ನವದೆಹಲಿ: ವಿಶ್ವದ ಅತೀ ಎತ್ತರದ ಸೇನಾನೆಲೆ ಸಿಯಾಚಿನ್ ನಲ್ಲಿ ಭಾರೀ ಹಿಮಪಾತವಾಗುತ್ತಿದೆ. ಇದರ ಪರಿಣಾಮ ಈ ಭಾಗದಲ್ಲಿದ್ದ ಭಾರತೀಯ ಸೇನಾನೆಲೆ ಅಪಾಯಕ್ಕೊಳಗಾಗಿದೆ ಮತ್ತು ಸುಮಾರು ಎಂಟು ಜನ ಭಾರತೀಯ ಯೋಧರು ಈ ಹಿಮಪಾತದಲ್ಲಿ ಸಿಲುಕಿದ್ದಾರೆ ಹಾಗೂ ಇವರಲ್ಲಿ ನಾಲ್ವರು ಯೋಧರು ಮತ್ತು ಇಬ್ಬರು ನಾಗರಿಕರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಸೋಮವಾರ 3.30ರ ಸುಮಾರಿಗೆ ಈ ಘಟನೆ ನಡೆದಿರುವ ಕುರಿತು ಮಾಹಿತಿ ಲಭಿಸಿದೆ.
ಸಮುದ್ರ ಮಟ್ಟದಿಂದ ಸುಮಾರು 18,000 ಅಡಿ ಎತ್ತರದಲ್ಲಿರುವ ಉತ್ತರ ಗ್ಲೇಸಿಯರ್ ಭಾಗದಲ್ಲಿ ಭಾರೀ ಪ್ರಮಾಣದ ಹಿಮಪಾತ ಸಂಭವಿಸಿರುವುದಾಗಿ ಸೇನಾ ಮೂಲಗಳಿಂದ ತಿಳಿದುಬಂದಿದೆ. ಭಾರೀ ಹಿಮದಲ್ಲಿ ಸಿಲುಕಿಕೊಂಡಿರುವ ಯೋಧರ ರಕ್ಷಣೆಗಾಗಿ ತುರ್ತು ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ.
ಭಾರತೀಯ ಸೇನೆಯ ಎಂಟು ಜನ ಯೋಧರು ತಮ್ಮ ದೈನಂದಿನ ಗಸ್ತು ತಿರುಗಾಟದಲ್ಲಿದ್ದ ಸಂದರ್ಭದಲ್ಲಿ ಹಿಮಪಾತ ಉಂಟಾದ ಕಾರಣ ಹಿಮದ ಅಡಿಯಲ್ಲಿ ಸಿಲುಕಿಕೊಂಡರು ಎಂಬ ಮಾಹಿತಿ ಸೇನಾ ಮೂಲಗಳಿಂದ ಲಭ್ಯವಾಗಿದೆ.
2016ರ ಫೆಬ್ರವರಿ ತಿಂಗಳಿನಲ್ಲಿ ಇದೇ ಸಿಯಾಚಿನ್ ಗ್ಲೇಸಿಯರ್ ಭಾಗದಲ್ಲಿ ದೊಡ್ಡ ಹಿಮ ಬಂಡೆಯೊಂದು ಉರುಳಿದ ಪರಿಣಾಮ ಸುಮಾರು 10 ಜನ ಭಾರತೀಯ ಯೋಧರು 35 ಅಡಿ ಹಿಮದಲ್ಲಿ ಸಿಲುಕಿಕೊಂಡಿದ್ದರು. ಇವರ ರಕ್ಷಣೆಗಾಗಿ 150 ಮಂದಿಯ ವಿಶೇಷ ತಂಡವೊಂದು ಸತತ ಕಾರ್ಯಾಚರಣೆಗೆ ಇಳಿದಿತ್ತು.
ಈ ಸಂದರ್ಭದಲ್ಲಿ ಕರ್ನಾಟಕದವರಾಗಿದ್ದ ಲ್ಯಾನ್ಸ್ ನಾಯಕ್ ಹನುಮಂತಪ್ಪ ಅವರು ದಪ್ಪ ಹಿಮಗಡ್ಡೆಯ ಅಡಿಯಲ್ಲಿ ಜೀವಂತ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತಕ್ಷಣವೇ ಅವರನ್ನು ರಕ್ಷಣಾ ತಂಡ ಹಿಮದಡಿಯಿಂದ ಮೆಲೆತ್ತಿ ಆಸ್ಪತ್ರೆಗೆ ದಾಖಲಿಸಿತ್ತು. ಆದರೆ ಮೂರು ದಿನಗಳ ಬಳಿಕ ಲ್ಯಾನ್ಸ್ ನಾಯಕ್ ಹನುಮಂತಪ್ಪ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು. ಮತ್ತು ಆ ಹಿಮಪಾತದಲ್ಲಿ ಜೀವಂತ ಸಿಕ್ಕಿದ್ದ ಏಕೈಕ ಯೋಧ ಅವರಾಗಿದ್ದರು.