Advertisement
ಈಗ ಮುಖ್ಯವಾಗಿ ಏಳುವ ಪ್ರಶ್ನೆಯೆಂದರೆ ಭೂಕಂಪಗಳು ಏಕೆ ಆಗುತ್ತವೆ ಎಂಬುದು. ಇದಕ್ಕೆ ಮೂಲಭೂತವಾಗಿ ತಿಳಿದುಕೊಳ್ಳಬೇಕಾದದ್ದೇನೆಂದರೆ ಭೂಮಿ ಜನಸಾಮಾನ್ಯರು ತಿಳಿಯುವಂತೆ ಒಂದು ಗಟ್ಟಿಯಾದ ಗೋಲಾಕಾರದ ಉಂಡೆಯಲ್ಲ. ಭೂಮಿ ಸುಮಾರು 40 ಕೆ.ಎಂ.ನಷ್ಟು ಮಂದದ ಭೂಚಿಪ್ಪುಗಳಿಂದ ಮಾಡಲ್ಪಟ್ಟಿದ್ದು. ಅದರ ಕೆಳಗೆ ಇನ್ನೂ ಮಂದದ ಮ್ಯಾಂಟಲ್ ಮತ್ತು ಕೋರ್ ಎಂಬ ಸ್ತರಗಳಿವೆ. ಒಂದು ಭೂಚಿಪ್ಪಿನೊಳಗೆ ಸ್ತರಭಂಗಗಳು, ಅಂದರೆ, ಮತ್ತೂಂದು ರೀತಿಯ ಕಡಿಮೆ ಆಳದ ಬಿರುಕುಗಳು ಉಂಟಾಗಿ, ಈ ಎಲ್ಲ ಬಿರುಕುಗಳ ಮಧ್ಯೆ, ಆಗಿಂದಾಗ್ಗೆ ಚಲನೆ ಮತ್ತು ಘರ್ಷಣೆ ಉಂಟಾಗಿ ಅದರ ಪ್ರತಿಫಲವಾಗಿ ಕಂಪನಗಳೇರ್ಪಟ್ಟು ಅವು ಎಲ್ಲ ದಿಕ್ಕಿನಲ್ಲಿ ಪಸರಿಸಲು ಆರಂಭಿಸುತ್ತವೆ. ಈ ರೀತಿಯ ಭೂಕಂಪದ ಅಲೆಗಳು ಭೂಮಿಯ ಮೇಲ್ಪದರವನ್ನು ತಲುಪಿದಾಗ ಅಲ್ಲಿರುವ ಎಲ್ಲವನ್ನು ಅಲುಗಾಡಿಸಿ ಮನೆಗಳು ನಡುಗಿ ಕುಸಿಯಲೂಬಹುದು. ಹೆಚ್ಚು ತೀಕ್ಷ್ಣತೆಯ ಕಂಪನಗಳು ಉಂಟಾದರೆ ಭೂಮಿಯ ಮೇಲೆ ಅದರ ಪರಿಣಾಮವೂ ಅಷ್ಟೇ ತೀಕ್ಷ್ಣವಾಗಿರುತ್ತದೆ. ಈ ಕಂಪನಗಳನ್ನು ರಿಕ್ಟರ್ ಮಾಪನದಲ್ಲಿ 1-10ರವರೆಗೆ ನಿಗದಿಪಡಿಸಿದ್ದು, 1ರ ತೀಕ್ಷ್ಣತೆಯ ಭೂಕಂಪ ನಮ್ಮ ಅರಿವಿಗೇ ಬರದಷ್ಟು ಕ್ಷೀಣವಾಗಿದ್ದರೆ, 10ರ ತೀಕ್ಷ್ಣತೆಯ ಭೂಕಂಪವು ಸರ್ವನಾಶಕ್ಕೆ ಕಾರಣವಾಗಬಲ್ಲದು.
