Advertisement
ಜಿಲ್ಲಾ ಕೇಂದ್ರ, ತಾಲೂಕು ಕೇಂದ್ರದ ಪಟ್ಟಣಗಳಲ್ಲಿ ಮಾತ್ರವಲ್ಲದೇ ಹಲವಾರು ಗ್ರಾಮಗಳ ಈದ್ಗಾ ಮೈದಾನಗಳಲ್ಲಿ ಮುಸಲ್ಮಾನರು ಸಮಾವೇಶಗೊಂಡು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
Related Articles
Advertisement
ಈದ್ ಉಲ್ ಫಿತರ್ ಹಬ್ಬವನ್ನು ಉಪವಾಸದ ಹಬ್ಬವೆಂದು ಕರೆಯಲಾಗುತ್ತದೆ. ಈ ಹಬ್ಬದಲ್ಲಿ ಅಶಕ್ತರು ಬಡವರಿಗೆ ದಾನ ಮಾಡುವುದು ಕಡ್ಡಾಯ. ಅದರಂತೆಯೇ ಮುಸ್ಲಿಮರು ವಯೋವೃದ್ಧರು, ಅಶಕ್ತರಿಗೆ ತಮ್ಮ ಕೈಯ್ಯಲ್ಲಿ ಸಾಧ್ಯವಾದಷ್ಟು ದಾನ ಮಾಡಿ ಕೃತಾರ್ಥರಾದರು.
ಚಾಮರಾಜನಗರ, ಕೊಳ್ಳೇಗಾಲ, ಹನೂರು, ಗುಂಡ್ಲುಪೇಟೆ, ಯಳಂದೂರು, ಹನೂರು ತಾಲೂಕು ಕೇಂದ್ರಗಳಲ್ಲಿ ರಂಜಾನ್ ಹಬ್ಬದ ಸಂಭ್ರಮ ಮನೆ ಮಾಡಿತ್ತು.
ಸಚಿವರಿಂದ ಪ್ರಾರ್ಥನೆ: ನಗರದ ಪಾಲಿಟೆಕ್ನಿಕ್ ಕಾಲೇಜು ಹಿಂಭಾಗದ ಈದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ ಭಾಗವಹಿಸಿ ಮುಸ್ಲಿಮರಿಗೆ ಶುಭ ಕೋರಿದರು.
ಪರಮ ಪವಿತ್ರವಾದ ರಂಜಾನ್ ಹಬ್ಬದಂದು ಎಲ್ಲರಿಗೂ ಶುಭವಾಗಲಿ. ಭಾವೈಕ್ಯತೆ, ಸಮೃದ್ಧಿ ನೆಲೆಸಲಿ ಎಂದು ಹಾರೈಸಿದರು. ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸುವ ಜೊತೆಗೆ ಧರ್ಮಗುರುಗಳಿಗೆ ಶಾಲು ಹೊದಿಸಿ, ಹಾರ ಹಾಕಿ ಅಭಿನಂದಿಸಿದರು. ಈದ್ಗಾ ಮೈದಾನದಲ್ಲಿ ಧರ್ಮ ಗುರುಗಳು ಎಲ್ಲರಿಗೂ ಉಪದೇಶ ನೀಡಿದರು. ಬೆಳಗ್ಗೆ 10 ಗಂಟೆಗೆ ಆರಂಭವಾದ ಪ್ರಾರ್ಥನೆ ಸುಮಾರು 1 ಗಂಟೆ ಕಾಲ ನಡೆಯಿತು.