Advertisement

ಕೈ ಮೇಲೆ ಚಲಿಸುವ ಮೊಟ್ಟೆ

06:00 AM Nov 29, 2018 | Team Udayavani |

ಹಗ್ಗದ ಮೇಲೆ ನಡೆಯುವ ಸಾಹಸವನ್ನು ಮನುಷ್ಯನನ್ನು ನೋಡಿರುತ್ತೀರಿ… ಸರ್ಕಸ್‌ನಲ್ಲಿ ಪುಟಾಣಿ ಸ್ಟೂಲಿನ ಮೇಲೆ ಆನೆ ಬ್ಯಾಲೆನ್ಸ್‌ ಮಾಡುವುದನ್ನೂ ನೋಡಿರುತ್ತೀರಿ… ಕೈಬೆರಳ ಮೇಲೆ ಕೋಲನ್ನೋ, ಪುಸ್ತಕವನ್ನೋ ಬ್ಯಾಲೆನ್ಸ್‌ ಮಾಡುವುದನ್ನೂ ನೋಡಿರಬಹುದು. ಈ ವಸ್ತುಗಳನ್ನು ಬ್ಯಾಲೆನ್ಸ್‌ ಮಾಡುವುದಕ್ಕಿಂತಲೂ ರಿಸ್ಕಿಯಾದುದು ಮೊಟ್ಟೆಯನ್ನು ಬ್ಯಾಲೆನ್ಸ್‌ ಮಾಡುವುದು. ಏಕೆಂದರೆ ಕೋಲು, ಪುಸ್ತಕ ಕೆಳಕ್ಕೆ ಬಿದ್ದರೆ ಏನೂ ಆಗದು. ಹೆಚ್ಚೆಂದರೆ ಮಣ್ಣಾದೀತಷ್ಟೆ. ಆದರೆ ಮೊಟ್ಟೆ ಕೆಳಕ್ಕೆ ಬಿದ್ದರೆ ಒಡೆಯುತ್ತೆ ಅಲ್ಲವೇ? ಹೇಳಿದಂತೆ ಕೇಳುವ ಮೊಟ್ಟೆಯ ಜಾದೂ ಇಲ್ಲಿದೆ.

Advertisement

ಪ್ರದರ್ಶನ
ಜಾದೂಗಾರ ಒಂದು ಮೊಟ್ಟೆಯನ್ನು ತನ್ನ ಅಂಗೈ ಮೇಲೆ ಇಟ್ಟು, “ಕಮಾನ್‌ ಕಮಾನ್‌’ ಎನ್ನುತ್ತಾನೆ. ಅವನ ಮಾತಿನಂತೆ ಮೊಟ್ಟೆ ತಾನಾಗಿಯೇ ಅಂಗೈಯಿಂದ ಮೇಲ್ಮುಖವಾಗಿ ಉರುಳಿ ಬರುತ್ತದೆ. ಒಂದು ಕೈಯಿಂದ ಇನ್ನೊಂದು ಕೈಗೂ ಹರಿದಾಡುತ್ತದೆ. ಜಾದೂಗಾರ ಕಮಾನ್‌ ಕಮಾನ್‌ ಅಂದಾಗ ಮಾತ್ರ ಮೊಟ್ಟೆ ಹರಿದಾಡುತ್ತೆ. ಇಲ್ಲದಿದ್ದರೆ ಸುಮ್ಮನಿರುತ್ತೆ. ಅವನು ಸಾಕಿದ, ಪಳಗಿಸಿದ ಮೊಟ್ಟೆಯಂತೆ. 

ಬೇಕಾಗುವ ವಸ್ತುಗಳು
ಮೊಟ್ಟೆ, ಉದ್ದನೆಯ ಒಂದು ಕೂದಲು, ಜೇನು ಮೇಣ (ಇದು ಹಾರ್ಡ್‌ವೇರ್‌ ಶಾಪ್‌ನಲ್ಲಿ ಸಿಗುತ್ತದೆ)

