ಲಂಡನ್: ಪ್ರತಿಯೊಂದು ಅಂತಾರಾಷ್ಟ್ರೀಯ ಪಂದ್ಯದ ಆರಂಭಕ್ಕೂ ಮುನ್ನ ಲಾರ್ಡ್ಸ್ ಸ್ಟೇಡಿಯಂನಲ್ಲಿ 5 ನಿಮಿಷಗಳ ಕಾಲ ಗಂಟೆ ಬಾರಿಸುವ ಸಂಪ್ರದಾಯವೊಂದನ್ನು ಪಾಲಿಸಿಕೊಂಡು ಬರಲಾಗುತ್ತಿದೆ. ಇತ್ತಂಡಗಳ ಮಾಜಿ ಕ್ರಿಕೆಟಿಗರೊಬ್ಬರಿಗೆ ಈ ಅವಕಾಶ ಸಿಗುತ್ತದೆ. ಟೆಸ್ಟ್ ಪಂದ್ಯವಾದರೆ 5 ದಿನ ಬೇರೆ ಬೇರೆ ಕ್ರಿಕೆಟಿಗರು ಗಂಟೆ ಬಾರಿಸಿ ಪಂದ್ಯದ ಆರಂಭವನ್ನು ಸಾರುತ್ತಾರೆ.
ಇದಕ್ಕೆ ರವಿವಾರದ ವನಿತಾ ವಿಶ್ವಕಪ್ ಕ್ರಿಕೆಟ್ ಪಂದ್ಯವೂ ಹೊರತಾಗಿರಲಿಲ್ಲ. ಇಲ್ಲಿ ಗಂಟೆ ಬಾರಿಸಿದ ಅದೃಷ್ಟಶಾಲಿ ಯಾರು ಗೊತ್ತೇ? ಇಂಗ್ಲೆಂಡಿನ ಅತ್ಯಂತ ಹಿರಿಯ ಮಾಜಿ ಆಟಗಾರ್ತಿ, “ಗ್ರ್ಯಾಂಡ್ ಓಲ್ಡ್ ವುಮೆನ್’ ಖ್ಯಾತಿಯ ಐಲಿನ್ ಆ್ಯಶ್. ಇವರ ವಯಸ್ಸು 106 ವರ್ಷ! ವಯಸ್ಸಿನಲ್ಲಿ “ಶತಕ’ ಬಾರಿಸಿದ ವಿಶ್ವದ ಮೊದಲ ಟೆಸ್ಟ್ ಆಟಗಾರ್ತಿ ಎಂಬುದು ಆ್ಯಶ್ ಪಾಲಿನ ಹೆಗ್ಗಳಿಕೆ. ಆ್ಯಶ್ ಗಂಟೆ ಬಾರಿಸುತ್ತಿದ್ದಂತೆಯೇ ಲಾರ್ಡ್ಸ್‌ನಲ್ಲಿ ನೆರೆದಿದ್ದ ಅಪಾರ ಸಂಖ್ಯೆಯ ವೀಕ್ಷಕರು ಭಾರೀ ಹರ್ಷೋದ್ಗಾರಗೈದರು.
ದ್ವಿತೀಯ ವಿಶ್ವ ಯುದ್ಧದ ಆಚೀಚಿನ ವರ್ಷಗಳಲ್ಲಿ ಇಂಗ್ಲೆಂಡ್ ಪರ 7 ಟೆಸ್ಟ್ ಪಂದ್ಯಗಳನ್ನಾಡಿದ ಹೆಗ್ಗಳಿಕೆ ಐಲಿನ್ ಆ್ಯಶ್ ಅವರದು. 1911ರ ಅಕ್ಟೋಬರ್ 30ರಂದು ನಾರ್ತ್ ಲಂಡನ್‌ನಲ್ಲಿ ಜನಿಸಿದ ಆ್ಯಶ್ 1937ರಲ್ಲಿ ಆಸ್ಟ್ರೇಲಿಯ ವಿರುದ್ಧ ನಾರ್ತಂಪ್ಟನ್‌ನಲ್ಲಿ ನಡೆದ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟಿಗೆ ಪಾದಾರ್ಪಣೆ ಮಾಡಿದ್ದರು. ಸ್ಪೆಷಲಿಸ್ಟ್ ಬೌಲರ್ ಆಗಿದ್ದ ಆ್ಯಶ್ ಆ ಋತುವಿನ ಎಲ್ಲ 3 ಟೆಸ್ಟ್‌ಗಳನ್ನಾಡಿ 10 ವಿಕೆಟ್ ಉರುಳಿಸಿದ್ದರು.
ಆದರೆ ಈ ಋತುವಿನ ಬಳಿಕ ಟೆಸ್ಟ್ ಪಂದ್ಯ ವೊಂದನ್ನು ಆಡಲು ಐಲಿನ್ ಆ್ಯಶ್ 12 ವರ್ಷ ಕಾಯ ಬೇಕಾಯಿತು. ಇದಕ್ಕೆ ಕಾರಣ ದ್ವಿತೀಯ ಮಹಾ ಯುದ್ಧ. 1949ರಲ್ಲಿ ಆಸ್ಟ್ರೇಲಿಯ ಮತ್ತು ನ್ಯೂಜಿಲ್ಯಾಂಡ್ ಪ್ರವಾಸಗೈದು 4 ಟೆಸ್ಟ್‌ಗಳನ್ನಾಡಿ ದರು. ಅದೇ ವರ್ಷ ಮಾರ್ಚ್‌ನಲ್ಲಿ ಆಕ್ಲೆಂಡ್‌ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಅಂತಿಮ ಟೆಸ್ಟ್ ಆಡಿದರು.
2011ರಲ್ಲಿ ನೂರು ವರ್ಷ ಪೂರ್ತಿಗೊಳಿಸಿದ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರ್ತಿ ಎನಿಸಿಕೊಂಡ ಆ್ಯಶ್‌ಗೆ ಅದೇ ವರ್ಷ ಎಂಸಿಸಿಯ ಆಜೀವ ಗೌರವ ಸದಸ್ಯತ್ವ ನೀಡಲಾಯಿತು. ಯೋಗ, ಹಿತಮಿತ ಆಹಾರ ಹಾಗೂ ದಿನಂಪ್ರತಿ 2 ಗ್ಲಾಸ್ ರೆಡ್ ವೈನ್ ಸೇವನೆಯೇ ತನ್ನ ದೀರ್ಘಾಯುಷ್ಯದ ಗುಟ್ಟು ಎಂದು ಆ್ಯಶ್ ತಮ್ಮ 104ನೇ ಜನ್ಮದಿನದಂದು ಹೇಳಿದ್ದರು.
ಐಲೀನ್ ಆ್ಯಶ್ ಲಾರ್ಡ್ಸ್‌ನಲ್ಲಿ ಗಂಟೆ ಹೊಡೆದ 4ನೇ ಇಂಗ್ಲೆಂಡ್ ಆಟಗಾರ್ತಿ. ಉಳಿದವರೆಂದರೆ ಕ್ಲೇರ್ ಕಾನರ್, ಚಾರ್ಲೋಟ್ ಎಡ್ವರ್ಡ್ಸ್ ಮತ್ತು ಕ್ಲೇರ್ ಟಯ್ಲರ್.