ನವದೆಹಲಿ:ದೇಶ ಹಾಗೂ ವಿಶ್ವದಲ್ಲಿನ ಆರ್ಥಿಕ ಅಸಮಾನತೆ ಯಾವ ಪರಿ ಇದೆ ಎಂಬುದು ಹೊಸದಾಗಿ ಬಿಡುಗಡೆಯಾಗಿರುವ ಸಮೀಕ್ಷೆಯೊಂದು ಬಿಚ್ಚಿಟ್ಟಿದೆ..ಹೌದು ಇಡೀ ವಿಶ್ವದ ಅರ್ಧದಷ್ಟು ಜನಸಂಖ್ಯೆ ಹೊಂದಿರುವ ಸಂಪತ್ತು ಜಗತ್ತಿನ ಕೇವಲ 8 ಮಂದಿ ಅಗರ್ಭ ಶ್ರೀಮಂತರ ಬಳಿ ಇದೆಯಂತೆ!
ಭಾರತದ ಒಟ್ಟು ಸಂಪತ್ತಿನ ಶೇ.58ರಷ್ಟು ಸಂಪತ್ತಿನ ಭಾಗ ದೇಶದಲ್ಲಿರುವ ಶೇ.1ರಷ್ಟಿರುವ ಅತಿ ಶ್ರೀಮಂತರ ಬಳಿ ಇದೆ ಎಂದು ದಾವೊಸ್ ನಲ್ಲಿ ನಡೆಯಲಿರುವ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆಗೂ ಮುನ್ನ ರೈಟ್ ಗ್ರೂಪ್ ಒಕ್ಸ್ ಫಾಮ್ ನಡೆಸಿರುವ ಹೊಸ ಸಮೀಕ್ಷೆಯಲ್ಲಿ ಬಹಿರಂಗಗೊಂಡಿದೆ.
ಜಗತ್ತಿನ 3.6 ಬಿಲಿಯನ್ ಕಡು ಬಡವರ ಬಳಿ ಇರುವ ಸಂಪತ್ತು, ಅಮೆರಿಕದ 6 ಹಾಗೂ ಸ್ಪೇನ್, ಮೆಕ್ಸಿಕೋ ಸೇರಿ 8 ಉದ್ಯಮಿಗಳ ಸಂಪತ್ತಿಗೆ ಸಮಾನವಾಗಿದೆ. ಫೋರ್ಬ್ಸ್ ನ ಕೋಟ್ಯಾಧೀಶ್ವರರ ಪಟ್ಟಿಯಿಂದ ಆಯ್ಕೆ ಮಾಡಿಕೊಂಡಿರುವ ಹೆಸರಿನ ಪ್ರಕಾರ, ಇದರಲ್ಲಿ ಮೈಕ್ರೋಸಾಫ್ಟ್ ನ ಬಿಲ್ ಗೇಟ್ಸ್, ಫೇಸ್ ಬುಕ್ ಸಹಸಂಸ್ಧಾಪಕ ಮಾರ್ಕ್ ಜುಗರ್ ಬರ್ಗ್ ಹಾಗೂ ಅಮೆಜಾನ್ ಸಂಸ್ಧಾಪಕ ಜೆಫ್ ಬೆಝೋಸ್ ಸೇರಿದ್ದಾರೆ.
ಇದರಿಂದಾಗಿ ಭಾರತ ಸೇರಿದಂತೆ ವಿಶ್ವದಲ್ಲಿ ಭಾರೀ ಪ್ರಮಾಣದಲ್ಲಿ ಬಡವರು ಮತ್ತು ಶ್ರೀಮಂತರ ನಡುವೆ ಆರ್ಥಿಕ ಅಸಮಾನತೆ ಮುಂದುವರಿದಂತಾಗಿದೆ ಎಂದು ವಿಶ್ಲೇಷಿಸಿದೆ. ದೇಶದ 57 ಶತಕೋಟ್ಯಾಧೀಶ್ವರ ಬಳಿ ಒಟ್ಟು ಸಂಪತ್ತಿನ ಶೇ.58ರಷ್ಟು ಆಸ್ತಿ ಇದೆ. ವಿಶ್ವಮಟ್ಟದಲ್ಲಿ ಕೇವಲ 8 ಶತಕೋಟ್ಯಾಧಿಪತಿಗಳ ಬಳಿ ಈ ಮೊತ್ತದ ಆಸ್ತಿ ಸಂಪತ್ತು ಇದೆ.
ಅಧ್ಯಯನದ ಪ್ರಕಾರ ಭಾರತದಲ್ಲಿ ಮುಕೇಶ್ ಅಂಬಾನಿ ನಂಬರ್ ಒನ್ ಸ್ಥಾನದಲ್ಲಿದ್ದು, ದೇಶದಲ್ಲಿ 84 ಮಂದಿ ಶತಕೋಟ್ಯಾಧಿಪತಿಗಳಿದ್ದಾರೆ. ಇವರ ಒಟ್ಟು ಸಂಪತ್ತು 248 ಬಿಲಿಯನ್ ಡಾಲರ್. ಮುಕೇಶ್ ಅಂಬಾನಿ ಬಳಿ 19.3 ಬಿಲಿಯನ್ ಡಾಲರ್, ದಿಲಿಪ್ ಶಾಂಘ್ವಿ 16.7 ಬಿಲಿಯನ್ ಡಾಲರ್, ಅಜೀಂ ಪ್ರೇಮ್ ಜೀ 15 ಬಿಲಿಯನ್ ಡಾಲರ್. ದೇಶದ ಒಟ್ಟು ಸಂಪತ್ತಿನ ಮೌಲ್ಯ 3.1ಲಕ್ಷಕೋಟಿ ಡಾಲರ್ ಆಗಿದೆ ಎಂದು ತಿಳಿಸಿದೆ.