Advertisement

ಏಕ್‌ ದೇಶ್‌ ಮೆ, ದೋ ನಿಶಾನ್‌ ನಹೀ ಚಲೇಗಾ

12:55 AM Aug 06, 2019 | Team Udayavani |

ಜಮ್ಮು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನವನ್ನು ಪ್ರಧಾನಿ ಮೋದಿ ನೇತೃತ್ವದ ಭಾರತೀಯ ಜನತಾ ಪಕ್ಷದ ಸರಕಾರ ರದ್ದು ಮಾಡಿದೆ. ದೇಶಾದ್ಯಂತ ಬಿಜೆಪಿ ಕಾರ್ಯಕರ್ತರು ಸಂಭ್ರಮದಲ್ಲಿ ಮುಳುಗಿ ದ್ದಾರೆ. ಇದಕ್ಕೆ ಕಾರಣವೂ ಇದೆ. ಜಮ್ಮು-ಕಾಶ್ಮೀರಕ್ಕೂ ಬಿಜೆಪಿಗೂ ಎಂದೂ ಮರೆಯಲಾಗದ ಅವಿಚ್ಛಿನ್ನವಾದ ಬಾಂಧವ್ಯ. ಇದು ಶುರುವಾಗಿದ್ದು ಬಿಜೆಪಿಯ ಮೂಲ ಪುರುಷ ಡಾ| ಶ್ಯಾಮ ಪ್ರಸಾದ್‌ ಮುಖರ್ಜಿ ಬಲಿದಾನದಿಂದ.

Advertisement

ಏಕ್‌ ದೇಶ್‌ ಮೆ ದೋ ವಿಧಾನ್‌ ನಹೀ ಚಲೇಗಾ ಎಂಬ ಅವರ ಘೋಷಣೆ ಜಮ್ಮುಕಾಶ್ಮೀರದಲ್ಲಿ ಆಗ ಜೋರು ಧ್ವನಿಯಲ್ಲಿ ಕೇಳಿ ಬರುತಿತ್ತು. ವಿಶೇಷ ಸ್ಥಾನಮಾನವನ್ನು ಬಲವಾಗಿ ವಿರೋಧಿ ಸುತ್ತಿದ್ದ ಜಮ್ಮುವಿನ ಜನತೆ ಇದನ್ನೇ ಘೋಷವಾಕ್ಯವನ್ನಾಗಿ ಮಾಡಿಕೊಂಡಿದ್ದರು.

ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಬಾರದು, ಕನಿಷ್ಠ ಪಕ್ಷ ಜಮ್ಮು ವನ್ನಾದರೂ ಅದರಿಂದ ಹೊರಗಿಡ ಬೇಕೆಂದು ಮುಖರ್ಜಿ ಹೋರಾಟ ನಡೆಸಿದ್ದರು. ಅದಕ್ಕಾಗಿಯೇ ಅವರು ಮೇ 8, 1953ರಲ್ಲಿ ದಿಲ್ಲಿಯಿಂದ ಶ್ರೀ ನಗರಕ್ಕೆ ತೆರಳಿ ಭಾರೀ ಪ್ರತಿಭಟನೆ ನಡೆಸಿದ್ದರು. ರಾಜ್ಯ ಸರಕಾರದ ನಿರ್ದೇಶನ ವಿರೋಧಿಸಿ ಪ್ರತಿಭಟನೆ ನಡೆಸಿದ್ದರಿಂದ ಮೇ 11ರಂದು ಅವರನ್ನು ಬಂಧಿಸಲಾ ಯಿತು. ಜೂ.22ರಂದು ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದರು.

