Advertisement
ಶಾಲೆಯಲ್ಲಿ ವಿದ್ಯಾರ್ಥಿನಿ ಹೆಡ್‌ಮಾಸ್ಟರ್ ಕೋಣೆಯಲ್ಲಿ ಕುಳಿತಿದ್ದಾಳೆ. ಅದೂ ಎದುರಿನ ಕುರ್ಚಿಯ ಮೇಲಲ್ಲ! ಹೆಡ್‌ಮಾಸ್ಟರರ ಕುರ್ಚಿ ಮೇಲೆಯೇ ಕೂತಿದ್ದಾಳೆ. ಅವನ ಮುಂದೆ ಶಿಕ್ಷಕರು ಸಾಲಾಗಿ ನಿಂತುಕೊಂಡಿದ್ದಾರೆ. ಇಷ್ಟು ದಿನ ಇದೇ ಶಿಕ್ಷಕರ ಮುಂದೆ ಸರದಿ ಸಾಲಿನಲ್ಲಿ ನಿಂತು ಅಂಗೈ ಮೇಲೆ ಹೊಡೆಸಿಕೊಳ್ಳುತ್ತಿದ್ದ ಆ ಹುಡುಗಿಯ ಮುಂದೆ ಶಿಕ್ಷಕರು ಸಾಲಾಗಿ ನಿಂತುಕೊಂಡಿದ್ದಾರೆ. ಇಷ್ಟು ದಿನ ಅಲ್ಲಿ ನಡೆಯುತ್ತಿದ್ದುದಕ್ಕೆ ವಿರುದ್ಧವಾದ ದೃಶ್ಯಾವಳಿ ಅಲ್ಲಿ ತೆರೆದುಕೊಳ್ಳುತ್ತದೆ. ಆ ಹುಡುಗಿ ಹೆಡ್‌ಮಾಸ್ಟರ್‌ನಂತೆಯೇ ರಿಜಿಸ್ಟರ್ ಮೇಲೆಲ್ಲಾ ಸಹಿ ಹಾಕುತ್ತಿದ್ದಾಳೆ. ಸಹಪಾಠಿಗಳಿಂದ ಕುಂದುಕೊರತೆಗಳನ್ನು ಆಲಿಸುತ್ತಿದ್ದಾಳೆ. ಜತೆಗೇ ಏಕಪಕ್ಷೀಯತೆ ತೋರುತ್ತಿದ್ದ ಟೀಚರ್‌ಗಳ ಮೇಲೆ ತಮಾಷೆಯಲ್ಲಿ ಕೆಂಗಣ್ಣು ಬೀರುತ್ತಿದ್ದಾಳೆ. ಏಪ್ರಿಲ್ ಫೂಲ್ ಮಾಡುತ್ತಿಲ್ಲ. ನಿಜಕ್ಕೂ ಈ ದೃಶ್ಯವನ್ನು ಕಲ್ಪಿಸಿಕೊಳ್ಳಿ. ಇತ್ತೀಚಿಗಷ್ಟೆ ಬಳ್ಳಾರಿಯ ಒಂದು ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಒಂದು ದಿನದ ಮಟ್ಟಿಗೆ ತಾನು ಓದುತ್ತಿದ್ದ ಶಾಲೆಗೇ “ಹೆಡ್‌ಮಾಸ್ಟರ್’ ಆದಾಗ ಅಲ್ಲಿನ ದೃಶ್ಯ ಹೀಗಿತ್ತು.
