Advertisement
ನಗರದ ಬಾವುಟಗುಡ್ಡೆಯ ಈದ್ಗಾ ಸಹಿತ ನಗರ ಮತ್ತು ನಗರದ ಹೊರ ವಲಯದ ಎಲ್ಲ ಪ್ರಮುಖ ಮಸೀದಿಗಳಲ್ಲಿ ಬೆಳಗ್ಗೆ ಸಾಮೂಹಿಕ ನಮಾಝ್, ಧರ್ಮ ಗುರುಗಳಿಂದ ಈದ್ ಸಂದೇಶ ಸಹಿತ ಪ್ರವಚನ, ಪರಸ್ಪರ ಈದ್ ಶುಭಾಶಯ ವಿನಿಮಯ ನಡೆಯಿತು.
ಬಾವುಟಗುಡ್ಡೆಯ ಈದ್ಗಾದಲ್ಲಿ ಬೆಳಗ್ಗೆ 8 ಗಂಟೆಗೆ ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಹಬ್ಬದ ವಿಶೇಷ ಪ್ರಾರ್ಥನೆ ಹಾಗೂ ಖುತ್ಬಾ ಪ್ರವಚನ ನೀಡಿದರು. ನೆರೆ ಹಾವಳಿಯ ಹಿನ್ನೆಲೆಯಲ್ಲಿ ಸರಳವಾಗಿ ಹಬ್ಬ ಆಚರಿಸುವಂತೆ ಅವರು ತಮ್ಮ ಪ್ರವಚನದಲ್ಲಿ ಸಲಹೆ ನೀಡಿದರು.ನಮಾಜ್ ಬಳಿಕ ಮುಸ್ಲಿಮರು ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಶಾಸಕ, ಮಾಜಿ ಸಚಿವ ಯು.ಟಿ. ಖಾದರ್ ಸಹಿತ ಹಲವು ಮಂದಿ ಗಣ್ಯರು ಉಪಸ್ಥಿತರಿದ್ದರು. ವಿವಿಧೆಡೆ ಆಚರಣೆ
ಕುದ್ರೊಳಿ ಜಾಮಿಯಾ ಮಸೀದಿಯಲ್ಲಿ ಧರ್ಮ ಗುರು ಮುಫ್ತಿ ಮನ್ನಾನ್ ಸಾಹೇಬ್ ಅವರ ನೇತೃತ್ವದಲ್ಲಿ ನಮಾಝ್, ಪ್ರವಚನ ನಡೆಯಿತು. ನಗರದ ವಾಸ್‌ಲೇನ್‌ನ ಮಸ್ಜಿದುಲ್ ಎಹ್ಸಾನ್, ಪಂಪ್‌ವೆಲ್‌ನ ತಖ್ವಾ ಮಸೀದಿ, ಹಂಪನಕಟ್ಟೆಯ ಮಸ್ಜಿದ್ ನೂರ್, ಸಿಟಿ ಬಸ್ ನಿಲ್ದಾಣ ಸಮೀಪದ ಇಬ್ರಾಹಿಂ ಖಲೀಲ್, ಬಂದರ್‌ನ ಕಚ್ಚಿ ಮಸೀದಿ, ಬಜಾಲ್ ನಂತೂರು ಬದ್ರಿಯಾ ಜುಮಾ ಮಸೀದಿ ಸಹಿತ ವಿವಿಧೆಡೆ ನಮಾಝ್ ನಡೆಯಿತು.
Related Articles
Advertisement
ದೇಣಿಗೆ ಸಂಗ್ರಹನಮಾಝ್ ಬಳಿಕ ಕೆಲವು ಮಸೀದಿಗಳ ಆವರಣದಲ್ಲಿ ಕೆಲವು ಮುಸ್ಲಿಂ ಸಂಘ – ಸಂಸ್ಥೆಗಳು ನೆರೆ ಸಂತ್ರಸ್ತರಿಗಾಗಿ ದೇಣಿಗೆ ಸಂಗ್ರಹಿಸಿದವು. ಮಂಗಳೂರು ಪೊಲೀಸ್ ಆಯುಕ್ತರಿಂದ ಹಬ್ಬದ ಶುಭಾಶಯ
ಮಂಗಳೂರಿನ ಪೊಲೀಸ್ ಆಯುಕ್ತರಾದ ಡಾ| ಪಿ.ಎಸ್. ಹರ್ಷ ಅವರು ಸೋಮವಾರ ಬೆಳಗ್ಗೆ ಬಾವುಟಗುಡ್ಡೆಯ ಈದ್ಗಾದಲ್ಲಿ ಬಕ್ರೀದ್ ಹಬ್ಬದ ಪ್ರಾರ್ಥನೆ ನಡೆಸುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿ ಮುಸ್ಲಿಮರಿಗೆ ಹಬ್ಬದ ಶುಭಾಶಯಗಳನ್ನು ಸಲ್ಲಿಸಿದರು. ಹಬ್ಬಗಳು ಸೋದರತೆ ಮತ್ತು ಶಾಂತಿ- ಸಾಮರಸ್ಯವನ್ನು ಸಾರುತ್ತವೆ ಎಂದು ಹೇಳಿದ ಅವರು ಮಂಗಳೂರಿನ ಎಲ್ಲ ಜನರಿಗೆ ಹಬ್ಬಗಳ ಸೀಸನ್‌ನ ಶುಭಾಶಯಗಳನ್ನು ಸಲ್ಲಿಸುವುದಾಗಿ ತಿಳಿಸಿದರು. ವರಮಹಾಲಕ್ಷ್ಮೀ, ಬಕ್ರೀದ್ ಮತ್ತು ಮುಂದೆ ನಮ್ಮ ಅತ್ಯಂತ ದೊಡ್ಡ ಹಬ್ಬ ಸ್ವಾತಂತ್ರ್ಯೋತ್ಸವವು ಬರುತ್ತಿದೆ. ಎಲ್ಲರಿಗೂ ಹಬ್ಬಗಳ ಶುಭಾಶಯಗಳು ಎಂದರು.