Advertisement

ಭೂಕಂಪನ ಆತಂಕ: ಸರಕಾರ ಈಗಲೇ ಎಚ್ಚೆತ್ತುಕೊಳ್ಳಲಿ

01:33 AM Jul 04, 2022 | Team Udayavani |

ಕೊಡಗು, ದಕ್ಷಿಣ ಕನ್ನ ಡ ಸೇರಿದಂತೆ ರಾಜ್ಯದ ವಿವಿಧೆಡೆ ಕಳೆದ ತಿಂಗಳ ಮೂರನೇ ವಾರದಿಂದಲೂ ಭೂಮಿ ಕಂಪಿಸುತ್ತಲೇ ಇದೆ. ಈ ಕಂಪನದ ಆತಂಕ ಇದುವರೆಗೂ ತಗ್ಗಿಲ್ಲ. ಕೊಡಗಿನ ಜನರಂತೂ ಜೀವಭಯದಿಂದಲೇ ಬದುಕುತ್ತಿದ್ದಾರೆ.

Advertisement

ಜೂ. 23ರಿಂದ ಈ ಕಂಪನ ಆರಂಭವಾಗಿದ್ದು, ಇದುವರೆಗೆ ಸುಮಾರು ಎಂಟಕ್ಕೂ ಹೆಚ್ಚು ಬಾರಿ ಭೂಮಿ ಕಂಪಿಸಿದೆ. ಇದು ಕೇವಲ ಕೊಡಗು ಜಿಲ್ಲೆಗೆ ಮಾತ್ರ ಅನುಭವವಾದದ್ದಲ್ಲ. ಇದರ ಜತೆಗೆ ಮೈಸೂರು, ಹಾಸನ ಜಿಲ್ಲೆಯ ಕೆಲವು ಭಾಗಗಳಿಗೂ ಇದರ ಅನುಭವ ಉಂಟಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಜೂ. 25ರಿಂದ ಈಚೆಗೆ ಎರಡು ಬಾರಿ ಕಂಪನದ ಅನುಭವವಾಗಿದೆ.

ಎಲ್ಲಕ್ಕಿಂತ ಪ್ರಮುಖವಾಗಿ ಕೊಡಗು ಜಿಲ್ಲೆಯಲ್ಲಿ ಹೆಚ್ಚು ಬಾರಿ ಭೂಮಿ ಕಂಪಿಸಿರುವುದು ಆತಂಕಕ್ಕೆ ಕಾರಣವಾಗಿದೆ. ಇಲ್ಲಿನ ರೇಂಜರ್‌ ಬ್ಲಾಕ್‌, ನೇಗಳ್ಳಿ, ಮಡಿಕೇರಿ ತಾಲೂಕಿನ ದೇವಸ್ತೂರು, ಕರಿಕೆ, ಚೆಂಬು, ಪೆರಾಜೆ, ಗೂನಡ್ಕ, ಸಂಪಾಜೆ ಸೇರಿದಂತೆ ಹಲವಡೆ ಕಂಪನವಾಗಿತ್ತು. ಪದೇ ಪದೆ ಭೂಕಂಪನದ ಅನುಭವವಾಗಿರು ವುದರಿಂದ ಬೆಂಗಳೂರಿನ ಭೂವಿಜ್ಞಾನಿ ತಜ್ಞರು ಕೊಡಗು ಜಿಲ್ಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ¨ªಾರೆ. ಇವರು, ಇದೊಂದು ಸಹಜ ಪ್ರಕ್ರಿಯೆಯಾಗಿದ್ದು, ಆತಂಕ ಪಡಬೇಕಾಗಿಲ್ಲ ಎಂಬ ಅಭಯವನ್ನೂ ನೀಡಿದ್ದಾರೆ. ಆದರೆ ಜನರ ಪಾಲಿಗೆ ಮಾತ್ರ ಕಂಪನವೊಂದು ಕೆಟ್ಟ ಕನಸಿನ ಅನುಭವವಾಗಿದೆ.