ಕಾಶ್ಮೀರಕ್ಕಾಗಿ ಮುಖರ್ಜಿ ಹೋರಾಟ: ಮೊದಲ ಬಾರಿ ನೆಹರೂ ಸರಕಾರ ಅಧಿಕಾರಕ್ಕೆ ಬಂದಾಗ ಡಾ| ಶ್ಯಾಮಾಪ್ರಸಾದ್‌ ಮುಖರ್ಜಿ, ಆ ಸರಕಾರದ ಸಂಪುಟ ಸದಸ್ಯರಾಗಿದ್ದರು. ಮುಂದೆ ನೆಹರೂ ಜತೆಗೆ ತೀವ್ರ ಭಿನ್ನಾಭಿಪ್ರಾಯ ಉಂಟಾಯಿತು. ಜಮ್ಮು ಕಾಶ್ಮೀರ ಮತ್ತಿತರ ಸಂಗತಿಗಳಿಗೆ ಸಂಬಂಧಿಸಿ ದಂತೆ ಇಬ್ಬರೂ ತೀವ್ರ ವಿರುದ್ಧ ನಿಲುವು ಹೊಂದಿದ್ದರು. ಕಡೆಗೆ ಕಾಂಗ್ರೆಸ್ಸನ್ನು ತೊರೆದು, ಜನಸಂಘವನ್ನು ಕಟ್ಟಿದರು. 1952ರ ಚುನಾವಣೆಯಲ್ಲಿ ಜನಸಂಘಕ್ಕೆ 3 ಲೋಕಸಭಾ ಸ್ಥಾನ ಗೆಲ್ಲಲು ಮಾತ್ರ ಸಾಧ್ಯವಾಯಿತು.

ಇದೇ ಸಮಯದಲ್ಲಿ ಕಾಶ್ಮೀರ ವಿವಾದ ತಾರಕಕ್ಕೇರಿತ್ತು. ಕಾಶ್ಮೀರಕ್ಕೆ ವಿಶೇಷ ಸ್ಥಾನ ಮಾನ ನೀಡಲು ಕೇಂದ್ರ ಸರಕಾರ ಬಯಸಿ ದ್ದರೂ ಅದಕ್ಕೂ ಹೆಚ್ಚಿನ ಅಧಿಕಾರವನ್ನು ಕಾಶ್ಮೀರ ನಾಯಕ ಶೇಖ್‌ ಅಬ್ದುಲ್ಲಾ ಬಯಸಿದ್ದರು. ಸರ್ವೋಚ್ಚ ನ್ಯಾಯಾಲಯದ ಆದೇಶಕ್ಕೂ ಜಮ್ಮು ಕಾಶ್ಮೀರದ ಮೇಲೆ ನಿಯಂತ್ರಣವಿರಬಾರದು ಎನ್ನುವುದು ಅವರ ಇಚ್ಛೆಯಾಗಿತ್ತು.

Advertisement

ಅದಾಗಲೇ ಕಾಶ್ಮೀರಕ್ಕೆ ಗರಿಷ್ಠ ಅಧಿಕಾರ ನೀಡಲಾಗಿತ್ತು. ಭಾರತದ ತ್ರಿವರ್ಣ ಧ್ವಜದೊಂದಿಗೆ ಕಾಶ್ಮೀರದ್ದೇ ಪ್ರತ್ಯೇಕ ಧ್ವಜ ಹೊಂದಲು ಅವಕಾಶವಿತ್ತು. ಅಲ್ಲಿ ಭೂಮಿ ಖರೀದಿಸಲು ದೇಶದ ಉಳಿದ ಭಾಗದ ಜನರಿಗೆ ಅವಕಾಶವಿರಲಿಲ್ಲ. ಕಾಶ್ಮೀರದಲ್ಲಿ ತುರ್ತು ಪರಿಸ್ಥಿತಿ ಉಂಟಾದರೆ ಅಲ್ಲಿನ ರಾಜ್ಯ ಸರಕಾರದ ಅನುಮತಿಯಿಲ್ಲದೇ ಕೇಂದ್ರ ಸರಕಾರ ಸೇನೆ ಕಳುಹಿಸಲು ಸಾಧ್ಯವಿರಲಿಲ್ಲ. ಇವೆಲ್ಲ ಸಾಲುವುದಿಲ್ಲ ಎಂದು ಶೇಖ್‌ ಅಬ್ದುಲ್ಲಾ ಹಠ ಹಿಡಿದಿದ್ದರು. ಇದನ್ನು ನೆಹರೂ ಸರಕಾರ ಮಾನ್ಯ ಮಾಡಿತು. ಇಲ್ಲಿ ಮುಖರ್ಜಿಗೂ ನೆಹರೂಗೂ ತೀವ್ರ ತಿಕ್ಕಾಟ ಶುರುವಾಯಿತು.

