿಸಿದ್ದಾರೆ.
ದೆಹಲಿ ಸರ್ಕಾರದ ಅಭಿವೃದ್ಧಿ ಕೆಲಸದ ವಿಡಿಯೋಗಳನ್ನು ಟ್ವೀಟರ್, ಇನ್ಸ್ ಸ್ಟಾಗ್ರಾಮ್, ಫೇಸ್ ಬುಕ್ ನಲ್ಲಿ ಅಪ್ ಲೋಡ್ ಮಾಡಿ, ಅಷ್ಟೇ ಅಲ್ಲ ಆಮ್ ಆದ್ಮಿ ಪಕ್ಷಕ್ಕೆ ಒಂದು ಅವಕಾಶ ನೀಡುವಂತೆ ವಾಟ್ಸ್ ಆ್ಯಪ್ ಮೂಲಕ ಮನವಿ ಮಾಡಿಕೊಳ್ಳಿ ಎಂದು ಈ ಸಂದರ್ಭದಲ್ಲಿ ಕೇಜ್ರಿವಾಲ್ ವಿನಂತಿಸಿಕೊಂಡಿದ್ದಾರೆ.
“ಕೇಜ್ರಿವಾಲ್ ಗೆ ಒಂದು ಅವಕಾಶ” ಕೊಡಿ ಎಂಬ ಪ್ರಚಾರಾಂದೋಲನದಡಿ ದೆಹಲಿ ನಿವಾಸಿಗಳು ದೆಹಲಿ ಸರ್ಕಾರದ ಉತ್ತಮ ಕೆಲಸಗಳನ್ನು ಪಂಚರಾಜ್ಯಗಳ ಮತದಾರರಿಗೆ ತಲುಪಿಸಬೇಕು ಎಂದು ಕೇಜ್ರಿವಾಲ್ ಹೇಳಿದರು.