Related Articles
Advertisement
ದೇಶದಲ್ಲಿ ಪ್ರಭಾವಶಾಲಿ ಹುದ್ದೆಯೆಂದರೆ ಪ್ರಧಾನಮಂತ್ರಿ ಸ್ಥಾನ. ನಿಮಗೇ ಗೊತ್ತಿರುವ ಹಾಗೆ ಆ ಸ್ಥಾನಕ್ಕೇರುವುದು ಎಷ್ಟು ಕೆರೆಯ ನೀರು ಕುಡಿದರೂ ಕನಸಿನ ಮಾತೇ ಸರಿ. ಇಲ್ಲಿ ನಾವು ಆಡುತ್ತಿರುವುದೂ ಕನಸಿನ ಮಾತೇ ಅಲ್ಲವೆ? ಹಾಗಾಗಿ ಪ್ರಧಾನಮಂತ್ರಿ ಆಗಬೇಕು ಅಂತ ನೀವಂದುಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ. ಅನಿಲ್ ಕಪೂರ್ ಅಭಿನಯದ “ನಾಯಕ್’ ಸಿನಿಮಾ ಇದಕ್ಕೊಂದು ಅದ್ಭುತ ಉದಾಹರಣೆ. ಶ್ರೀಸಾಮಾನ್ಯನೊಬ್ಬ ರಾಜ್ಯದ ಹಾಲಿ ಮುಖ್ಯಮಂತ್ರಿಯ ಸವಾಲನ್ನು ಸ್ವೀಕರಿಸಿ ಒಂದು ದಿನಕ್ಕೆ ಮುಖ್ಯಮಂತ್ರಿಯಾಗುವ ಆ ಸಿನಿಮಾದ ಕಥೆ ತುಂಬಾ ರೋಚಕ. ಸಿನಿಮಾದಲ್ಲಿ ಎಷ್ಟೋ ಮುಖ್ಯಮಂತ್ರಿಗಳು ತಮ್ಮ ಕಾಲಾವಧಿಯಲ್ಲಿ ತೆಗೆದುಕೊಳ್ಳಲಾಗದ ನಿರ್ಧಾರಗಳನ್ನು ಯಾವುದೇ ಮುಲಾಜಿಲ್ಲದೆ ಅನಿಲ್ ಕಪೂರ್ ತೆಗೆದುಕೊಳ್ಳುವುದನ್ನು ನೋಡಿಯೇ ಅದೆಷ್ಟೋ ಮಂದಿ ಥ್ರಿಲ್ಲಾಗಿದ್ದರು. ಇದು ವಾಸ್ತವದಲ್ಲಿ ಸಾಧ್ಯವಾಗಬೇಕಾದರೆ ಕಾನೂನಿನಲ್ಲಿ ಅವಕಾಶವಿದೆಯೇ ಎಂಬಿತ್ಯಾದಿ ಪ್ರಶ್ನೆಗಳೇನೇ ಇದ್ದರೂ ಕಾಮನ್‌ಮ್ಯಾನ್ ಒಬ್ಬ ಒಂದು ದಿನದ ಮಟ್ಟಿಗೆ ಮುಖ್ಯಮಂತ್ರಿಯಾಗುವ ಕಲ್ಪನೆಯೇ ಅದ್ಭುತ!
ಅದನ್ನೇ ಅಲ್ಬರ್ಟ್ ಐನ್‌ಸ್ಟಿನ್ ಹೇಳಿರುವುದು- “ಲಾಜಿಕ್ ಎನ್ನುವುದು ನಮ್ಮನ್ನು ಪಾಯಿಂಟ್ ಎ ನಿಂದ ಪಾಯಿಂಟ್ ಬಿ ತನಕ ಕರೆದೊಯ್ಯುತ್ತದೆ. ಆದರೆ ಕಲ್ಪನೆ ನಮ್ಮನ್ನು ಎಲ್ಲಿಂದ ಎಲ್ಲಿಯವರೆಗೆ ಬೇಕಾದರೂ ಸೀಮಾತೀತವಾಗಿ ಪ್ರಯಾಣಿಸಲು ಅನುಮತಿ ನೀಡುತ್ತದೆ’ ಅಂತ. ವಿಜ್ಞಾನ ಸೂತ್ರ, ಲೆಕ್ಕಾಚಾರಗಳ ಮೇಲೆಯೇ ನಿಂತಿದ್ದರೂ ಅವೆಲ್ಲವುದರ ತಳಹದಿ ಕಲ್ಪನೆ ಎಂಬುದರಲ್ಲಿ ಎರಡು ಮಾತಿಲ್ಲ. ಅದಕ್ಕೇ ವಿಜ್ಞಾನಿ ಮತ್ತು ಮಾಜಿ ರಾಷ್ಟ್ರಪತಿ ದಿ. ಅಬ್ದುಲ್ ಕಲಾಂ ಮಕ್ಕಳಿಗೆ ಕನಸು ಕಾಣುವುದಕ್ಕೆ ಹುರಿದುಂಬಿಸಿದರು.
