ಧಾರವಾಡ: ಸೇವಾ ಭದ್ರತೆಯೊಂದಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗಾಗಿ ಹು-ಧಾ ಮಹಾನಗರ ಸಭೆಯ ನೀರು ಸರಬರಾಜು ವಿಭಾಗದ ದಿನಗೂಲಿ, ಗುತ್ತಿಗೆ ಹಾಗೂ ಹಂಗಾಮಿ ನೌಕರರ ಸಂಘ ಕೈಗೊಂಡಿರುವ ಅಹೋರಾತ್ರಿ ಧರಣಿ ಮಂಗಳವಾರ 8ನೇ ದಿನ ಪೂರೈಸಿದೆ.
ಅಹೋರಾತ್ರಿ ಧರಣಿಯ 8ನೇ ದಿನವಾದರೂ ಸೂಕ್ತ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಬೆಳಿಗ್ಗೆ ಸಂಘದ ಪದಾಧಿಕಾರಿಗಳು ಕಲಾಭವನದಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಕಲಾಭವನದಿಂದ ಮೆರವಣಿಗೆ ಪ್ರಾರಂಭಿಸಿದ ನೌಕರರು, ಜ್ಯುಬ್ಲಿ ವೃತ್ತದಲ್ಲಿ ಕೆಲಕಾಲ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದರು.
ನಂತರ ಕೆಸಿಡಿ ರಸ್ತೆ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಪ್ರತಿಭಟನೆ ನಡೆಸಿದರು. ಮೈಸೂರು ಮಹಾನಗರ ಪಾಲಿಕೆ ಈಗಾಗಲೇ ನೀಡಿರುವ ಮಾದರಿಯಲ್ಲೇ ಹು-ಧಾ ಪಾಲಿಕೆ ನೌಕರರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ, ಸೇವಾ ಭದ್ರತೆ ನೀಡಬೇಕು.
ಇದಲ್ಲದೇ 24×7 ಯೋಜನೆ ಪ್ರಾರಂಭವಾದ ನಂತರ ಹಾಲಿ 483 ನೌಕರರನ್ನು ಜಲಮಂಡಳಿಯಿಂದ ನೇರವಾಗಿ ಪಾಲಿಕೆಗೆ ಹಸ್ತಾಂತರ ಮಾಡಬೇಕು ಎಂದು ಆಗ್ರಹಿಸಿದರು. ಕೆಲ ತಿಂಗಳ ಹಿಂದೆ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಕೂಡಲೇ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರಿಂದ ಧರಣಿ ಹಿಂಪಡೆಯಲಾಗಿತ್ತು.
ಆದರೆ ಈ ಬಾರಿ ಯಾವುದೇ ಭರವಸೆಗೆ ಮನ್ನಣೆ ನೀಡುವುದಿಲ್ಲ. ಸರ್ಕಾರ ಆದೇಶ ನೀಡಿದರಷ್ಟೇ ಪ್ರತಿಭಟನೆ ಹಿಂಪಡೆಯುತ್ತೇವೆ ಎಂದು ಎಚ್ಚರಿಸಿದರು. ಸಂಘದ ರಾಜ್ಯ ಕಾರ್ಯದರ್ಶಿ ಎಂ.ಆರ್. ಪಾಟೀಲ, ಕಾರ್ಯದರ್ಶಿ ಮಿಥುನ ದೇಶಪಾಂಡೆ, ಕಾರ್ಯಾಧ್ಯಕ್ಷ ಅಶೋಕ ಬಡಶೆಟ್ಟಿ, ಖಜಾಂಚಿ ಪ್ರವೀಣ ಖೈರೆ, ಬಸವರಾಜ ಬಿಲಕಾರ,
ಮಹಾಂತೇಶ ಗೌಡರ, ಕಾರ್ಯದರ್ಶಿ ರುದ್ರಯ್ಯ ಹಿರೇಮಠ, ರಾಜ್ಯ ಖಜಾಂಚಿ ಶಿವಯೋಗಿ ಹಿರೇಮಠ, ನಾಗೇಂದ್ರ ಹಮ್ಮಿಣಿ, ಚಂದ್ರಮೌಳೇಶ್ವರ ಗುಮ್ಮಗೋಳ, ಇತರರು ಇದ್ದರು. ಇದೇ ವೇಳೆ ಈ ಧರಣಿಗೆ ಬೆಂಬಲ ವ್ಯಕ್ತಪಡಿಸಿರುವ ಬಸವನಗರ ಅಭಿವೃದ್ದಿ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಿದರು.