Advertisement

ನಿಧನರಾಗಿ 8 ತಿಂಗಳಾದರೂ‌ ಇನ್ನೂ ‌ಮೃತರೇ ಅಧ್ಯಕ್ಷರು!

10:46 AM Jan 11, 2022 | Team Udayavani |

ಶಿರಸಿ: ಮೃತರಾಗಿ ಎಂಟು ತಿಂಗಳಾದರೂ‌ ಆಧುನಿಕ‌ ನಡೆಯಲ್ಲಿ ವಿಫುಲ ಹೆಜ್ಜೆ ಇಡುತ್ತಿರುವ ಕನ್ನಡ‌ ಮತ್ತು ಸಂಸ್ಕ್ರತಿ ‌ಇಲಾಖೆಯ ವೆಬ್ ಸೈಟ್ ನಲ್ಲಿ ಮೃತರೇ ಅಧ್ಯಕ್ಷರಾಗಿ ‌ಮುಂದುವರಿದಿದ್ದಾರೆ.

Advertisement

ಕಳೆದ ಏಪ್ರಿಲ್ 18ರಂದು ಅಕಾಲಿಕವಾಗಿ ಅಗಲಿದ ಯಕ್ಷಗಾನ‌ ಅಕಾಡಮಿ ಅಧ್ಯಕ್ಷ ಪ್ರೋ ಎಂ.ಎ.ಹೆಗಡೆ ಅವರ‌ ಜಾಗಕ್ಕೆ ಸರಕಾರ ಆಡಳಿತಾಧಿಕಾರಿ ನೇಮಕ‌ ಮಾಡಿದ್ದರ ಬಗ್ಗೆ ಆಕ್ಷೇಪ, ಅಸಮಧಾನಗಳು ಬಂದ ಬೆನ್ನಲ್ಲೇ, ವೆಬ್ ಸೈಟಿನಲ್ಲಿ  ಎಂ.ಎ.ಹೆಗಡೆ ಅವರ ಹೆಸರನ್ನು ಬದಲಾಯಿಸದೇ ಇರುವುದು ಆಕ್ಷೇಪಕ್ಕೆ ಕಾರಣವಾಗಿದೆ.

ಕನ್ನಡ ನಾಡು‌ ನುಡಿ, ಕಲೆಯ ಸೇವೆಗಾಗಿ ಇರುವ‌ ಕನ್ನಡ‌ ಮತ್ತು ಸಂಸ್ಕ್ರತಿ ಇಲಾಖೆ ತನ್ನ ವ್ಯಾಪ್ತಿಯಲ್ಲಿ ‌ಹದಿನಾರು ವೈವಿಧ್ಯಮಯ ಅಕಾಡೆಮಿಗಳನ್ನು ನಡೆಸುತ್ತದೆ. ಈ ಅಕಾಡೆಮಿ ಹಾಗೂ ಇಲಾಖೆಯ ಮಾಹಿತಿ ನೀಡುವ ವೆಬ್ ಸೈಟಿನಲ್ಲಿ ಪ್ರೋ. ಎಂ ಎ.ಹೆಗಡೆ ಅವರ ಹೆಸರು‌ ಇನ್ನೂ ಇದೆ.

ಅನೇಕ ರಚನಾತ್ಮಕ ಚಟುವಟಿಕೆ ನಡೆಸಿ ಇಡೀ ರಾಜ್ಯದ ಬಡಗು, ತೆಂಕು, ಬಡಾಬಡಗು,‌ಮೂಡಲಪಾಯದ ಕಲಾವಿದರ ಗಮನ ಸೆಳೆದಿದ್ದ ಎಂ.ಎ.ಹೆಗಡೆ ಅವರು ಅಕಾಡೆಮಿಯ‌ ಪ್ರಥಮ ಅಧ್ಯಕ್ಷರಾಗಿದ್ದರು.  ಮೂರು ಬಾರಿ ಅಧ್ಯಕ್ಷರಾದರೂ ಚುನಾವಣೆ, ಕೋವಿಡ್ ಸೇರಿದಂತೆ ಅಧಿಕಾರ ಬಳಸಲು‌ ಎರಡುವರೆ ವರ್ಷದಲ್ಲಿ 12 ತಿಂಗಳು ಗಟ್ಟಿ‌ ಸಿಕ್ಕಿರಲಿಲ್ಲ. ಕಳೆದ ಏ.18ಕ್ಕೆ ಮೊದಲಿಗೆ ಕೋವಿಡ್ ಸೋಂಕು ತಗುಲಿ ನಂತರ ಹೃದಯಾಘಾತದಿಂದ‌ ಮೃತರಾಗಿದ್ದರು.

ಸಂಸ್ಕ್ರತ, ಇಂಗ್ಲೀಷ್, ಕನ್ನಡದ‌ ಮೇರು ಪಂಡಿತ, ಯಕ್ಷಕವಿ ಎಂ.ಎ.ಹೆಗಡೆ ಅವರು ಹಾಕಿಕೊಟ್ಟ ಕನಸು, ಮಾರ್ಗದಲ್ಲಿ ನಡೆಯುವ ಅಧ್ಯಕ್ಷರ‌ ನೇಮಕ ಆಗಬೇಕಿತ್ತು. ನಿಜಕ್ಕೂ ಸರಕಾರ ಆ ಮೂಲಕ ಅವರಿಗೆ ಗೌರವ ಸಲ್ಲಿಸಬಹುದಾಗಿತ್ತು.ಆದರೆ, ಇತ್ತ ಆಡಳಿತಾಧಿಕಾರಿ‌ ನೇಮಕ‌ ಮಾಡಿದೆ. ಅತ್ತ ವೆಬ್ ಸೈಟ್ ನಲ್ಲೂ ಹೆಸರಿಟ್ಟಿದೆ! ಈ‌ ಮೂಲಕ ಸರಕಾರದಲ್ಲಿ‌ ಏನೂ ಸಾಧ್ಯ ಎಂಬುದಕ್ಕೆ ಇದು ಉದಾಹರಣೆ ಎಂಬ ಮಾತುಗಳೂ ಕೇಳಿ ಬಂದಿದೆ.

Advertisement

ಅಪ್ಪಟ‌ ಕನ್ನಡದ ಕಲೆ ಯಕ್ಷಗಾನಕ್ಕೆ ಬಲ ಕೊಡಲು ಅಕಾಡೆಮಿ ಬಲವಾಗಿಸಲು ಸಮರ್ಥ ಅಧ್ಯಕ್ಷರ ಸ್ಥಾನಕ್ಕೆ ವಿದ್ವಾಂಸರ ನೇಮಕ‌ ಮಾಡಬೇಕು. ವೆಬ್ ಸೈಟ್‍ನಲ್ಲಿ ಉಂಟಾದ ಮಾಹಿತಿ ಕೊರತೆ ಕೂಡ ಸರಿ‌ ಮಾಡಬೇಕು ಎಂಬ ಆಗ್ರಹ ಕೇಳಿ ಬಂದಿದೆ. ಕ್ರಿಯಾಶೀಲ ಸಚಿವ ಸುನೀಲ್ ಕುಮಾರರು, ನಿರ್ದೇಶಕ ರಂಗಪ್ಪ ಅವರು ಸ್ಪಂದಿಸುತ್ತಾರೆಯೇ ಕಾದು ನೋಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next