Advertisement

ವಾರದಲ್ಲಿ ಹಠಾತ್‌ ಕುಸಿತ ಕಂಡ ಮೊಟ್ಟೆ ದರ

02:40 AM Apr 02, 2019 | sudhir |

ಬಜಪೆ: ಕೋಳಿಮೊಟ್ಟೆ ಪೌಷ್ಟಿಕ ಆಹಾರಗಳಲ್ಲಿ ಒಂದು. ಸಮಾರಂಭ, ಬೇಡಿಕೆಯನ್ನು ಹೊಂದಿಕೊಂಡು ಅದರ ದರ ಏರಿಳಿಕೆ ಕಾಣುತ್ತದೆ. ಆದರೆ ಈಗ ಒಂದೇ ವಾರದಲ್ಲಿ ಅದರ ದರ ಒಂದು ಮೊಟ್ಟೆಗೆ ರೂ. 1.25ನಷ್ಟು ಇಳಿಕೆ ಕಂಡಿದ್ದು, ಕೋಳಿ ಫಾರ್ಮ್ನವರು ನಷ್ಟಕ್ಕೊಳಗಾಗುವ ಸ್ಥಿತಿಗೆ ತಲುಪಿದ್ದಾರೆ.

Advertisement

ವಾತಾವರಣದ ತಾಪಮಾನ ಹೆಚ್ಚಿದಾಗ ಮೊಟ್ಟೆ ದರ ಇಳಿಕೆಯಾ
ಗುತ್ತದೆ. ಈಗ ಕಂಡುಬಂದಿರುವ ಹಠಾತ್‌ ದರ ಇಳಿಕೆಗೆ ಇದು ಒಂದು ಕಾರಣ. ತಾಪ ಹೆಚ್ಚಿರುವಾಗ ಮೊಟ್ಟೆಯನ್ನು ಹೆಚ್ಚು ಕಾಲ ದಾಸ್ತಾನು
ಇರಿಸಿಕೊಳ್ಳಲಾಗುವುದಿಲ್ಲ, ತೀವ್ರ ಸೆಖೆಯಿದ್ದರೆ ಕೋಳಿಗಳು ಸತ್ತುಹೋಗುವ ಸಾಧ್ಯತೆಯೂ ಇದೆ. ಜನರು ಬೇಸಗೆಯಲ್ಲಿ ಸೇವಿಸುವ ಪ್ರಮಾಣ ಕಡಿಮೆ.

ಇನ್ನೊಂದು ಕಾರಣ ಕ್ರೈಸ್ತರ ಕಪ್ಪು ದಿನಗಳು
ಕ್ರೈಸ್ತ ಸಮುದಾಯದವರು ಈಗ ಕಪ್ಪು ದಿನಗಳನ್ನು ಆಚರಿಸುತ್ತಿದ್ದಾರೆ. ಈ ದಿನಗಳಲ್ಲಿ ಅವರು ಮಾಂಸಾಹಾರ ಸೇವಿಸುವುದಿಲ್ಲ. ಬೇಡಿಕೆ ಕಡಿಮೆಯಾಗಲು ಇದೂ ಒಂದು ಕಾರಣ. ಕಪ್ಪು ದಿನಗಳು ಕೊನೆಯಾಗುವುದು ಎ. 19ರ ಗುಡ್‌ಫ್ರೈಯಂದು.

ಸಮಾರಂಭ ಕಡಿಮೆ
ಈಗ ಸಮಾರಂಭಗಳು ಕಡಿಮೆಯಾಗಿದ್ದು, ಇದರಿಂದಲೂ ಮೊಟ್ಟೆಗೆ
ಬೇಡಿಕೆ ಕಡಿಮೆಯಾಗಿದೆ. ಸಮಾರಂಭಗಳು ಮುಂದೂಡಿಕೆಯಾಗಲು ಚುನಾವಣೆಯ ಮಾದರಿ ನೀತಿ ಸಂಹಿತೆಯೂ ಒಂದು ಕಾರಣವಾಗಿದೆ. ಪಾರ್ಟಿ, ಸತ್ಕಾರಕೂಟಗಳಿಗೆ ನೀತಿ ಸಂಹಿತೆಯ ಅಡ್ಡಿ ಇದೆ.