Related Articles
Advertisement
ಇನ್ನು ಎರಡನೆಯ ಕಾರಣವನ್ನು ಅವಲೋಕಿ ಸುವು ದಾದರೆ, ಸದರಿ ಭೂಕಂಪ ಪ್ರದೇಶಗಳಲ್ಲಿ ಇರಬಹುದಾದ ಬೇರೆಯದೇ ರೀತಿಯ ಮತ್ತು ಕಡಿಮೆ ಆಳದ ಸ್ತರಭಂಗಗಳ ಇರುವಿಕೆ ಗೋಚರವಾಗುತ್ತದೆ. ಇವು ಮೊದಲನೆಯ ತರಹದ ಸ್ತರಭಂಗಗಳಲ್ಲ. ಇವು ಇತ್ತೀಚೆಗೆ ಅಂದರೆ, ಸುಮಾರು 2 ಕೋಟಿ ವರ್ಷಗಳ ಕಾಲಮಾನದಲ್ಲಿ ಭೂ ಪ್ರದೇಶಗಳ ಹೊಂದಾ ಣಿಕೆ (crustal adjustment) ಸಮಯದಲ್ಲಿ ಉಂಟಾ ದಂತಹವು. ಉದಾಹರಣೆಗೆ ಹೇಳುವುದಾದರೆ ಕಾಸರ ಗೋಡು-ಸುಳ್ಯ ನಡುವೆ ಅಂಥ ಒಂದು ಸ್ತರಭಂಗವನ್ನು ಗುರು ತಿ ಸಬಹುದಾಗಿದ್ದು, ಅದರ ಆಸುಪಾಸು ಪ್ರದೇಶಗಳಲ್ಲಿ ಸಣ್ಣ ಪ್ರಮಾಣದ ಭೂಕಂಪಗಳಾಗಿರುವ ಸಂಭವ ಹೆಚ್ಚು. ಇಂಥ ಅನೇಕ ಸ್ತರಭಂಗಗಳು ಕರ್ನಾಟಕದ ಉತ್ತರದಿಂದ ದಕ್ಷಿಣದ ವರೆಗೆ ಇದ್ದು, ಇವುಗಳ ಸರಿದಾಡುವಿಕೆಯಿಂದ ಉಂಟಾದ ಕಂಪನಗಳು ಭೂಮಿಯನ್ನು ಕಂಪಿಸುವಂತೆ ಮಾಡುತ್ತವೆ.
ಸ್ತರಭಂಗಗಳು ಏಕೆ ಚಲಿಸುತ್ತವೆ ಎಂಬುದನ್ನು ನೋಡು ವುದಾದರೆ, ಭೂಮಿಯೊಳಗೆ ನಿರಂತರ ಉಂಟಾಗುವ ಉಷ್ಣದ ಒತ್ತಡ ಭೂಮಿಯ ಆಂತರ್ಯದಲ್ಲಿ ತುಮುಲಕ್ಕೆ ಕಾರಣವಾಗುತ್ತದೆ. ಈ ರೀತಿಯ ಉಷ್ಣದ ಶಕ್ತಿಯೇ ಭೂಮಿಯೊಳಗಿನ ಎಲ್ಲ ಕ್ರಿಯೆಗಳಿಗೆ ಮೂಲ ಕಾರಣ. ಭೂಮಿಯ ಒಳಗೆ ಉಂಟಾಗುವ ಶಕ್ತಿ ಹೆಚ್ಚಾಗುತ್ತಲೇ ಹೋಗಿ, ಒಂದು ಹಂತದಲ್ಲಿ ಸ್ಫೋಟಿಸಿ ಸ್ತರಭಂಗಗಳ ಚಲನೆಗೆ ಕಾರಣವಾಗುತ್ತದೆ. ಆ ಕ್ರೋಡೀಕರಣಗೊಂಡ ಶಕ್ತಿ ಕಂಪನಗಳ ಮೂಲಕ ಲಯವಾಗಿ, ಸ್ತರಭಂಗಗಳು ಸ್ಥಿರವಾದಾಗ ಮತ್ತೆ ಶಕ್ತಿಯ ಒತ್ತಡ ಶೇಖರಣೆಯಾಗುತ್ತಲೇ ಹೋಗಿ ಅದು ಸಂದಿಗ್ಧ(critical) ಹಂತವನ್ನು ದಾಟಿದಾಗ ಮತ್ತೆ ಸ್ತರಭಂಗ ಗಳು ಸಕ್ರಿಯವಾಗಿ ಚಲನೆಗೊಂಡು ಘರ್ಷಣೆಗೊಂಡು ಮತ್ತೆ ಭೂಕಂಪವಾಗುತ್ತದೆ. ಹಾಗಾಗಿಯೇ ಭೂಕಂಪಗಳು ಒಂದು ಕಾಲಾವಧಿಯಲ್ಲಿ ಸಂಭವಿಸುತ್ತವೆ. ಅಂದರೆ ಅದು ಒಂದು ವರ್ಷದ ಅವಧಿಯಲ್ಲಿ ಅಥವಾ ಹಲವಾರು ವರ್ಷಗಳ ಅವಧಿಯ ಅಂತರದಲ್ಲಿ ಸಂಭವಿಸಬಹುದು. ಒತ್ತಡದ ಕ್ರೋಡೀಕರಣ ಮತ್ತು ಶಿಲೆಗಳ ಸಾಮರ್ಥ್ಯದ ಮೇಲೆ ಈ ಕಾಲಾವಧಿ ನಿರ್ಧಾರವಾಗಬಹುದು. ಆದರೆ, ಅದನ್ನು ನಿರ್ದಿಷ್ಟವಾಗಿ ಅಳೆಯುವ ಮಾನದಂಡ ಭೂವಿಜ್ಞಾನಿಗಳಿಗೆ ಇನ್ನೂ ಸಿದ್ಧಿಸಿಲ್ಲ.
