ಒಂದೇ ಕಡೆ ಆರು ಬಲಿ: ಪಿರಿಯಾಪಟ್ಟಣ ತಾಲೂಕು ಕಸಬಾ ಹೋಬಳಿಗೆ ಸೇರಿದ ಹುಣಸವಾಡಿ ಗ್ರಾಮದಲ್ಲಿ ಸಿಡಿಲು ಬಡಿದು ಆರು ಮಂದಿ ಮೃತಪಟ್ಟಿದ್ದು, ಮೂವರು ಮಾರಣಾಂತಿಕವಾಗಿ ಗಾಯಗೊಂಡಿದ್ದಾರೆ. ಗ್ರಾಮದ ತಿಮ್ಮೇಗೌಡ(70), ಪುಟ್ಟೇಗೌಡ (60), ಸುವರ್ಣಮ್ಮ(50), ಸುದೀಪ್ (17), ಸುಜಯ್ (18) ಮತ್ತು ಉಮೇಶ್(23) ಮೃತಪಟ್ಟ ದುರ್ದೈವಿಗಳು. ಇದೇ ಗ್ರಾಮದ ಗಣೇಶ, ವಿಜಯ್ ಮತ್ತು ಮಾದೇಶ್ ತೀವ್ರವಾಗಿ ಗಾಯಗೊಂಡಿದ್ದು ಅವರನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
Advertisement
ಹುಣಸವಾಡಿ ಗ್ರಾಮದ ಇವರು ದನ ಮೇಯಿಸಲು ತೆರಳಿದ್ದರು. ಇದ್ದಕ್ಕಿದ್ದಂತೆ ಜೋರು ಮಳೆ ಬಂದಿದ್ದರಿಂದ ಹೊರ ವಲಯದಲ್ಲಿರುವ ದೊಡ್ಡಮ್ಮತಾಯಿ ದೇವಸ್ಥಾನದಲ್ಲಿ ಆಶ್ರಯ ಪಡೆದಿದ್ದರು. ಈ ವೇಳೆ ಬಡಿದ ಸಿಡಿಲಿನ ರಭಸಕ್ಕೆ ದೇವಸ್ಥಾನದೊಳಗಿದ್ದವರು ನೋಡ ನೋಡುತ್ತಲೇ ಮೃತಪಟ್ಟಿದ್ದಾರೆ. ಘಟನೆ ನಡೆದ ಸ್ಥಳದಿಂದ ಚೀರಾಟ ಕೇಳಿದ ಗ್ರಾಮಸ್ಥರು ದೇವಸ್ಥಾನದ ಬಳಿ ಧಾವಿಸಿದ್ದಾರೆ. ಅಷ್ಟರಲ್ಲಾಗಲೇ ಆರು ಮಂದಿ ಸಾವನ್ನಪ್ಪಿದ್ದು, ಗಾಯಗೊಂಡಿದ್ದ ಮೂವರನ್ನು ಖಾಸಗಿ ವಾಹನದಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ಕರೆತಂದಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆ ಸಲುವಾಗಿ ಮೈಸೂರಿಗೆ ಕರೆದುಕೊಂಡು ಹೋಗಲಾಗಿದೆ.
ಮೃತಪಟ್ಟವರ ಪೋಷಕರು ಹಾಗೂ ಸಾರ್ವಜನಿಕರು ಸಾವಿರಾರು ಸಂಖ್ಯೆಯಲ್ಲಿ ಪಟ್ಟಣದ ಶವಾಗಾರದ ಬಳಿ ನೆರೆದು, ಗೋಳಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು. ತಲಾ 5 ಲಕ್ಷ ರೂ. ಪರಿಹಾರ: ಮೃತಪಟ್ಟವರ ಕುಟುಂಬಗಳಿಗೆ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ತಲಾ 4 ಲಕ್ಷ ರೂ. ಹಾಗೂ ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ ತಲಾ 1 ಲಕ್ಷ ರೂ. ಪರಿಹಾರ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರು ಜಿಲ್ಲಾಧಿಕಾರಿ ರಂದೀಪ್ ಅವರಿಗೆ ಸೂಚಿಸಿದ್ದಾರೆ. ಇನ್ನು, ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ದುಮ್ಮಿಕೊಪ್ಪಲು ಗ್ರಾಮದ ರಾಜೇಗೌಡ (55) ಎಂಬುವರು ತಮ್ಮ ಜಮೀನಿನ ಬಳಿ ಹೋಗಿದ್ದಾಗ ಸಿಡಿಲು ಬಡಿದು ಸ್ಥಳದಲ್ಲೇ ಮೃತ ಪಟ್ಟಿದ್ದಾರೆ. ಅದೃಷ್ಟವಶಾತ್ ಸಮೀಪದಲ್ಲೇ ಇದ್ದ ಅವರ ಮಗ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಮಧ್ಯೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಜಟ್ಟೂರಿನಲ್ಲಿ ಮೈಸಪ್ಪ ಅನಂತಪ್ಪ ಮಾದರ(28) ಎಂಬ ರೈತ ಜಮೀನಿನಲ್ಲಿ ಕೆಲಸ ಮಾಡುವ ವೇಳೆ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ.