ಹೈದರಾಬಾದಿನಲ್ಲಿ ಸಾದಿಕ್ ಎಂಬ ಬಾಲಕ ಕ್ಯಾನ್ಸರ್‌ನಿಂದ ಬಳಲುತ್ತಿದ್ದ. ಎಷ್ಟು ಖರ್ಚು ಮಾಡಿದರೂ, ಯಾವುದೇ ಚಿಕಿತ್ಸೆಗಳೂ ಆತನನ್ನು ಗುಣಪಡಿಸಲಾದವು ಎಂದು ವೈದ್ಯರು ಆತನ ಹೆತ್ತವರಿಗೆ ತಿಳಿಸಿದರು. ಅವರ ಹೃದಯ ಒಡೆದೇ ಹೋಯಿತು. ತಮ್ಮ ಪುಟ್ಟ ಕಂದ ಸಾಯುವುದು ಖಾತರಿಯಾಗಿದೆ. ಆದರೆ ದಿನಾಂಕವೊಂದು ಮಾತ್ರ ಗೊತ್ತಿಲ್ಲ ಅಷ್ಟೇ. ಪೊಲೀಸ್ ಕಮೀಷನರ್ ಆಗಬೇಕೆಂಬ ಮಹದಾಸೆಯಿದ್ದ ಮಗ ಇಷ್ಟು ಚಿಕ್ಕ ವಯಸ್ಸಿಗೇ ಕಣ್ಮುಂದೆಯೇ ಮೃತ್ಯುವಶವಾಗುವುದನ್ನು ಅವರು ನೋಡಲಾಗದೇ ಹೋದರು. ಆದರೇನು ಮಾಡುವುದು, ಮಗನ ಮುಂದೆ ತಮ್ಮ ದುಃಖವನ್ನು ತೋರಿಸಿಕೊಳ್ಳಲಿಲ್ಲ.
ಈ ಸಮಯದಲ್ಲಿ ಅವರ ನೆರವಿಗೆ ಬಂದಿದ್ದು “ಮೇಕ್ ಎ ವಿಶ್’ ಫೌಂಡೇಷನ್. ಆ ಸಂಸ್ಥೆಯವರು ಸಾದಿಕ್ ಕೊನೆಯಾಸೆಯನ್ನು ತಿಳಿದುಕೊಂಡು ಅದನ್ನು ಹೈದರಾಬಾದಿನ ಪೊಲೀಸ್ ಕಮೀಷನರ್‌ಗೆ ತಿಳಿಸುತ್ತಾರೆ. ಒಬ್ಬ ಬಾಲಕನ ಕಡೆಯಾಸೆಯನ್ನು ನೆರವೇರಿಸುವ ಈ ಕೆಲಸದಲ್ಲಿ ಅವರೂ ಕೈಜೋಡಿಸುತ್ತಾರೆ. ಸಾದಿಕ್ ಒಂದು ದಿನ ಮಟ್ಟಿಗೆ ಹೈದರಾಬಾದಿನ ಪೊಲೀಸ್ ಕಮೀಷನರ್ ಆಗಿ ನೇಮಕವಾಗುತ್ತಾನೆ. ಪೊಲೀಸ್ ಸಮವಸ್ತ್ರ ಧರಿಸಿ, ಲಾಠಿ ಝಳಪಿಸಿ ಸಾದಿಕ್ ಏನು ಹೇಳಿದ್ದ ಗೊತ್ತೇ? “ನನಗೆ ಎಲ್ಲರೂ ಶಾಂತಿಯಿಂದಿರಬೇಕು ಮತ್ತು ರೌಡಿಗಳನ್ನು ಹಿಡಿಯಬೇಕು’ ಅಂತ. ಒಂದು ದಿನದ ಮಟ್ಟಿಗೆ ಹತ್ತು ವರ್ಷದ ಬಾಲಕನೊಬ್ಬ ಒಂದು ಮಹಾನಗರವೊಂದರ ಪೊಲೀಸ್ ಕಮೀಷನರ್ ಆಗಿದ್ದು ಎಷ್ಟು ಸೋಜಿಗ ಅಲ್ಲವೆ? ಇಲ್ಲಿ ಆತ ಕಮೀಷನರ್ ಆಗಿ ಆತನ ದೈನಂದಿನ ಕರ್ತವ್ಯಗಳನ್ನು ಚಾಚೂತಪ್ಪದೇ ಪಾಲಿಸದೇ ಇರಬಹುದು. ಈ ವಿಚಾರದಿಂದ ನಾವು ತಿಳಿದುಕೊಳ್ಳಬಹುದಾದ್ದು ಏನೆಂದರೆ ಕನಸು ಬದುಕಿಗಿಂತಲೂ ದೊಡ್ಡದು. ವಾಸ್ತವ ಜಗತ್ತಿನಲ್ಲಿ ನಮಗೆ ಅಡೆತಡೆಗಳು, ಮಿತಿಗಳು ಏನೇ ಇದ್ದಿರಬಹುದು ಆದರೆ ಕನಸಿಗೂ, ಆಸೆಗೂ ಮಿತಿ ಏತಕ್ಕೆ? ಹಾಗೆ ಮಿತಿ ಹಾಕಿಕೊಳ್ಳದವನೇ ನಿಜಕ್ಕೂ ಎಕ್ ದಿನ್ ಕಾ ಸುಲ್ತಾನ್!
ನೋಡಿ ಹೇಗಿದೆ ರಂಜಿತಾ ದರ್ಬಾರ್!ಯಾವುದೇ ಶಾಲೆಯ ಬಾಲಕಿಯ ಬಳಿ ಹೋಗಿ ಕೇಳಿ ದೊಡ್ಡವರಾದ ಮೇಲೆ ಏನಾಗಬೇಕು ಅಂತ. ನಿಮಗೆ ಸಿಗಬಹುದಾದ ಸಾಮಾನ. ಉತ್ತರ ಟೀಚರ್. ಅಷ್ಟರ ಮಟ್ಟಿಗೆ ಅವರು ತಮ್ಮ ಶಾಲೆಯ ಶಿಕ್ಷಕರಿಂದ ಪ್ರಭಾವಿತರಾಗಿರುತ್ತಾರೆ. ಇತ್ತೀಚಿಗಷ್ಟೆ ಕಂಪ್ಲಿ ಬಳಿಯ ತಿಮ್ಮಲಾಪುರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲೂ ಹೀಗಾಯಿತು. ಅಲ್ಲಿಗೆ ಶಿಕ್ಷಣ ಅಧಿಕಾರಿಗಳು ಬಂದಿದ್ದರು, ಪರಿವೀಕ್ಷಣೆಗೆಂದು. 6ನೇ ತರಗತಿಯ ವಿದ್ಯಾರ್ಥಿನಿ ರಂಜಿತಾಳಿಗೆ ಏನಾಗಬೇಕೆಂದು ಕೇಳಿದಾಗ ಆಕೆ ಮುಖ್ಯೋಪಾಧ್ಯಾಯಿನಿ ಆಗಬೇಕು ಎಂದುತ್ತರಿಸಿದಳು. ಮುಗ್ಧ ಬಾಲಕಿಯ ಆಸೆಯನ್ನು ಅಧಿಕಾರಿಗಳು ಕೂಡಲೆ ನೆರವೇರಿಸಿದರು. ಒಂದು ದಿನದ ಮಟ್ಟಿಗೆ ಓದುತ್ತಿರುವಾಗಲೇ ರಂಜಿತಾ ಮುಖ್ಯೋಪಾಧ್ಯಾಯಿನಿಯಾದಳು. ಶಿಕ್ಷಕರ ಮೀಟಿಂಗ್ ಕರೆದಳು. ವಿದ್ಯಾರ್ಥಿಗಳ ಕುಂದುಕೊರತೆಗಳನ್ನು ಆಲಿಸಿದಳು. ತುಂಬಾ ಸಮಯದಿಂದ ಪರಿಹಾರ ಕಾಣದಿದ್ದ ಸಮಸ್ಯೆಗಳಿಗೆ ಪರಿಹಾರವನ್ನು ಅಧಿಕಾರಿಗಳಿಗೆ ಪತ್ರ ಮುಖೇನ ತಿಳಿಸಿದಳು. ರಂಜಿತಾ ಈಗ ಮುಖ್ಯೋಪಾಧ್ಯಾಯಿನಿ ಆಗಲೇಬೇಕೆಂದು ಪಣ ತೊಟ್ಟಿದ್ದಾಳೆ. ಅವಳಾಸೆ ಈಡೇರಲಿ. ಬದುಕು ಅದಲು ಬದಲು ಮಾಡಿಕೊಳ್ಳುವ ವಿಷಯವಾಗಿ ತೆರೆ ಕಂಡಿರುವ, ನೀವು ನೋಡಲೇಬೇಕಾದ 3 ಸಿನಿಮಾಗಳು. ನಾಯಕ್- ಹಾಲಿ ಮುಖ್ಯಮಂತ್ರಿಯ ಸವಾಲನ್ನು ಸ್ವೀಕರಿಸುವ ಶ್ರೀಸಾಮಾನ್ಯನೊಬ್ಬ ಒಂದು ದಿನದ ಮಟ್ಟಿಗೆ ರಾಜ್ಯ ಮುಖ್ಯಮಂತ್ರಿಯಾಗಿ ಕ್ರಾಂತಿಕಾರಕ ನಿಲುವುಗಳನ್ನು ಕೈಗೊಳ್ಳುತ್ತಾನೆ. ಎರಡು ನಕ್ಷತ್ರಗಳು – ಅವಳಿ ಜವಳಿಯಂತಿರುವ ರಾಜಕುಮಾರ ಮತ್ತು ಬಡ ಹುಡುಗರು ಅದೃಷ್ಟವಶಾತ್ ಸಂಧಿಸಿ, ಒಬ್ಬರು ಇನ್ನೊಬ್ಬರ ವೇಷ ಧರಿಸುತ್ತಾರೆ. ಟ್ರೇಡಿಂಗ್ ಪ್ಲೇಸಸ್- ಶ್ರೀಮಂತ ಸ್ಟಾಕ್ ಮಾರ್ಕೆಟ್ ಬ್ರೋಕರ್ ಒಬ್ಬ ತನ್ನ ಬದುಕನ್ನು ರಸ್ತೆ ಬದಿ ಸಿಕ್ಕ ನಿರ್ಗತಿಕ ಕಳ್ಳನೊಬ್ಬನೊಂದಿಗೆ ತಾತ್ಕಾಲಿಕವಾಗಿ ಬದಲಾಯಿಸಿಕೊಳ್ಳುತ್ತಾನೆ. ಈಗ ಕಳ್ಳನ ಬದುಕು ಶ್ರೀಮಂತನದು. ಐಷಾರಾಮದ ಬದುಕು ಕಳ್ಳನದು. ನೋಡಿ ಮಜಾ! ಹರ್ಷವರ್ಧನ್ ಸುಳ್ಯ