ಇನ್ನು ಮುಖ್ಯವಾಗಿ ಭೂಕಂಪಗಳನ್ನು ಮುಂಚೆಯೇ ತಿಳಿಯಬಹುದೇ ಎಂಬುದು. ಭೂಕಂಪಗಳ ಬಗ್ಗೆ ಅಗಾಧ ಪ್ರಮಾಣದ ಅಧ್ಯಯನ, ಸಂಶೋಧನೆ ನಡೆದಿದ್ದರೂ, ಅವುಗಳು ಸಂಭವಿಸುವ ಸಮಯವನ್ನು ಹೇಳಲು ಇನ್ನೂ ಸಾಧ್ಯವಾಗಿಲ್ಲ. ಆದ್ದರಿಂದ ಭೂಕಂಪಗಳ ಬಗ್ಗೆ ಕರ್ನಾಟಕದಲ್ಲಿ ಹೆಚ್ಚಿನ ಅಧ್ಯಯನ ಆಗಬೇಕಾಗಿದೆ. ಅದೊಂದು ಸುದೀರ್ಘ ಪ್ರಕ್ರಿಯೆ, ಆದ್ದರಿಂದ ಭೂಕಂಪ ಪ್ರದೇಶಗಳಲ್ಲಿ ಜನರು ತಮ್ಮ ಮನೆಗಳನ್ನು ಸದೃಢವಾಗಿ ಕಟ್ಟಿಕೊಳ್ಳುವುದು ಒಂದಾದರೆ, ಇರುವ ಮನೆಗಳನ್ನು ಆದಷ್ಟು ಗಟ್ಟಿಮುಟ್ಟಾಗಿಸುವುದು ಅಷ್ಟೇ ಮುಖ್ಯ. ಅದಕ್ಕೆ ತಾಂತ್ರಿಕವಾಗಿ ದೃಢೀಕರಿಸಿದ ವಿನ್ಯಾಸಗಳೂ ಲಭ್ಯವಿವೆ. ಏಕೆಂದರೆ ಭೂಕಂಪವಾದಾಗ ಹೆಚ್ಚಿನ ಸಾವುನೋವು ಗಳು ಸಂಭವಿಸುವುದು ಮನೆಗಳು ಕುಸಿಯುವುದರಿಂದಲೇ.
ಭೂಕಂಪವಾದಾಗ ಜನರು ಆಚೆ ಇದ್ದರೆ, ಭೂಮಿ ನಡುಗಿ ದರೂ, ಅವರಿಗೆ ಏನೂ ಆಗುವುದಿಲ್ಲ. ಆದ್ದರಿಂದ ಭೂಕಂಪ ಪೀಡಿತ ಪ್ರದೇಶಗಳಲ್ಲಿ ಜನರು ಸುರಕ್ಷತಾ ಕ್ರಮಗಳ ಬಗ್ಗೆ ಜಾಗೃತರಾಗಿರುವುದು ಬಹಳ ಮುಖ್ಯ. ಆಗ ಭೂಕಂಪನಗಳೆಂಬ ನೈಸರ್ಗಿಕ ವಿಕೋಪಗಳ ನಿರ್ವಹಣೆ ಸುಲಭ ವಾ ಗುತ್ತದೆ. ಈ ದಿಸೆಯಲ್ಲಿ ಸರಕಾರ ಕೂಡಲೇ ಭೂಕಂಪಗಳಾದ ಪ್ರದೇಶಗಳ ವಿವರವಾದ ಅಧ್ಯಯನವನ್ನು ಕೈಗೊಳ್ಳುವುದು ಬಹಳ ಮುಖ್ಯ. ಅಂಥ ಪ್ರದೇಶಗಳ ಜನರೂ ತಮ್ಮ ಸುರಕ್ಷತೆಯ ಬಗ್ಗೆ ಸದಾ ಜಾಗೃತರಾಗಿರಬೇಕು. ಈ ನಿಟ್ಟಿನಲ್ಲಿ ಸರಕಾರ ಅವರ ನೆರವಿಗೆ ನಿಲ್ಲುವುದು ಅಷ್ಟೇ ಮುಖ್ಯವಾಗುತ್ತದೆ.
– ಡಾ. ಬಿ.ಸಿ.ಪ್ರಭಾಕರ್, ಭೂವಿಜ್ಞಾನಿ