Advertisement

ಎಂಟು ರಾಜೀನಾಮೆ ತಿರಸ್ಕೃತ

03:17 AM Jul 10, 2019 | sudhir |

ಬೆಂಗಳೂರು: ಅತೃಪ್ತ ಶಾಸಕರ ರಾಜೀನಾಮೆ ಆಟ ಹೊಸ ತಿರುವು ಪಡೆದುಕೊಂಡಿದ್ದು, 13 ಶಾಸಕರ ರಾಜೀನಾಮೆ ಪತ್ರಗಳಲ್ಲಿ ಐದು ಮಾತ್ರ ಕ್ರಮಬದ್ಧ ಎಂದಿರುವ ಸ್ಪೀಕರ್‌ ರಮೇಶ್‌ ಕುಮಾರ್‌, ಉಳಿದ ಎಂಟು ರಾಜೀನಾಮೆ ಪತ್ರಗಳನ್ನು ತಿರಸ್ಕರಿಸಿದ್ದಾರೆ. ಅಷ್ಟೇ ಅಲ್ಲ, ಇವು ಕ್ರಮಬದ್ಧವಲ್ಲವಾಗಿರುವುದರಿಂದ ಮತ್ತೆ ಪರಿಷ್ಕರಣೆಗೂ ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿದ್ದಾರೆ.

Advertisement

ಕಾಂಗ್ರೆಸ್‌ ನಾಯಕರು ರಾಜೀನಾಮೆ ಸಲ್ಲಿಸಿರುವ ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ ಅನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜು. 6ರಂದು ನಾನು ಕಚೇರಿಯಲ್ಲಿ ಇದ್ದಾಗ ಯಾವ ಶಾಸಕರೂ ಬಂದಿರಲಿಲ್ಲ. ನನ್ನಲ್ಲಿ ಸಮಯವನ್ನೂ ಕೇಳಿರಲಿಲ್ಲ. ನಾನು ಕಚೇರಿಯಿಂದ ಹೋದ ಮೇಲೆ 13 ಮಂದಿ ಶಾಸಕರು ಬಂದು ನಮ್ಮ ಕಾರ್ಯದರ್ಶಿ ಬಳಿ ರಾಜೀನಾಮೆ ಪತ್ರಗಳನ್ನು ನೀಡಿದ್ದಾರೆ. ಅವರಿಗೆ ಸ್ವೀಕೃತಿ ಪತ್ರ ನೀಡಿ ಕಳುಹಿಸಲಾಗಿದೆ.

ಆನಂದ್‌ ಸಿಂಗ್‌, ಪ್ರತಾಪ್‌ ಗೌಡ ಪಾಟೀಲ್, ನಾರಾಯಣ ಗೌಡ, ರಾಮಲಿಂಗಾ ರೆಡ್ಡಿ, ಗೋಪಾಲಯ್ಯ ಅವರ ರಾಜೀನಾಮೆ ಪತ್ರಗಳು ಕ್ರಮಬದ್ದವಾಗಿವೆ. ಈ ಐವರು ಶಾಸಕರಲ್ಲಿ ಜು. 12ರಂದು ಆನಂದ್‌ಸಿಂಗ್‌, ಪ್ರತಾಪ್‌ ಗೌಡ ಪಾಟೀಲ್ ಹಾಗೂ ನಾರಾಯಣ ಗೌಡ ಅವರಿಗೆ ಹಾಜರಾಗಲು ಸೂಚನೆ ನೀಡಿದ್ದೇನೆ. ಜು. 15ರಂದು ರಾಮಲಿಂಗಾ ರೆಡ್ಡಿ, ಗೋಪಾಲಯ್ಯ ಅವರನ್ನು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ಹೇಳಿದರು.

ಇದರೊಂದಿಗೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ರಾಜೀನಾಮೆ ನೀಡಿರುವ ಶಾಸಕರ ವಿರುದ್ಧ ದೂರು ಸಲ್ಲಿಸಿದ್ದಾರೆ. ರಮೇಶ್‌ ಜಾರಕಿಹೊಳಿ ಹಾಗೂ ಕೆಲವು ಶಾಸಕರ ವಿರುದ್ಧ ಈ ಹಿಂದೆ ಕಾಂಗ್ರೆಸ್‌ ಸಲ್ಲಿಸಿರುವ ದೂರಿನ ಆಧಾರದಲ್ಲಿ ಜು.11ರಂದು ವಿಚಾರಣೆಗೆ ಹಾಜರಾಗುವಂತೆ ಅವರಿಗೆ ಸಮಯ ನೀಡಲಾಗಿದೆ ಎಂದು ಹೇಳಿದರು.

ಅನರ್ಹತೆಯ ಅಸ್ತ್ರ

Advertisement

ಬೆಂಗಳೂರು: ಮುಂಬಯಿಗೆ ಹೋಗಿರುವ ಪಕ್ಷದ ಶಾಸಕರ ವಿರುದ್ಧ ಅನರ್ಹತೆಯ ಅಸ್ತ್ರ ಪ್ರಯೋಗಿಸಲು ರಾಜ್ಯ ಕಾಂಗ್ರೆಸ್‌ ಮುಂದಾಗಿದೆ. ಈ ಸಂಬಂಧ ವಿಧಾನಸಭಾಧ್ಯಕ್ಷ ರಮೇಶ್‌ ಕುಮಾರ್‌ ಅವರನ್ನು ಭೇಟಿಯಾದ ಸಿದ್ದರಾಮಯ್ಯ ನೇತೃತ್ವದ ನಿಯೋಗ, ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಶಾಸಕರನ್ನು ಅನರ್ಹಗೊಳಿಸಿ ಎಂದು ಮನವಿ ಮಾಡಿದೆ. ಅಷ್ಟೇ ಅಲ್ಲ, ಅವರು 6 ವರ್ಷ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿಷೇಧ ಹೇರಲು ಕಾಂಗ್ರೆಸ್‌ ಮನವಿ ಮಾಡಿದೆ.

ಈ ಕುರಿತು ಮಾತನಾಡಿದ ಸಿದ್ದರಾಮಯ್ಯ, ಸಂವಿಧಾನದ 10ನೇ ಪರಿಚ್ಛೇದದ ಕಲಂ 164 (1 ಮತ್ತು 2)ರ ಪ್ರಕಾರ ಯಾವುದೇ ಪಕ್ಷದಿಂದ ಆಯ್ಕೆಯಾದ ಶಾಸಕ ರಾಜೀನಾಮೆ ನೀಡುವಂತಿಲ್ಲ. ಅದು ಪಕ್ಷ ವಿರೋಧಿ ಚಟುವಟಿಕೆಯಾಗುತ್ತದೆ. ಅನಂತರ ಅವರು ಯಾವುದೇ ಸಚಿವ ಸ್ಥಾನ ಹಾಗೂ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುವಂತಿಲ್ಲ. ಹೀಗಾಗಿ ಅವರನ್ನು ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಅನರ್ಹಗೊಳಿಸುವಂತೆ ರಮೇಶ್‌ ಕುಮಾರ್‌ಗೆ ದೂರು ಸಲ್ಲಿಸುವುದಾಗಿ ತಿಳಿಸಿದರು.

ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಶಾಸಕರು ಬಿಜೆಪಿ ಜತೆ ಕೈ ಜೋಡಿಸಿರುವುದು ಬಯಲಾಗಿದೆ. ಆದರೂ ಅವರು ರಾಜೀನಾಮೆ ವಾಪಸ್‌ ಪಡೆಯಲು ಮನವಿ ಮಾಡುತ್ತೇನೆ. ಶಾಸಕರ ರಾಜೀನಾಮೆ ಸ್ವಯಂಪ್ರೇರಿತವಾಗಿಲ್ಲ ಮತ್ತು ಪ್ರಾಮಾಣಿಕವಾಗಿಲ್ಲ. ಹೀಗಾಗಿ ಇದು ಪಕ್ಷ ವಿರೋಧಿ ಚಟುವಟಿಕೆಯಾಗುತ್ತದೆ ಎಂದು ಹೇಳಿದರು.

ಆಜಾದ್‌ ಬೆಂಗಳೂರಿಗೆ

ಮೈತ್ರಿ ಸರಕಾರ ಉಳಿಸಲು ಎಐಸಿಸಿ ಪ್ರಧಾನ ಕಾರ್ಯದರ್ಶಿ ಗುಲಾಂ ನಬಿ ಆಜಾದ್‌ ಬೆಂಗಳೂರಿಗೆ ಆಗಮಿಸಿದ್ದು, ಹಿರಿಯ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next