ಐಫೆಲ್ ಗೋಪುರದಿಂದ ಪ್ಯಾರಿಸ್ ಅನ್ನು ನೋಡಲು ಎರಡು ಕಣ್ಣು ಸಾಲದು. ಪ್ಯಾರಿಸ್‌ಗೆ “ದೀಪಗಳ ನಗರಿ’ ಅಂತ ಏಕೆ ಕರೆಯುತ್ತಾರೆ ಎನ್ನುವುದಕ್ಕೆ ಐಫೆಲ್ ಮೇಲಿನ ಒಂದು ನೋಟವೇ ಉತ್ತರವಾಗಬಲ್ಲುದು. ಪ್ಯಾರಿಸ್‌ನ ಪ್ರವಾಸಿ ತಾಣಗಳೆಲ್ಲ, ರಾತ್ರಿಯ ಬೆಳಕಿನಲ್ಲಿ ಝಗಮಗಿಸುತ್ತಿರುತ್ತವೆ…
ಪ್ಯಾರಿಸ್‌ನ ಯಾವುದೇ ಭಾಗಕ್ಕೆ ಹೋಗಿ, ನಿಮಗೆ ಐಫೆಲ್ ಗೋಪುರದ ಒಂದು ಪಾರ್ಶ್ವವಾದರೂ ಗೋಚರಿಸುತ್ತದೆಯಲ್ಲದೇ, “ನನ್ನಲ್ಲಿಗೆ ಯಾವಾಗ ಬರುತ್ತೀಯಾ?’ ಎಂದು ಕೇಳುವಂತೆ ಅದರ ನೋಟವಿರುತ್ತದೆ. ಕಬ್ಬಿಣವನ್ನು ಅಂಕುಡೊಂಕಾಗಿಸಿ, ದೊಡ್ಡ ದೊಡ್ಡ ನಟ್ ಬೋಲ್ಟ್‌ಗಳನ್ನು ಹಾಕಿ ಹೆಣೆದಿರುವಂತೆ ಗೋಪುರ ಕಾಣಿಸುತ್ತದೆ. ದೂರದಿಂದ ಈ ಗೋಪುರ ಒಂದು ರೀತಿ ಗೋಚರಿಸಿದರೆ, ಹತ್ತಿರದಿಂದ ನೋಡಿದಾಗ ಇದರ ವಯ್ನಾರವೇ ಬೇರೆ. ರಾತ್ರಿ ವೇಳೆಯಂತೂ ಈ ಗೋಪುರದ ಅಂದ ಅವರ್ಣನೀಯ. ಗೋಪುರದ ಎತ್ತರ, ಆಕಾರ, ಅದನ್ನು ಕಟ್ಟಿರುವ ರೀತಿ ನಿಜಕ್ಕೂ ರೋಮಾಂಚನ. ಅದರ ಅಗಾಧ ಗಾತ್ರವನ್ನು ಕಂಡು ಮೂಕವಿಸ್ಮಿತರಾಗುವವರೇ ಹೆಚ್ಚು.
1050 ಅಡಿ ಎತ್ತರವಿರುವ ಈ ಗೋಪುರ ಮೂರು ಅಂತಸ್ತುಗಳನ್ನು ಹೊಂದಿದೆ. 57 ಮೀ., 115 ಮೀ. ಹಾಗೂ 274 ಮೀ.ಗೊಂದರಂತೆ ಒಟ್ಟು ಮೂರು ಅಂತಸ್ತುಗಳಿದೆ. ಗೋಪುರದ ಮೇಲಿನವರೆಗೂ ತಲುಪಲು 1652 ಮೆಟ್ಟಿಲುಗಳಿದೆ. ನಾಲ್ಕು ಕಡೆ ಲಿಫ್ಟ್ಗಳಿವೆ. “ಗುಸ್ತಾವೆ ಐಫೆಲ್’ ಎಂಬ ವ್ಯಕ್ತಿಯ ಕನಸಿನ ಕೂಸಾದ ಈ ಗೋಪುರವನ್ನು 1889ರಲ್ಲಿ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನಕ್ಕಾಗಿ ನಿರ್ಮಿಸಲಾಯಿತು. ನಿರ್ಮಾಣ ಹಂತದಲ್ಲಿರುವಾಗಲೇ ಇದು ಪ್ಯಾರಿಸ್ ಪ್ರಜೆಗಳ ವಿರೋಧಕ್ಕೆ ಗುರಿಯಾಗಿತ್ತು. ಈ ಕಬ್ಬಿಣದ ರಚನೆ ಪ್ಯಾರಿಸಿನ ಅಂದವನ್ನು ಹಾಳುಗೆಡವಬಹುದು ಎಂಬ ಕಾರಣಕ್ಕೆ, ಸ್ವಲ್ಪ ದಿನಗಳ ವರೆಗೆ ಇದರ ನಿರ್ಮಾಣ ಕಾರ್ಯವೂ ಸ್ಥಗಿತಗೊಂಡಿತ್ತು. ಮೊದಲು ಇದು 300 ಮೀಟರ್ ಮಾತ್ರ ಎತ್ತರವಿತ್ತು. ನಂತರ ಬಾಹ್ಯಾಕಾಶ, ವಾಯುಯಾನ ಹಾಗೂ ದೂರದರ್ಶನದ ತಾಂತ್ರಿಕ ಅಗತ್ಯತೆಗಳನ್ನು ಪೂರೈಸಲು ಮತ್ತೆ 20 ಮೀಟರ್ ಎತ್ತರಿಸಲಾಯಿತು. ಈಗ ಇದು ಪ್ಯಾರಿಸಿನ ಅತ್ಯಂತ ಆಕರ್ಷಣೀಯ ಪ್ರವಾಸಿ ತಾಣ. ಅಮೆರಿಕಕ್ಕೆ ಸ್ವಾತಂತ್ರÂ ದೇವತೆಯ ಮೂರ್ತಿ, ಇಂಗ್ಲೆಂಡಿಗೆ ಬಿಗ್‌ಬೆನ್ ಹಾಗೂ ಭಾರತಕ್ಕೆ ತಾಜ್‌ಮಹಲ್‌ನಂತೆ, ಐಫೆಲ್ ಗೋಪುರವು ಫ್ರಾನ್ಸ್‌ಗೆ ಒಂದು ಹೆಮ್ಮೆ.
ಐಫೆಲ್ ಗೋಪುರದಿಂದ ಪ್ಯಾರಿಸ್ ಅನ್ನು ನೋಡಲು ಎರಡು ಕಣ್ಣು ಸಾಲದು. ಪ್ಯಾರಿಸ್‌ಗೆ “ದೀಪಗಳ ನಗರಿ’ ಅಂತ ಏಕೆ ಕರೆಯುತ್ತಾರೆ ಎನ್ನುವುದಕ್ಕೆ ಐಫೆಲ್ ಮೇಲಿನ ಒಂದು ನೋಟವೇ ಉತ್ತರವಾಗಬಲ್ಲುದು. ಪ್ಯಾರಿಸ್‌ನ ಪ್ರವಾಸಿ ತಾಣಗಳೆಲ್ಲ, ರಾತ್ರಿಯ ಬೆಳಕಿನಲ್ಲಿ ಝಗಮಗಿಸುತ್ತಿರುತ್ತವೆ. ಕಣ್ಣುಹಾಯಿಸಿದಷ್ಟೂ ಪ್ಯಾರಿಸ್ ಚಾಚಿಕೊಂಡು, ಗತ್ತು ಬೀರುತ್ತಿರುತ್ತದೆ. ನೋಡುಗನ ದೃಷ್ಟಿಯನ್ನು ಸೋಲಿಸುತ್ತದೆ. ಈ ಗೋಪುರದ ಮೇಲೆ ರೆಸ್ಟೋರೆಂಟ್ ಹಾಗೂ ಕೆಲವು ವಸ್ತು ಮಾರಾಟ ಮಳಿಗೆಗಳಿವೆ. ಅತಿ ಎತ್ತರದಲ್ಲಿ ವ್ಯಾಪಾರ ಮಾಡುವ ಮನಸ್ಸಿದ್ದರೆ, ಇಲ್ಲಿ ಶಾಪಿಂಗ್ ಮಾಡಬಹುದು.
ನಾವು ಲಿಫ್ಟ್ ಏರಿ ಮೂರನೇ ಅಂತಸ್ತಿಗೆ ಹೋದೆವು. ಈ ಅಂತಸ್ತು ಪ್ರವಾಸಿ ವೀಕ್ಷಕರ ಸುರಕ್ಷತೆಯ ದೃಷ್ಟಿಯಿಂದ ಸಂಪೂರ್ಣವಾಗಿ ಗಾಜಿನಿಂದ ಮುಚ್ಚಲ್ಪಟ್ಟಿದ್ದು, ಒಂದು ಕೋಣೆಯ ರೀತಿ ಇದೆ. ಇಲ್ಲಿ ಒಂದು ಮ್ಯೂಸಿಯಂ ಇದ್ದು, ಈ ಗೋಪುರ ಕಟ್ಟುವಾಗಿನ ವಿವಿಧ ಹಂತಗಳ ದೃಶ್ಯಗಳನ್ನು ಎಳೆ ಎಳೆಯಾಗಿ ತೋರಿಸಲಾಗಿದೆ. ಈ ಗೋಪುರದ ರೂವಾರಿ “ಐಫೆಲ್’ನ ಮೇಣದ ಪುತ್ಥಳಿಯೂ ಇಲ್ಲಿದೆ. ಈ ವೀಕ್ಷಣಾಲಯದ ಒಳಗೆ, ಮೇಲೆ, ಸುತ್ತಲೂ ಪ್ರಪಂಚದಲ್ಲಿರುವ ಅತಿ ಎತ್ತರದ ಎಲ್ಲ ಕಟ್ಟಡಗಳ ವಿವರಗಳನ್ನೂ ದಾಖಲಿಸಲಾಗಿದೆ. ಭಾರತದ ಕುತುಬ್ ಮಿನಾರ್‌ನ ವಿವರಣೆಯೂ ಇಲ್ಲಿದೆ. ಈ ಮೂರನೇ ಮಹಡಿಯಿಂದ ಪ್ಯಾರಿಸ್‌ನ ನೋಟ ಇನ್ನೊಂದು ಬಗೆಯದು. ಬೆಳಕಿನ ಹೂದೋಟದಂತೆ ಪ್ಯಾರಿಸ್ ಕಾಣಿಸುತ್ತದೆ. ಗೋಪುರದ ಮೇಲಿನ ಜನಸಂದಣಿ ನೋಡಿ, ಇಷ್ಟೊಂದು ಮಂದಿಯ ಭಾರ ತಡೆಯಲಾರದೆ ಎಲ್ಲಿ ಐಫೆಲ್ ಟವರ್ ಬಿದ್ದು ಹೋಗುವುದೋ ಎಂಬ ಭಯ ಒಮ್ಮೆಯಾದರೂ ಕಾಡುತ್ತದೆ.
ಐದು ನಿಮಿಷದ ಬೆಳಕಿನ ಜಾದೂ
ಹಗಲಿನಲ್ಲಿ ಒಂದು ರೀತಿ ಕಾಣುವ ಐಫೆಲ್ ಗೋಪುರ, ರಾತ್ರಿಯಲ್ಲಿ ಮತ್ತೂಂದು ರೀತಿಯ ಸೌಂದರ್ಯದಿಂದ ಸೆಳೆಯುತ್ತದೆ. ಪ್ರತಿ ತಾಸಿಗೊಮ್ಮೆ ಮಿನುಗುವ ದೀಪಗಳನ್ನು ಐದು ನಿಮಿಷ ಹಾಕುತ್ತಾರೆ. ಆಗ ಇದರ ಅಂದವೇ ಬೇರೆ. ಈ ಸೌಂದರ್ಯವನ್ನು ಸವಿಯಲೆಂದೇ ಪ್ರವಾಸಿಗರು ಕಾದು ಕುಳಿತಿರುತ್ತಾರೆ. ಈ ಮಿನುಗು ದೀಪಗಳು ಆನ್ ಆದಾಗ, ಪ್ರವಾಸಿಗರೆಲ್ಲ “ವ್ಹಾವ್’ ಎಂಬ ಉದ್ಗಾರ ತೆಗೆಯುತ್ತಾರೆ. ನೂರಾರು ಕ್ಯಾಮೆರಾಗಳು ಫ್ಲ್ಯಾಷ್ ಆಗುತ್ತವೆ. ಇದು ಕೇವಲ ಐದು ನಿಮಿಷದ ಸಂಭ್ರಮವಾದ ಕಾರಣ, ಸೆಲ್ಫಿಗಾಗಿ ಜನ ಮುಗಿಬೀಳುತ್ತಾರೆ. ಕತ್ತಲಾದ ಮೇಲೆ ಇದು ನೋಡಲು ಸಿಗುವುದು, ಕೇವಲ 2-3 ಬಾರಿ!
– ಪ್ರಕಾಶ್ ಕೆ. ನಾಡಿಗ್