ಮಾಡುವ ವಿಧಾನ
ಮೊದಲು ಮೊಟ್ಟೆಗೆ ಸೂಜಿಯಿಂದ ಮೇಲೆ ಮತ್ತು ಕೆಳಗೆ ಒಂದೊಂದು ಚಿಕ್ಕ ತೂತು ಮಾಡಿ. ಒಂದು ತೂತಿನಿಂದ ಜೋರಾಗಿ ಊದಿದರೆ ಮತ್ತೂಂದು ತೂತಿನಿಂದ ಮೊಟ್ಟೆಯೊಳಗಿರುವ ದ್ರವವೆಲ್ಲಾ ಸೋರಿ ಹೋಗುತ್ತದೆ. ಈಗ ಮೊಟ್ಟೆ ಖಾಲಿ ಖಾಲಿ ಮತ್ತು ಹಗುರ. ಮೊಟ್ಟೆ ಖಾಲಿಯಿರುವುದು ಯಾರಿಗೂ ತಿಳಿಯುವುದಿಲ್ಲ. ಈಗ ಮೊಟ್ಟೆಯನ್ನು ಪಳಗಿಸೋದು ಸುಲಭ. ಪ್ರದರ್ಶನಕ್ಕೆ ಮೊದಲೇ ಉದ್ದನೆಯ ಕೂದಲಿನ ಎರಡು ತುದಿಗೂ ಜೇನು ಮೇಣವನ್ನು ಹಚ್ಚಿ. ಒಂದು ತುದಿಯನ್ನು, ನೀವು ಧರಿಸಿರುವ ಶರ್ಟ್‌(ಚಿತ್ರ ಗಮನಿಸಿ) ಅಥವಾ ನಿಮ್ಮ ಉಡುಪಿನ ಮುಂಭಾಗದಲ್ಲಿ ತಕ್ಷಣ ನೋಡಿದರೆ ಕಾಣಿಸದ ಹಾಗೆ ಅಂಟಿಸಿಕೊಳ್ಳಿ. ಇನ್ನೊಂದು ತುದಿಯನ್ನು ಮೊಟ್ಟೆಯ ಒಂದು ತುದಿಗೆ ಹಚ್ಚಿ. ಕೂದಲಾದ್ದರಿಂದ ಯಾರ ಕಣ್ಣಿಗೂ ಅಷ್ಟಾಗಿ ಕಾಣುವುದಿಲ್ಲ. ಜಾದೂಗಾರ ಪ್ರೇಕ್ಷಕರಿಂದ ಅಂತರ ಕಾಪಾಡಿಕೊಂಡರೆ ಮ್ಯಾಜಿಕ್‌ ಯಶಸ್ವಿಯಾದಂತೆಯೇ. ಈಗ ಮೊಟ್ಟೆಯನ್ನು ಅಂಗೈ ಮೇಲೆಲಿಟ್ಟು, “ಕಮಾನ್‌ ಕಮಾನ್‌’ ಎನ್ನುತ್ತ ಅಂಗೈಯನ್ನು ನೀವೇ ಮುಂದಕ್ಕೆ ತಳ್ಳಿ. ಮೊಟ್ಟೆ ಆ ಕೈಯ ತುದಿಗೆ ಬಂದ ನಂತರ ಮತ್ತೂಂದು ಕೈಯನ್ನು ತುಸು ಮುಂದಕ್ಕೆ ತಳ್ಳುತ್ತಲೇ ಇದ್ದರೆ ಮೊಟ್ಟೆ ತಾನಾಗಿಯೇ ಮೇಲೆ ಚಲಿಸುತ್ತಿರುವ ಹಾಗೆ ಕಾಣುತ್ತದೆ. ಇದೊಂದು ಕಣಟ್ಟಿನ ಟ್ರಿಕ್‌. ಕೈಯಿಂದ ಕೈ ಬದಲಾಯಿಸುತ್ತಾ ಹೋದಂತೆ  ಮೊಟ್ಟೆ ತಾನಾಗಿಯೇ ಅಂಗೈಯಿಂದ ಮೇಲ್ಮುಖವಾಗಿ ಚಲಿಸುತ್ತಿರುವಂತೆ ಪ್ರೇಕ್ಷಕನಿಗೆ ಭಾಸವಾಗುತ್ತದೆ. 
ಮ್ಯಾಜಿಕ್‌ ಟ್ರಿಕ್‌ ವಿಡಿಯೋ ಕೊಂಡಿ-  goo.gl/Kioqyh

ನಿರೂಪಣೆ-ಗಾಯತ್ರಿ ಯತಿರಾಜ್‌ 

Advertisement
Advertisement

Udayavani is now on Telegram. Click here to join our channel and stay updated with the latest news.

Next