ಇದಕ್ಕೆ ಕಾರಣವೂ ಇದೆ. 2018ರಲ್ಲಿ ಕೊಡಗು ಜಿಲ್ಲೆಯಲ್ಲಿ ಮಳೆಯಿಂದ ಆದ ಅನಾಹುತದ ಬಗ್ಗೆ ಎಲ್ಲರಿಗೂ ಅರಿವು ಇದ್ದೇ ಇದೆ. ವಿಚಿತ್ರವೆಂದರೆ ಈ ಅನಾಹುತವಾಗುವವರೆಗೆ, ಜಿಲ್ಲೆಯ ಕೆಲವು ಭಾಗಗಳಲ್ಲಿ ಇಂಥದ್ದೇ ಕಂಪನದ ಅನುಭವವಾಗಿತ್ತು. ಆಗ ಕಂಪನದ ಬಗ್ಗೆ ಜನ ಅಷ್ಟೇನೂ ಭಯಬಿದ್ದಿರಲಿಲ್ಲ. ಆದರೆ ಅನಂತರದಲ್ಲಿ ಬಿದ್ದ ಭಾರೀ ಮಳೆಯಿಂದಾಗಿ ಭಾರೀ ಭೂಕುಸಿತಗಳು ಸಂಭವಿಸಿ ಅಸಂಖ್ಯಾಕ ಮನೆಗಳು ಬಿದ್ದುಹೋಗಿದ್ದವು. ಹಲವಾರು ಮಂದಿ ಸಾವನ್ನಪ್ಪಿದ್ದರು. ತಮ್ಮ ಹೊಲ, ಮನೆಗಳೆಲ್ಲ ಭೂಮಿ ಪಾಲಾಗಿದ್ದವು. ಈಗಲೂ ಕೊಡಗು ಜನರಲ್ಲಿ ಇದೇ ಭಯ ಇದೆ. 2018ರಂತೆಯೇ ಮತ್ತೆ ಆಗಬಹುದೇ ಎಂಬ ಆತಂಕವೂ ಎದುರಾಗಿದೆ.

ಈ ಎಲ್ಲ ಅಂಶಗಳನ್ನು ಗಮನದಲ್ಲಿ ಇರಿಸಿಕೊಂಡು, ರಾಜ್ಯ ಸರಕಾರ ಜನರಿಗೆ ಅಭಯ ನೀಡುವ ಕೆಲಸ ಮಾಡಬೇಕು. ಇದು ಕೇವಲ ಕೊಡಗು ಜಿಲ್ಲೆಗೆ ಮಾತ್ರ ಅನ್ವಯವಾಗುವುದಿಲ್ಲ. ಈಗ ಎಲ್ಲೆಲ್ಲಿ ಕಂಪನದ ಅನುಭವವಾಗಿದೆಯೋ ಅಲ್ಲಿ ಸೂಕ್ತ ರೀತಿಯ ಕ್ರಮ ಕೈಗೊಳ್ಳಬೇಕು. ಅಂದರೆ ಭೂಕಂಪನವಾಗಿರುವ ಸ್ಥಳಗಳಲ್ಲಿರುವ ಜನರನ್ನು ಬೇರೆಡೆಗೆ ಸ್ಥಳಾಂತರಿಸುವ ಕೆಲಸವನ್ನು ಮಾಡಬೇಕಾಗಿದೆ. ಜತೆಗೆ ಭೂ ವಿಜ್ಞಾನಿಗಳಿಂದ ಪರೀಕ್ಷೆ ನಡೆಸಿ, ಮಣ್ಣು ಸಡಿಲವಾಗುತ್ತಿದೆಯೇ ಎಂಬ ಬಗ್ಗೆಯೂ ಪರಿಶೀಲನೆ ನಡೆಸಬೇಕು.

Advertisement

ಈಗಾಗಲೇ ಮಡಿಕೇರಿ ಸುತ್ತಮುತ್ತ ಭಾರೀ ಮಳೆಯಾಗುತ್ತಿದ್ದು, ಕಂಪನದ ಜತೆಗೆ ಇದೂ ಜನರನ್ನು ಆತಂಕಕ್ಕೀಡುಮಾಡಿದೆ. ಕಾಲ ಮೀರಿದ ಮೇಲೆ ಕ್ರಮಕ್ಕೆ ಮುಂದಾಗುವುದಕ್ಕಿಂತ, ಈಗಲೇ ಎಚ್ಚೆತ್ತು ಇಲ್ಲಿನ ಸ್ಥಿತಿ ಅವಲೋಕಿಸಿದರೆ ಉತ್ತಮ. ಇದರಿಂದ ಅಲ್ಲಿನ ಜನರಿಗೆ ಒಂದಷ್ಟು ನಿರ್ಲಿಪ್ತತೆಯಾದರೂ ಸಿಕ್ಕಂತೆ ಆಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next