ಬೆಂಗಳೂರು: ರಾಜಧಾನಿ ಬೆಂಗಳೂರು, ಮಂಗಳೂರು, ಮಂಡ್ಯ ಸೇರಿದಂತೆ ರಾಜ್ಯದ ಹಲವೆಡೆ ಬುಧವಾರ ಉತ್ತಮ ಮಳೆಯಾಗಿದ್ದು, ಸಿಡಿಲಬ್ಬರದ ಮಳೆಗೆ ಎಂಟು ಮಂದಿ ಬಲಿಯಾಗಿದ್ದಾರೆ.
ಮಧ್ಯಾಹ್ನದ ನಂತರ ಬೆಂಗಳೂರಿನ ಬಹುತೇಕ ಕಡೆ ಉತ್ತಮ ಮಳೆಯಾಗಿದ್ದು, ನೂತನ ಸಿಎಂ ಕುಮಾರಸ್ವಾಮಿ
ಯವರ ಪ್ರಮಾಣವಚನ ಸಮಾರಂಭಕ್ಕೂ ಮುನ್ನ ಕೆಲಕಾಲ ಫಜಿತಿ ಪಡುವಂತಾಯಿತು. ಈ ಮಧ್ಯೆ, ಬುಧವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ಹಾವೇರಿ ಜಿಲ್ಲೆಯ ಶಿಗ್ಗಾಂವ್‌ನಲ್ಲಿ ರಾಜ್ಯದಲ್ಲಿಯೇ ಅಧಿಕ, 4 ಸೆಂ.ಮೀ.ಮಳೆ ಸುರಿಯಿತು. ಕಲಬುರಗಿಯಲ್ಲಿ ರಾಜ್ಯದಲ್ಲಿಯೇ ಗರಿಷ್ಠ 40.7ಡಿ.ಸೆ.ತಾಪಮಾನ ದಾಖಲಾಯಿತು.
ಮಧ್ಯಾಹ್ನದ ನಂತರ ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆಗೆ ಹಲವೆಡೆ ಮರಗಳು ಧರೆಗುರುಳಿದವು. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನರಿಗೆ ತೊಂದರೆಯುಂಟಾಯಿತು. ವಾಹನ ಸವಾರರು ಪರದಾಡುವಂತಾಯಿತು. ಇದೇ ವೇಳೆ, ತುಮಕೂರು ಜಿಲ್ಲೆಯ ಕೆಲವೆಡೆ ಮಳೆಯಾಗಿದ್ದು, ಪಾವಗಡ ತಾಲೂಕಿನ ಮಾಧವರಾಯನಪಾಳ್ಯ ಗ್ರಾಮದಲ್ಲಿ ಸಿಡಿಲು ಬಡಿದು ರಾಮಕೃಷ್ಣ (48) ಎಂಬುವರು ಮೃತಪಟ್ಟಿದ್ದಾರೆ. ಸಂಜೆ 6 ಗಂಟೆ ವೇಳೆಗೆ ಹೊಲದಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಹಿಂತಿರುಗುವಾಗ ಸಿಡಿಲು ಬಡಿಯಿತು. ಸಿಂಧನೂರು ತಾಲೂಕಿನ ರೌಡಕುಂದಾ ಹತ್ತಿರದ ರಾಮಾ ಕ್ಯಾಂಪ್‌ನಲ್ಲಿ ಶರಣಮ್ಮ ಶರಣಪ್ಪ ದಾನಗೌಡ್ರು (40) ಎಂಬುವರು ಮೃತಪಟ್ಟಿದ್ದಾರೆ. ಕ್ಯಾಂಪ್‌ನ ಹೊರವಲಯದಲ್ಲಿ ದನ ಮೇಯಿಸುತ್ತಿರುವಾಗ ಸಿಡಿಲು ಬಡಿಯಿತು. ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ದೇವಸಮುದ್ರ ಗ್ರಾಮದಲ್ಲಿ ಸಿಡಿಲು ಬಡಿದು ಎರಡು ಎತ್ತುಗಳು ಮೃತಪಟ್ಟಿವೆ.
ತೋರಣಗಲ್ಲಿನ ಜಿಂದಾಲ್‌ನಲ್ಲಿ ಸಿಡಿಲು ಬಡಿದು ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಕುರುಗುಪ್ಪೆಯಲ್ಲಿ ಬೆಳಗೋಡು ಸೋಮಶೇಖರ್ (26) ಎಂಬುವರು ಮೃತಪಟ್ಟಿದ್ದಾರೆ. ಗದಗ ತಾಲೂಕಿನ ಹಾತಲಗೇರಿ ಗ್ರಾಮ ದಲ್ಲಿ ಬುಧವಾರ ಮಧ್ಯಾಹ್ನ ಕುರಿ ಮೇಯಿಸುತ್ತಿದ್ದಾಗ ಮುತ್ತಪ್ಪ (15) ಎಂಬ ಬಾಲಕ ಮೃತಪಟ್ಟಿದ್ದಾನೆ. ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ಹೊಲದಲ್ಲಿ ಕೆಲಸ ಮುಗಿಸಿಕೊಂಡು ವಾಪಸ್ ಮನೆಗೆ ಬರುತ್ತಿದ್ದಾಗ ಸಿಡಿಲು ಬಡಿದು ಶಿವಬಸಪ್ಪ ಕುರುಬರ (32) ಮೃತಪಟ್ಟಿದ್ದಾರೆ. ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಗುತ್ತೂರು ಗ್ರಾಮದಲ್ಲಿ ಬುಧವಾರ ಸಂಜೆ ಹೊಲದಿಂದ ಮನೆಗೆ ಮರಳುತ್ತಿದ್ದಾಗ ಸಿಡಿಲು ಬಡಿದು ಒಂದೇ ಕುಟುಂಬದ ಇಬ್ಬರು ಮೃತಪಟ್ಟಿದ್ದಾರೆ.
ವಿರೂಪಾಕ್ಷಪ್ಪ (24) ಹಾಗೂ ಕರಿಯಮ್ಮ (21) ಮೃತರು. ಈ ಮಧ್ಯೆ, ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನ ಧರ್ಮಸಾಗರ ಗ್ರಾಮದಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ಮಂಜಮ್ಮ ಮೃತಪಟ್ಟರೆ ಮೂವರು ಗಾಯಗೊಂಡಿದ್ದಾರೆ.
ಹಾಸನ, ಮೈಸೂರು, ಮಂಡ್ಯ, ತುಮಕೂರು ಜಿಲ್ಲೆಯ ಹಲವೆಡೆ ಗುಡುಗು, ಸಿಡಿಲು, ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಾಗಿದ್ದು, ಗಾಳಿಯ ರಭಸಕ್ಕೆ ಕೆಲವು ಕಡೆಗಳಲ್ಲಿ ನೂರಾರು ತೆಂಗು, ಅಡಿಕೆ, ಬಾಳೆ ತೋಟಗಳು ನೆಲ ಕಚ್ಚಿವೆ. ಕಡಬ, ಸುಳ್ಯ, ಬೆಳ್ತಂಗಡಿ, ಕಾರ್ಕಳ ಸೇರಿದಂತೆ ಕರಾವಳಿಯ ಕೆಲವೆಡೆ ಬುಧವಾರ ಸಂಜೆ ವೇಳೆಗೆ ಮಳೆ ಬಂದಿದೆ.