ಜಮ್ಮುವಿನಲ್ಲಿ ಹೋರಾಟ: ಆಗ ಜಮ್ಮುಕಾಶ್ಮೀರದ ಸರಕಾರದ ನೇತೃತ್ವ ಶೇಖ್‌ ಅಬ್ದುಲ್ಲಾ ಕೈಲಿದ್ದರೂ, ರಾಜ್ಯದ ಮುಖ್ಯಸ್ಥರಾಗಿ ಡೋಗ್ರಾ ಯುವರಾಜ ಕರಣ್‌ ಸಿಂಗ್‌ ಇದ್ದರು. ಅವರು 370ನೇ ವಿಧಿಗೆ ವಿರುದ್ಧವಾಗಿದ್ದರು. ಯುವರಾಜನಿಗೆ ಜಮ್ಮುವಿನ ಹಿಂದೂಗಳು ನಿಷ್ಠವಾಗಿದ್ದರು. ಅವರೆಲ್ಲ ಜಮ್ಮುಕಾಶ್ಮೀರಕ್ಕೆ ಪ್ರತ್ಯೇಕ ಸ್ಥಾನಮಾನ ನೀಡುವುದನ್ನು ಬಲವಾಗಿ ವಿರೋಧಿಸುತ್ತಿದ್ದರು. ಅದಕ್ಕಾಗಿ ಪ್ರೇಮನಾಥ್‌ ಡೋಗ್ರಾ ನೇತೃತ್ವದಲ್ಲಿ ಪ್ರಜಾ ಪರಿಷದ್‌ ಆರಂಭವಾಗಿತ್ತು. ಜಮ್ಮುಕಾಶ್ಮೀರ ಭಾರತದ ಉಳಿದೆಲ್ಲ ರಾಜ್ಯ ಗಳಂತೆಯೇ ಇರಬೇಕು, ಪ್ರತ್ಯೇಕ ಸ್ಥಾನಮಾನ ಹೊಂದಬಾರದು ಎನ್ನುವುದು ಪ್ರಜಾ ಪರಿಷದ್‌ ವಾದವಾಗಿತ್ತು. ಇದರ ನಡುವೆ 1951ರಲ್ಲಿ ನಡೆದ ಚುನಾವಣೆಯಲ್ಲಿ ಶೇಖ್‌ ಅಬ್ದುಲ್ಲಾ ನಾಯಕತ್ವದ ನ್ಯಾಷನಲ್‌ ಕಾನ್ಫರೆನ್ಸ್‌ 75ಕ್ಕೆ 75 ಸ್ಥಾನಗಳನ್ನು ಜಯಿಸಿತು.

ಇನ್ನೊಂದು ಕಡೆ ಜಮ್ಮುವಿನಲ್ಲಿ ವಿಶೇಷ ಸ್ಥಾನಮಾನದ ವಿರುದ್ಧ ಹೋರಾಟ ಮುಂದುವರಿದಿತ್ತು. ಇದರ ಪರವಾಗಿ ಸಂಸತ್ತಿನಲ್ಲಿ ಶ್ಯಾಮಾಪ್ರಸಾದ್‌ ಮುಖರ್ಜಿ ಧ್ವನಿಯೆತ್ತಿದರು. ಶೇಖ್‌ ಅಬ್ದುಲ್ಲಾರನ್ನು ರಾಜರ ರಾಜ ಮಾಡಿದ್ದು ಯಾರು ಎಂದು ಕಟುವಾಗಿ ಪ್ರಶ್ನಿಸಿದರು. ಇದಕ್ಕೆ ನೆಹರೂ ಸರಕಾರ ಮಣಿಯದಿ ದ್ದಾಗ, ಹೋರಾಟವನ್ನು ಮುಖರ್ಜಿ ದಿಲ್ಲಿಯ ಬೀದಿಬೀದಿಗೆ ಹಬ್ಬಿಸಿದರು. ಪ್ರತಿಭಟನೆ ತೀವ್ರವಾಗಿ 1953 ಏಪ್ರಿಲ್‌ನಲ್ಲಿ 1300 ಪ್ರತಿಭಟನಾಕಾರರನ್ನು ಬಂಧಿಸಲಾಯಿತು. ಮೇ 8ರಂದು ಮುಖರ್ಜಿಯವರು ಶ್ರೀನಗರಕ್ಕೆ ಹೊರಟರು.

