Advertisement

ಏಕ್‌ ಚಿತ್ರ ಕಥಾ

10:08 AM Dec 07, 2019 | mahesh |

ಕನ್ನಡದಲ್ಲಿ ಈ ವಾರ ಮತ್ತೂಂದು “ಕಥಾ ಸಂಗಮ’ ತೆರೆಗೆ ಬರುತ್ತಿದೆ. “ಕಥಾ ಸಂಗಮ’ ಅಂದ್ರೆ ಕನ್ನಡ ಸಿನಿಪ್ರಿಯರಿಗೆ ಮೊದಲು ನೆನಪಿಗೆ ಬರುವ ಹೆಸರು ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್‌. 70ರ ದಶಕದಲ್ಲಿ ವಿನೂತನ ಪ್ರಯೋಗವಾಗಿ ತೆರೆಗೆ ಬಂದಿದ್ದ “ಕಥಾ ಸಂಗಮ’ ಇಂದಿಗೂ ಸಿನಿಪ್ರಿಯರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಇದೇ ಪ್ರಯೋಗವನ್ನು ಸ್ಫೂರ್ತಿಯಾಗಿ ಇಟ್ಟುಕೊಂಡು ನಿರ್ದೇಶಕ ರಿಷಭ್‌ ಶೆಟ್ಟಿ ಈ ವಾರ “ಕಥಾ ಸಂಗಮ’ ಎನ್ನುವ ಹೆಸರಿನಲ್ಲಿ ಅಂಥದ್ದೇ ಮತ್ತೂಂದು ಪ್ರಯೋಗವನ್ನು ಪ್ರೇಕ್ಷಕರ ಮುಂದೆ ತರುತ್ತಿದ್ದಾರೆ.

Advertisement

ಹಾಗಾದರೆ ಅಂದು ಬಂದ “ಕಥಾ ಸಂಗಮಕ್ಕೂ’ ಇಂದು ಬರುತ್ತಿರುವ “ಕಥಾ ಸಂಗಮ’ಕ್ಕೂ ಏನು ಸಂಬಂಧ? ಎರಡಕ್ಕೂ ಇರುವ ಹೋಲಿಕೆ, ಎರಡರಲ್ಲೂ ಇರುವ ವಿಭಿನ್ನತೆಗಳು ಏನು ಎನ್ನುವುದರ ಬಗ್ಗೆ ರಿಷಭ್‌ ಶೆಟ್ಟಿ ಮಾತನಾಡಿದ್ದಾರೆ.

“1976ರಲ್ಲಿ ತೆರೆಗೆ ಬಂದ “ಕಥಾ ಸಂಗಮ’ ಪುಟ್ಟಣ್ಣ ಕಣಗಾಲರು ಮಾಡಿದ ಒಂದು ವಿಭಿನ್ನ ಪ್ರಯೋಗ. ಮೂರು ಕಿರು ಕಥೆಗಳನ್ನು ಜೋಡಿಸಿ, ಪುಟ್ಟಣ್ಣ ಅದನ್ನು ಒಂದು ಚಿತ್ರವಾಗಿ ತೆರೆಮೇಲೆ ತಂದಿದ್ದರು. ಅದು ಕನ್ನಡ ಚಿತ್ರರಂಗದಲ್ಲಿ ಆ ಚಿತ್ರ ಇಂದಿಗೂ ಒಂದು ದಾಖಲೆಯಾಗಿ ಉಳಿದಿದೆ. ನಮ್ಮ ಚಿತ್ರದಲ್ಲೂ ಅಂಥದ್ದೇ ಒಂದು ಪ್ರಯೋಗವಿದೆ. ಇಲ್ಲಿ ಏಳು ವಿಭಿನ್ನ ಕಥೆಗಳನ್ನು ಜೋಡಿಸಿ ನಾವು ಒಂದು ಚಿತ್ರವಾಗಿ ತೆರೆಮೇಲೆ ತರುತ್ತಿದ್ದೇವೆ. ಈ ಪ್ರಯೋಗಕ್ಕೆ ಪುಟ್ಟಣ್ಣ ಕಣಗಾಲರು ಪ್ರೇರಣೆ ಹಾಗಾಗಿ ಅವರ “ಕಥಾ ಸಂಗಮ’ ಚಿತ್ರದ ಹೆಸರನ್ನೇ ನಮ್ಮ ಚಿತ್ರಕ್ಕೂ ಇಟ್ಟುಕೊಂಡಿದ್ದೇವೆ. ಈ ಮೂಲಕ ಪುಟ್ಟಣ್ಣ ಅವರನ್ನು ಸ್ಮರಿಸುವ, ಗೌರವಿಸುವ ಚಿಕ್ಕ ಪ್ರಯತ್ನ ಮಾಡಿದ್ದೇವೆ. ಹಾಗಾಗಿ ಈ ಚಿತ್ರವನ್ನು ಪುಟ್ಟಣ್ಣ ಕಣಗಾಲರಿಗೆ ಅರ್ಪಣೆ ಮಾಡುತ್ತಿದ್ದೇವೆ’ ಎನ್ನುತ್ತಾರೆ ರಿಷಭ್‌ ಶೆಟ್ಟಿ.