ಚಿಲ್ಲರೆ ವ್ಯಾಪಾರ ದರ ಕಡಿಮೆಯಾಗಿಲ್ಲ
ಇಷ್ಟಾದರೂ ಚಿಲ್ಲರೆ ವ್ಯಾಪಾರದ ಮೊಟ್ಟೆಯ ದರ ಕಡಿಮೆಯಾಗಿಲ್ಲ ಎನ್ನುತ್ತಾರೆ ಹಳ್ಳಿ ಭಾಗಗಳ ಗ್ರಾಹಕರು. ಇದರಿಂದ ಹೆಚ್ಚಿನ ಅಂಗಡಿಗಳಲ್ಲಿ ಈಗಲೂ ಮೊಟ್ಟೆ ಒಂದಕ್ಕೆ 5.50 ರೂ.ಗಳಲ್ಲಿ ಮಾರಾಟ ಮಾಡಲಾಗುತ್ತದೆ. ರಖಂ ದರ 4.95 ರೂ. ಇದ್ದಾಗಲೂ ಚಿಲ್ಲರೆ ದರ ಇದೇ ಇತ್ತು. ಹೆಚ್ಚಿನ ಚಿಲ್ಲರೆ ವ್ಯಾಪಾರಸ್ಥರು ಇದು ಹಿಂದಿನ ರಖಂ ದರದಲ್ಲಿ ಖರೀದಿಸಿದ ಮೊಟ್ಟೆ ಎಂಬುದಾಗಿ ಸಮಜಾಯಿಶಿ ನೀಡುತ್ತಾರೆ ಎನ್ನುತ್ತಾರೆ ಗ್ರಾಹಕರು. ರಖಂ ಮೊಟ್ಟೆ ದರ ಕಡಿಮೆಯಾದರೆ ಸಾಲದು, ಚಿಲ್ಲರೆ ಮಾರಾಟ ದರ ಕಡಿಮೆಯಾದರೆ ಮಾತ್ರ ಬೇಡಿಕೆ ಜಾಸ್ತಿಯಾಗಬಹುದು ಎಂದು ಓರ್ವ ಗ್ರಾಹಕರು ತಿಳಿಸಿದ್ದಾರೆ.

Advertisement

ಮೊಟ್ಟೆ ಕೆಡುವ ಭೀತಿ
ಸೆಖೆ ಜಾಸ್ತಿಯಿರುವ ಕಾರಣ ಮೊಟ್ಟೆಯನ್ನು ಹೆಚ್ಚು ಕೊಂಡೊಯ್ಯುವುದಿಲ್ಲ. ಎರಡು ದಿನಕ್ಕೆ ಬೇಕಾಗುವಷ್ಟೇ ಖರೀದಿಸುತ್ತೇವೆ. ಚಿಲ್ಲರೆ ದರ ಇಳಿಸಿದರೆ ನಮ್ಮಂತಹ ಗ್ರಾಹಕರಿಗೂ ಅನುಕೂಲ.
– ಪೂರ್ಣಿಮಾ, ಸುಂಕದಕಟ್ಟೆಯ ಗೃಹಿಣಿ

ದಾವಣಗೆರೆ ಮಾರುಕಟ್ಟೆಯಲ್ಲಿ ಮೊಟ್ಟೆಗೆ ಇಲ್ಲಿನ ದರಕ್ಕಿಂತ 35 ಪೈಸೆ ಕಡಿಮೆ ಇರುತ್ತದೆ. ಸೆಕೆ, ಕಪ್ಪುದಿನ ಕಾರಣಗಳಿಂದ ಮೊಟ್ಟೆ ಮಾರಾಟ ಕಡಿಮೆಯಾಗಿದೆ. 1 ವಾರದಿಂದ ದರ ಒಮ್ಮೆಲೇ ಕುಸಿದಿದೆ. ಸೆಕೆ ಜಾಸ್ತಿಯಾದರೆ ದರ ಇನ್ನೂ ಕಡಿಮೆಯಾಗಬಹುದು.
– ನಿತ್ಯಾನಂದ ಶೆಟ್ಟಿ, ರಖಂ ಮೊಟ್ಟೆ ವ್ಯಾಪಾರಿ

Advertisement

Udayavani is now on Telegram. Click here to join our channel and stay updated with the latest news.

Next