Related Articles
Advertisement
ಸುಳಿಗಾಳಿ ಕಾರಣಬೆಂಗಳೂರು ಸೇರಿ ರಾಜ್ಯಾದ್ಯಂತ ಗುರುವಾರ ಮಳೆ ಅಬ್ಬರಿಸಿದ್ದು, ಇನ್ನೂ ಮೂರ್‍ನಾಲ್ಕು ದಿನ ವರುಣನ ಆರ್ಭಟ ಮುಂದುವರಿ ಯುವ ಸಾಧ್ಯತೆ ಇದೆ. ಬಂಗಾಳಕೊಲ್ಲಿ, ಅರಬ್ಬಿ ಸಮುದ್ರದಲ್ಲಿ ಮೇಲ್ಮೆ„ ಸುಳಿಗಾಳಿ ಉಂಟಾಗಿದ್ದು, ಇವುಗಳ ಮಧ್ಯೆ “ಕಡಿಮೆ ಒತ್ತಡ ತಗ್ಗು’ ಕಾಣಿಸಿಕೊಂಡಿದೆ. ಪರಿಣಾಮ ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ವ್ಯಾಪಕ ಮಳೆ ಆಗುತ್ತಿದೆ. ಇದು ಇನ್ನೂ 2 ದಿನ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ನಂತರ ಈ ಮಳೆ ಉತ್ತರ ಒಳನಾಡಿನತ್ತ ಮುಖಮಾಡುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಅರಬ್ಬೀ ಸಮುದ್ರದಲ್ಲಿ ಮೇಲ್ಮೆ„ ಸುಳಿಗಾಳಿ ಇದ್ದು, ಇದು ಕರ್ನಾಟಕದ ಕರಾವಳಿ ಮತ್ತು ಕೇರಳದಲ್ಲಿ ಹಾದು ಹೋಗಿದೆ. ಇದರಿಂದ ದಕ್ಷಿಣ ಒಳನಾಡು ಬಹುತೇಕ ಕಡೆಗಳಲ್ಲಿ ಮಳೆ ಆಗುತ್ತಿದೆ. ಇದು ಇನ್ನೂ ಮೂರ್‍ನಾಲ್ಕು ದಿನ ಇದೇ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ನಿರ್ದೇಶಕ ಸುಂದರ್ ಎಂ. ಮೇತ್ರಿ ತಿಳಿಸಿದ್ದಾರೆ. ಈ ಮಧ್ಯೆ ಗುರುವಾರ ರಾತ್ರಿ 9ರವರೆಗೆ ಉಡುಪಿಯಲ್ಲಿ ಅತಿ ಹೆಚ್ಚು 131.3 ಮಿ.ಮೀ ಮಳೆ ದಾಖಲಾಗಿದೆ. ಅದೇ ರೀತಿ ಬೆಂಗಳೂರು ನಗರ 75.5 ಮಿ.ಮೀ, ಮಂಡ್ಯ 60.4, ಹಾಸನ, 60, ಕೋಲಾರ 60, ಉತ್ತರ ಕನ್ನಡ 56.9, ದಕ್ಷಿಣ ಕನ್ನಡ 55.5, ಕೊಡಗು 53.5, ಬೆಂಗಳೂರು ಗ್ರಾಮಾಂತರ 52, ರಾಮನಗರ 45.2, ಮೈಸೂರು 43.4, ತುಮಕೂರು 39.1, ಯಾದಗಿರಿ 34.5, ಚಿತ್ರದುರ್ಗ 29.5, ಶಿವಮೊಗ್ಗ 29, ಚಾಮರಾಜನಗರ 28.5, ಚಿಕ್ಕಬಳ್ಳಾಪುರ 27 ಮಿ.ಮೀ. ಮಳೆ ಆಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರ ಮಾಹಿತಿ ನೀಡಿದೆ.