ಇನ್ನು ಈ “ಕಥಾ ಸಂಗಮ’ ಚಿತ್ರದ ಏಳು ಕಥೆಗಳು ಏಳು ಥರದಲ್ಲಿ ಮೂಡಿಬಂದಿದ್ದು, ಏಳು ಜನ ನವ ನಿರ್ದೇಶಕರು ಚಿತ್ರದಲ್ಲಿ ಬರುವ ಏಳು ವಿಭಿನ್ನ ಕಥೆಗಳಿಗೆ ಆ್ಯಕ್ಷನ್‌-ಕಟ್‌ ಹೇಳಿದ್ದಾರೆ. “ಏಳು ಜನ ಛಾಯಾಗ್ರಾಹಕರು, ಏಳು ಜನ ಸಂಗೀತ ನಿರ್ದೇಶಕರು ಸೇರಿದಂತೆ, ಏಳು ತಂಡಗಳು ಒಂದುಗೂಡಿ ಒಂದು ಚಿತ್ರವನ್ನು ಮಾಡಿರುವುದು ವಿಶೇಷ. ಲವ್‌, ಸಸ್ಪೆನ್ಸ್‌, ಥ್ರಿಲ್ಲರ್‌, ಕ್ರೈಂ ಹೀಗೆ ಎಲ್ಲ ಜಾನರ್‌ನ ಕಥೆಗಳೂ ಇದರಲ್ಲಿದೆ. ಒಂದೇ ಮಾತಿನಲ್ಲಿ ಹೇಳುವುದಾದರೆ, ಹೆಸರೇ ಹೇಳುವಂತೆ, ವಿಭಿನ್ನ ಕಥೆಗಳ ಸಂಗಮ ಈ “ಕಥಾ ಸಂಗಮ’ ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ಇದೊಂದು ವಿಭಿನ್ನ ಪ್ರಯೋಗ. ನಮ್ಮ ಪ್ರಯತ್ನ ಪ್ರೇಕ್ಷಕರಿಗೂ ಇಷ್ಟವಾಗುವುದೆಂಬ ನಂಬಿಕೆ ಇದೆ’ ಎನ್ನುತ್ತಾರೆ ರಿಷಭ್‌ ಶೆಟ್ಟಿ.

“ರಿಷಭ್‌ ಶೆಟ್ಟಿ ಫಿಲಂಸ್‌’ ಹಾಗೂ “ಶ್ರೀದೇವಿ ಎಂಟರ್‌ಟೈನರ್’ ಲಾಂಛನದಲ್ಲಿ ರಿಷಭ್‌ ಶೆಟ್ಟಿ, ಕೆ.ಹೆಚ್‌.ಪ್ರಕಾಶ್‌ ಹಾಗೂ ಪ್ರದೀಪ್‌ ಎನ್‌.ಆರ್‌ ಜಂಟಿಯಾಗಿ “ಕಥಾ ಸಂಗಮ’ವನ್ನು ನಿರ್ಮಿಸಿದ್ದಾರೆ. ರಿಷಭ್‌ ಶೆಟ್ಟಿ, ಹರಿಪ್ರಿಯಾ, ರಾಜ್‌ ಬಿ. ಶೆಟ್ಟಿ, ಪ್ರಮೋದ್‌ ಶೆಟ್ಟಿ, ಬಾಲಾಜಿ ಮನೋಹರ್‌, ಕಿಶೋರ್‌, ಯಜ್ಞಾ ಶೆಟ್ಟಿ, ಪ್ರಕಾಶ್‌ ಬೆಳವಾಡಿ ಮೊದಲಾದವರು

Advertisement

ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರ ಈ ವಾರ ರಾಜ್ಯಾದ್ಯಂತ ಸುಮಾರು 60ಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ತೆರೆ ಕಾಣುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next