ಮೇ 11ರಂದು ಬಂಧನಕ್ಕೊಳಗಾದ ಮುಖರ್ಜಿ ಅಲ್ಲಿನ ಕಾರಾಗೃಹದಲ್ಲಿ ಹಿಂದು ತತ್ವಜ್ಞಾನವನ್ನು ಓದುತ್ತಿದ್ದರು. ಪತ್ರಗಳನ್ನು ಬರೆಯುತ್ತಿದ್ದರು. ಜೂನ್‌ ಆರಂಭದಷ್ಟೊತ್ತಿಗೆ ಮುಖರ್ಜಿ ತನಗೆ ಜ್ವರ ಬಂದಿದೆ ಎಂದು ತಿಳಿಸಿದರು. ಮುಂದೆ ಕಾಲುನೋವಿನ ಬಗ್ಗೆ ಮಾಹಿತಿ ನೀಡಿದರು. ಜೂ. 22ರಂದು ದಿಢೀರನೆ ಹೃದಯಾಘಾತ ಕ್ಕೊಳಗಾಗಿ ಮರಣ ಹೊಂದಿದರು. ಅವರ ದೇಹವನ್ನು ಕೋಲ್ಕತಾಗೆ ಕಳುಹಿಸಿಕೊಡಲಾಯಿತು. ಸಾವಿರಾರು ಜನ ಅವರ ಪಾರ್ಥಿವ ಶರೀರವನ್ನು ಗೌರವದಿಂದ ಸ್ವಾಗತಿಸಿದರು. ಅಲ್ಲಿಂದ ಜನಸಂಘ ಬಲವರ್ಧನೆಯಾಗತೊಡಗಿತು. ಭಾರತೀಯ ಪಕ್ಷದ ಇಂದಿನ ಸ್ಥಿತಿಗೆ ಮುಖರ್ಜಿ ತಮ್ಮ ಹೋರಾಟಗಳ ಮೂಲಕ ಅಂದೇ ಬೀಜ ಬಿತ್ತಿದ್ದರು ಎನ್ನುವುದು ಲಕ್ಷಾಂತರ ಕಾರ್ಯಕರ್ತರ ನಂಬಿಕೆ.

ಕಾಂಗ್ರೆಸ್‌ನ ಮಾಜಿ ನಾಯಕ ಮುಖರ್ಜಿ!
ಬಂಗಾಳದ ವಕೀಲರಾಗಿ, ಶಿಕ್ಷಣತಜ್ಞರಾಗಿ ಹೆಸರು ಮಾಡಿದ
ಡಾ. ಶ್ಯಾಮಾಪ್ರಸಾದ್‌ ಮುಖರ್ಜಿಯ ತಂದೆಯೂ ಬಂಗಾಳದಲ್ಲಿ ಹೆಸರಾಂತ ನ್ಯಾಯಾಧೀಶರಾಗಿದ್ದರು. ಹೆಸರು ಸರ್‌ ಅಶುತೋಷ್‌ ಮುಖರ್ಜಿ. ಅವರು ಖ್ಯಾತ ಶಿಕ್ಷಣತಜ್ಞರೂ ಹೌದು. ಶ್ಯಾಮಾಪ್ರಸಾದ್‌ ಅವರು 1901, ಜು. 6ರಂದು ಕೋಲ್ಕತಾದಲ್ಲಿ ಜನಿಸಿದರು. ಅವರ ರಾಜಕೀಯ ಜೀವನ 1929ರಿಂದ ಆರಂಭವಾಯಿತು. ಬಂಗಾಳ ಶಾಸನ ಸಭೆಯ ಸದಸ್ಯರಾಗಿ ಕಾಂಗ್ರೆಸ್‌ ಪಕ್ಷದಿಂದ ಆಯ್ಕೆಯಾಗಿದ್ದರು. ನೆಹರೂ ನೇತೃತ್ವದಲ್ಲಿ ಮೊದಲ ಕೇಂದ್ರ ಸರಕಾರ ರಚನೆಯಾಗಿದ್ದಾಗ, 1947ರಿಂದ 1950ರವರೆಗೆ ಭಾರತದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.