ಹುಬ್ಬಳ್ಳಿ: ಹೋಂ ವರ್ಕ್ ಮಾಡಿ ಶಿಕ್ಷಕಿಗೆ ತೋರಿಸಲೇಬೇಕೆಂದು ಹಠ ಹಿಡಿದ ಎಂಟು ವರ್ಷದ ಬಾಲಕನೊಬ್ಬ,ಅಂಗವಿಕಲ ತಾಯಿಯೊಂದಿಗೆ ಸುಮಾರು 40 ಕಿ.ಮೀ.ದೂರದ ಹುಬ್ಬಳ್ಳಿಗೆ ಆಗಮಿಸಿ, ಶಿಕ್ಷಕಿಗೆ ಹೋಮ್ ವರ್ಕ್ ತೋರಿಸಿದ ಘಟನೆ ನಡೆದಿದೆ.
ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಯರೇಬೂದಿಹಾಳದ ಪವನ ಕಂಠಿ ಎಂಬ ಬಾಲಕ, ಹೋಂ ವರ್ಕ್ ತೋರಿಸುವುದಕ್ಕಾಗಿಯೇ 40 ಕಿ.ಮೀ. ಪ್ರಯಾಣಿಸಿ ಶಿಕ್ಷಕರ ಮೆಚ್ಚುಗೆಗೆ ಪಾತ್ರನಾಗಿದ್ದು, ಜನರ ಗಮನ ಸೆಳೆದಿದ್ದಾನೆ.
ಬಾಲಕನ ತಂದೆ ತಾಯಿ ಕೂಲಿ ಕೆಲಸ ಮಾಡುತ್ತಿದ್ದಾರೆ. ಮಗನನ್ನು ಹುಬ್ಬಳ್ಳಿಯ ವಸತಿ ನಿಲಯದಲ್ಲಿ ಇರಿಸಿದ್ದು, ಸರಕಾರಿ ಪ್ರಾರ್ಥಮಿಕ ಶಾಲೆಯಲ್ಲಿ ಪವನ ವ್ಯಾಸಂಗ ಮಾಡುತ್ತಿದ್ದಾನೆ. ಕೋವಿಡ್ ಹಿನ್ನಲೆ ಶಾಲೆ ಬಂದ್ ಇರುವ ಕಾರಣ ಸದ್ಯ ತನ್ನ ತಾಯಿ ಜೊತೆ ಯರೇಬೂದಿಹಾಳದಲ್ಲಿ ವಾಸವಿದ್ದಾನೆ.
ಕಳೆದ ತಿಂಗಳು ತಾಯಿ ಜೊತೆಗೆ ಬಂದು ಟೀಚರ್ ಭೇಟಿಯಾಗಿದ್ದ ಪವನ್ ಒಂದು ತಿಂಗಳ ಹೋಂ ವರ್ಕ್ ಪಡೆದುಕೊಂಡು ಹೋಗಿದ್ದ. ಇದೀಗ ಮಾಡಿದ ಹೋಂ ವರ್ಕ್ ಶಿಕ್ಷಕರಿಗೆ ತೋರಿಸಬೇಕೆಂದು ಹಠ ಹಿಡಿದಿದ್ದರಿಂದ ತಾಯಿ ಪಾರ್ವತಿ ಮಗನನ್ನು ಹುಬ್ಬಳ್ಳಿಗೆ ಕರೆತಂದಿದ್ದಾರೆ.
ವರ್ಗ ಶಿಕ್ಷಕಿ ಅನುಸೂಯಾ ಸಜ್ಜನ್ ವಿದ್ಯಾರ್ಥಿಗೆ ಎಲ್ಲ ಮಾಹಿತಿ ನೀಡಿದ್ದು, ಹೋಂ ವರ್ಕ್ ಮಾಡಿರುವ ಪವನ ಶ್ರದ್ಧೆಗೆ ಶಿಕ್ಷಕಿ ಅನಸೂಯಾ ಸಜ್ಜನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪವನ ಕಂಠಿ ತುಂಬಾ ಬಡ ಕುಟುಂಬವಾಗಿದ್ದು ಅವರ ಬಳಿ ಮೊಬೈಲ್ ಸಹ ಇಲ್ಲದಿರುವುದರಿಂದ ಆನ್ ಲೈನ್ ಕ್ಲಾಸ್ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಬಾಲಕನ ಕಲಿಕೆ ಅಸಕ್ತಿ ನೋಡಿಕೊಂಡು ಶಿಕ್ಷಕಿ ಮತ್ತೆ ಹೋಂ ವರ್ಕ್ ಜೊತೆಗೆ ನೋಟ್ ಬುಕ್, ಪುಸ್ತಕ ನೀಡಿ ಕಳುಹಿಸಿ ಕೊಟ್ಟಿದ್ದಾರೆ.