Advertisement

ಪುಣ್ಯಸ್ನಾನಕ್ಕೆ ತೆರಳಿದ್ದ 8 ಮಂದಿ ಸಾವು

02:54 AM Jan 16, 2019 | |

ಹುಬ್ಬಳ್ಳಿ: ಆರು ಪ್ರತ್ಯೇಕ ಘಟನೆಗಳಲ್ಲಿ ಸಂಕ್ರಮಣ ನಿಮಿತ್ತ ಮಂಗಳವಾರ ತುಂಗಭದ್ರಾ ನದಿ ಹಾಗೂ ಕಾನೇರಿ ಹಳ್ಳದಲ್ಲಿ ಪುಣ್ಯಸ್ನಾನಕ್ಕೆ ತೆರಳಿದ್ದ ಎಂಟು ಜನ ಮೃತಪಟ್ಟಿದ್ದಾರೆ.

Advertisement

ಸಿಂಧನೂರು ತಾಲೂಕಿನ ಒಳಬಳ್ಳಾರಿ ಬಳಿಯ ತುಂಗಭದ್ರಾ ನದಿಗೆ ಪುಣ್ಯಸ್ನಾನಕ್ಕೆ ತೆರಳಿದ್ದ ಸಿಂಧನೂರು ನಗರದ ಬಸವರಾಜ ಶಂಕರಗೌಡ (16) ಮತ್ತು ನವೀನ ಸಂಗಪ್ಪ ಡ್ರೈವರ್‌ (16) ಮೃತಪಟ್ಟಿದ್ದಾರೆ. ಇವರ ಜೊತೆಗಿದ್ದ ಸಂದೀಪ ಶಿವಪ್ಪ (15) ಪಾರಾಗಿದ್ದಾನೆ. ಇನ್ನೊಂದು ಘಟನೆಯಲ್ಲಿ ಸಿಂಧನೂರು ತಾಲೂಕಿನ ರಾಗಲಪರ್ವಿ ಗ್ರಾಮದ 10 ಯುವಕರು ಗಂಗಾವತಿ ತಾಲೂಕಿನ ಆನೆಗೊಂದಿ ಬಳಿಯ ತುಂಗಭದ್ರಾ ನದಿಗೆ ಪುಣ್ಯಸ್ನಾನಕ್ಕೆ ತೆರಳಿದ್ದರು. ನದಿಯಲ್ಲಿ ಸ್ನಾನಕ್ಕೆ ಇಳಿದಾಗ ಸುಳಿಗೆ ಸಿಲುಕಿ ಭರತಗೌಡ ರೆಡ್ಡಿ (22) ಮೃತಪಟ್ಟಿದ್ದಾನೆ. ಜೋಯಿಡಾ ತಾಲೂಕಿನ ಸಿಂತೇರಿ ರಾಕ್‌ ಹತ್ತಿರದ ಕಾನೇರಿ ಹಳ್ಳದಲ್ಲಿ ಗದಗ ಜಿಲ್ಲೆ ರೋಣ ತಾಲೂಕಿನ ಉಳವಿ ಯತ್ರಾರ್ಥಿ ಬಾಪುಗೌಡ (18) ನೀರಿನಲ್ಲಿ ಈಜಲು ಹೋಗಿ ಮೃತಪಟ್ಟಿದ್ದಾನೆ. ರೋಣ ಗ್ರಾಮಸ್ಥರ ಜತೆ ಉಳವಿ ಯಾತ್ರೆಗೆ ತೆರಳಿದ್ದ ಎನ್ನಲಾಗಿದೆ.

ಕೊಚ್ಚಿ ಹೋದ ಆಯುರ್ವೇದ ವೈದ್ಯ: ಹಂಪಿಗೆ ಆಗಮಿಸಿದ್ದ ಆಯುರ್ವೇದ ವೈದ್ಯ ಗಂಗಾವತಿ ತಾಲೂಕಿನ ಕಾರಟಗಿ ಗ್ರಾಮದ ಪ್ರದೀಪ್‌ (26) ತುಂಗಭದ್ರಾ ನದಿಯಲ್ಲಿ ಕೊಚ್ಚಿ ಹೋಗಿದ್ದಾರೆ. ಸ್ನೇಹಿತ ಮಂಜುನಾಥ್‌ ಜೊತೆ ಹಂಪಿಗೆ ಆಗಮಿಸಿದ್ದ ಪ್ರದೀಪ್‌ ಪುರಂದರ ಮಂಟಪದ ಬಳಿ ಇರುವ ಚಂದ್ರಮೌಳಿ ದೇವಸ್ಥಾನದ ಬಳಿ ಹಾದು ಹೋಗಿರುವ ನದಿಯಲ್ಲಿ ಸ್ನಾನಕ್ಕೆಂದು ಇಳಿದಾಗ ಘಟನೆ ನಡೆದಿದೆ.

ಅಕ್ಕಿಆಲೂರ ತಾಲೂಕಿನ ಕೂಡಲ ಗ್ರಾಮದಲ್ಲಿ ವರದಾ ಮತ್ತು ಧರ್ಮಾ ನದಿಗಳ ಸಂಗಮಕ್ಕೆ ಚಕ್ಕಡಿ ಕಟ್ಟಿಕೊಂಡು ಆಗಮಿಸಿದ ವೇಳೆ ನದಿಯಲ್ಲಿ ದನಗಳ ಮೈ ತೊಳೆಯಲು ಹೋಗಿ ಆಯತಪ್ಪಿ ಬಿದ್ದು ಶಿಗ್ಗಾವಿ ತಾಲೂಕಿನ ಕುಂದೂರ ಗ್ರಾಮದ ಬಸವರಾಜ ಗದಿಗೆಪ್ಪ ಮುದಕಣ್ಣನವರ (38) ಮೃತಪಟ್ಟಿದ್ದಾರೆ. ಬೀಳಗಿ ತಾಲೂಕಿನ ಚಿಕ್ಕಸಂಗಮ ದೇವಸ್ಥಾನ ಬಳಿಯ ಕೃಷ್ಣಾ ಮತ್ತು ಘಟಪ್ರಭೆ ನದಿಗಳ ಸಂಗಮ ತಾಣಕ್ಕೆ ಸ್ನಾನಕ್ಕೆ ತೆರಳಿದ್ದ ರೊಳ್ಳಿ ಗ್ರಾಮದ ಅಮೃತ ಗುರುಲಿಂಗಯ್ಯ ಹಿರೇಮಠ (14) ಹಾಗೂ ಕೊಪ್ಪ ಎಸ್‌ಆರ್‌ ಪುನರ್ವಸತಿ ಕೇಂದ್ರದ ಶ್ರೀಧರ ಹನುಮಂತ ತೋಳಮಟ್ಟಿ (15) ಮೃತಪಟ್ಟಿದ್ದಾರೆ. ಐವರು ಸ್ನೇಹಿತರೊಂದಿಗೆ ಸಂಕ್ರಾಂತಿ ಸ್ನಾನಕ್ಕೆಂದು ತೆರಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next