ತುಮಕೂರು: ನಗರದಲ್ಲಿ ಮುಸ್ಲಿಮರು ಭಾನು ವಾರ ಭಕ್ತಿಭಾವದಿಂದ ಈದ್ ಮಿಲಾದ್ ಹಬ್ಬವನ್ನು ಆಚರಿಸಿದರು.
ಗೂಡ್‌ಶೆಡ್ ಕಾಲೋನಿಯಲ್ಲಿ ವಿವಿಧ ಧಾರ್ಮಿಕ ಆಚರಣೆಗಳ ನಂತರ ಪ್ರಮುಖ ಬಡಾವಣೆಗಳಲ್ಲಿ ಚಾಂದಿನಿ ಮೆರವಣಿಗೆ ನಡೆಯಿತು.
ಈ ವೇಳೆ ಮಾತನಾಡಿದ ಮಾಜಿ ಶಾಸಕ ಡಾ. ಎಸ್.ರಫೀಕ್‌ಅಹಮದ್, ಪ್ರವಾದಿ ಮಹಮದರು ಹುಟ್ಟಿದ ಪವಿತ್ರ ದಿನ ಈದ್ ಮಿಲಾದ್ ಆಚರಣೆ. ಎಲ್ಲೆಡೆ ಮುಸ್ಲಿಮರು ಭಕ್ತಿ, ಸಂಭ್ರಮದಿಂದ ಈದ್- ಮಿಲಾದ್ ಆಚರಿಸುತ್ತಿದ್ದಾರೆ. ಪ್ರವಾದಿಗಳ ಶಾಂತಿ, ಭಾವೈಕ್ಯತೆಯ ಸಂದೇಶ ಸಾರುತ್ತಿದ್ದಾರೆ ಎಂದು ಹೇಳಿದರು.
ಬಡವರಿಗೂ ಸಹಾಯ ಮಾಡಿ: ಎಲ್ಲಾ ಮಸೀದಿ ಗಳಲ್ಲಿ ಆಯಾ ಸಮಿತಿಯವರು ಊಟದ ವ್ಯವಸ್ಥೆ ಮಾಡಿದ್ದಾರೆ. ಪ್ರವಾದಿಗಳು ಹೇಳಿದಂತೆ ನಾವು ಊಟ ಮಾಡುವ ಮೊದಲು ನಮ್ಮ ಅಕ್ಕಪಕ್ಕದ ಬಡವರು ಇದ್ದರೆ ಮೊದಲು ಅವರಿಗೆ ಊಟ ಕೊಡಬೇಕು. ಅಂತಹ ಪದ್ಧತಿ ಮುಂದು ವರಿಯುತ್ತಿದೆ ಎಂದು ತಿಳಿಸಿದರು.
ಭಾವೈಕ್ಯತೆಯಿಂದ ಆಚರಿಸೋಣ: ಮಾಜಿ ಶಾಸಕ ಎಸ್.ಷಫಿ ಅಹಮದ್ ಮತನಾಡಿ, ಶಾಂತಿ, ಸೌಹಾರ್ದತೆಯ ಸಂಕೇತವಾದ ಈದ್ ಮಿಲಾದ್ ಹಬ್ಬವನ್ನು ಎಲ್ಲರೂ ಭಾವೈಕ್ಯತೆಯಿಂದ ಆಚರಿ ಸೋಣ ಎಂದು ಹೇಳಿ ಹಬ್ಬದ ಶುಭಾಶಯ ಕೋರಿದರು. ಮಾನವೀಯ ಸಂದೇಶ ಸಾರೋಣ: ಕಾಂಗ್ರೆಸ್ ಮುಖಂಡ ಇಕ್ಬಾಲ್ ಅಹಮದ್ ಮಾತನಾಡಿ, ಯಾವುದೇ ಜಾತಿ, ಧರ್ಮದವರೇ ಆಗಲಿ, ಎಲ್ಲರೂ ಶಾಂತಿ ಸಹನೆಯಿಂದ ಬಾಳಬೇಕು ಎಂದು ಪ್ರವಾದಿಗಳು ಹೇಳಿದ್ದಾರೆ. ಪ್ರವಾದಿಗಳ ಮಾನವೀಯ ಸಂದೇಶಗಳನ್ನು ಸಾರೋಣ ಎಂದು ನುಡಿದರು.
ನಗರ ಪಾಲಿಕೆ ಮೇಯರ್ ಪ್ರಭಾವತಿ, ಉಪ ಮೇಯರ್ ಟಿ.ಕೆ.ನರಸಿಂಹಮೂರ್ತಿ, ಸದಸ್ಯರಾದ ಸೈಯದ್ ನಯಾಜ್ ಅಹ್ಮದ್, ಜೆ.ಕುಮಾರ್, ಎಚ್ .ಡಿ.ಕೆ.ಮಂಜುನಾಥ್, ಡಿವೈಎಸ್ಪಿ ಎಚ್.ಶ್ರೀನಿವಾಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೆಹಬೂಬ್ ಪಾಷ, ಅಕ್ರಂಪಾಷ, ಮಸೀದಿ ಮುಖ್ಯಸ್ಥರಾದ ಮಹಮದ್ ಪೀರ್, ಇಮ್ರಾನ್ ಪಾಷ ಸೇರಿ ವಿವಿಧ ಮುಖಂಡರು ಭಾಗವಹಿಸಿದ್ದರು.
ಅಲಂಕೃತ ಚಾಂದಿನಿ ಮೆರವಣಿಗೆ: ನಗರದಲ್ಲಿ ಮುಸ್ಲಿಮರು ಅಲಂಕೃತ ಚಾಂದಿನಿ ಮೆರವಣಿಗೆ ನಡೆಸಿದರು, ಗೂಡ್ ಶೆಡ್ ಕಾಲೋನಿ ಯಿಂದ ಹೊರಟ ಮೆರವಣಿಗೆ ಶಾಂತಿ ನಗರ, ಅಳಶೆಟ್ಟಿಕೆರೆ ಪಾಳ್ಯ, ಬನಶಂಕರಿ ಮುಖ್ಯರಸ್ತೆ, ನಜರಾಬಾದ್, ಟಿಪ್ಪು ನಗರ, ಹೆಗಡೆ ಕಾಲೋನಿ ಮುಂತಾದ ಪ್ರದೇಶಗಳ ಪ್ರಮುಖ ರಸ್ತೆಗಳಲ್ಲಿ ಸಾಗಿ ಈದ್ಗಾ ಮೊಹಲ್ಲಾ ಬಳಿ ಕೊನೆ ಗೊಂಡಿತು.