ಯಾದಗಿರಿ: ಪರೋಪಕಾರದ ಮೂಲಕ ಮಾನವ ಜೀವನವನ್ನು ಸಾರ್ಥಕಪಡಿಸಿಕೊಳ್ಳ ಬೇಕು ಎಂದು ಪರ್ವೇ ಪಟೇಲ್ ಹೇಳಿದರು.
ನಗರದ ಹತ್ತಿಕುಣಿ ಕ್ರಾಸ್ ಬಳಿ ಮುಸ್ಲಿಂ ಯುವ ಬಳಗ ಹಾಗೂ ಡಾ. ಸುರಗಿಮಠ ರಕ್ತ ನಿಧಿ ಕೇಂದ್ರ ಆಶ್ರಯದಲ್ಲಿ ಪ್ರವಾದಿ ಮಹ್ಮದ್ ಪೈಗಂಬರ್ ಅವರ ಜನ್ಮದಿನ ಅಂಗವಾಗಿ ಆಯೋಜಿಸಿದ್ದ ಬೃಹತ್ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.
ಜೀವನದಲ್ಲಿ ನಾವು ಗಳಿಸಿ ಆಸ್ತಿ ಅಂತಸ್ತು ಯಾವುದೇ ಶಾಶ್ವತವಲ್ಲ. ಬದುಕಿರುವಾಗಲೇ ಇತರರೆ ಸಹಾಯವಾಗುವಂತೆ ಬದುಕು ಸಾಗಿಸಿ ಕಷ್ಟದಲ್ಲಿದ್ದವರಿಗೆ ಆಸರೆಯಾಗಬೇಕು ಎಂದರು. ಈ ನಿಟ್ಟಿನಲ್ಲಿ ರಕ್ತದಾನ ಮಹಾದಾನವಾಗಿದ್ದು, ಯುವ ಬಳಗದಿಂದ ರಕ್ತದಾನ ಶಿಬಿರ ಆಯೋಜಿಸಿ ಅಗತ್ಯವಿರುವವರಿಗೆ ನೆರವಾಗುವಸಾಮಾಜಿಕ ಕಾರ್ಯ ಮಾಡಿರುವುದು ತಮಗೆ ಹೆಮ್ಮೆಯಿದೆ ಎಂದರು.
ಡಾ.ಸುರಗಿಮಠ ಮಾತನಾಡಿ, ಪ್ರಸಕ್ತ ದಿನಗಳಲ್ಲಿ ಜನರಿಗೆ ರಕ್ತದ ಅವಶ್ಯಕತೆ ಇದೆ. ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ರೋಗಿಗಳಿಗೆ ಶಿಬಿರದ ಮೂಲಕ ಸಂಗ್ರಹಿಸಿದ ರಕ್ತ ಸಹಾಯಕವಾಗಲಿ ಎಂಬ ದೃಷ್ಟಿಕೋನದಿಂದ ಏರ್ಪಡಿಸಿದ್ದೇವೆ. ನಿರೀಕ್ಷೆಗೂ ಮೀರಿ ಯುವಕರು ರಕ್ತದಾನ ಮಾಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ ಎಂದರು.
ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಶಿಬಿರಕ್ಕೆ ಆಗಮಿಸಿ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು. ಶಿಬಿರದಲ್ಲಿ ಯುವ ಬಳಗದ ಸೀರಾಜ್ ರಜ್ವಿ, ಶೇಖ್ ಖಮರಲ್ ಇಸ್ಲಾಂ, ಇಮ್ರಾನ್ ಸಗರಿ, ರಿಯಾಜ್, ಆರೀಫ್ ಸಗರಿ ಸೇರಿದಂತೆ ರಕ್ತ ನಿಧಿ ಕೇಂದ್ರದ ಸಿಬ್ಬಂದಿ ಇದ್ದರು.