Advertisement

ಒಂದು ಮೊಟ್ಟೆಯ ಕಥೆ-ದರ ಭಾರೀ ಕುಸಿತ!

07:00 AM Apr 03, 2018 | |

ಬಜಪೆ: ಜಿಲ್ಲೆಯಲ್ಲಿ ಕಳೆದ ಹದಿನೈದು ದಿನಗಳಿಂದ ಮೊಟ್ಟೆಯ ದರ ಭಾರೀ ಇಳಿಕೆಯನ್ನು ಕಂಡಿದೆ. ಒಂದು ಮೊಟ್ಟೆಯ ರಖಂ ದರ 4 ರೂ. ಇದ್ದುದು ಈಗ 3.50 ರೂ.ಗೆ ಕುಸಿದಿದೆ. ಇಲ್ಲಿಯ ಮೊಟ್ಟೆಯ ದರವು ದಾವಣಗೆರೆ ಮಾರುಕಟ್ಟೆಯನ್ನು ಅವಲಂಬಿಸಿದ್ದು, ಅಲ್ಲಿ ಈಗ ಮೊಟ್ಟೆಯೊಂದಕ್ಕೆ ರಖಂ ದರ 3.20 ರೂ. ಇದು ಕಳೆದ 8 ವರ್ಷಗಳಲ್ಲಿ ದಾಖಲೆ ದರ ಕುಸಿತ. 8 ವರ್ಷಗಳ ಹಿಂದೆ ಅಂದರೆ 2009ರಲ್ಲಿ ಮೊಟ್ಟೆಯ ದರ 3.20ಕ್ಕೆ ಇಳಿದಿತ್ತು.

Advertisement

ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಮೊಟ್ಟೆಯ ದರ 4 ರೂ. ಗಳಿಂದ ಕೆಳಕ್ಕೆ ಇಳಿಯುತ್ತಾ ಬಂದಿತ್ತು. ಈಗ 3.50 ರೂ.ನಲ್ಲಿದೆ. ಮೊಟ್ಟೆ ದರ ಕುಸಿತದಿಂದಾಗಿ ಕೋಳಿ ಫಾರ್ಮ್ ನವರು ನಷ್ಟ ಅನುಭವಿಸುತ್ತಿದ್ದಾರೆ. ಅನೇಕರು ಸಾಲ ಮರುಪಾವತಿಸಲು ಕೂಡ ಸಾಧ್ಯ ವಾಗದ ಪರಿಸ್ಥಿತಿಯಲ್ಲಿದ್ದಾರೆ. ಎಂಟು ವರ್ಷಗಳ ಹಿಂದೆ ಅಂದರೆ 2009ರಲ್ಲಿ ಇದೇ ಪರಿಸ್ಥಿತಿ ಉಂಟಾಗಿತ್ತು. ಆಗ ಮೊಟ್ಟೆಯ ದರ 3.20 ರೂ.ಗೆ ಇಳಿದಿತ್ತು. ನಷ್ಟ ಅನುಭವಿಸಿ ಜಿಲ್ಲೆಯ ಅನೇಕ ಕೋಳಿ ಫಾರ್ಮ್ಗಳು ಮುಚ್ಚಿದ್ದವು. ಈಗ ದರ ಅದೇ ಮಟ್ಟಕ್ಕೆ ಕುಸಿದಿದ್ದು, ಇನ್ನೊಂದೆಡೆ ಕೋಳಿ ಫಾರ್ಮ್ ನಿರ್ವಹಣೆಯ ಖರ್ಚು ದುಪ್ಪಟ್ಟಾಗಿದೆ. ಇದರಿಂದ ಅನಿವಾರ್ಯವಾಗಿ ಮುಚ್ಚಬೇಕಾದ ಪರಿಸ್ಥಿತಿ ಎದುರಾಗಬಹುದೇ ಎಂಬ ಆತಂಕ ಕೋಳಿ ಫಾರ್ಮ್ ಮಾಲಕರದು. 

ದಾವಣಗೆರೆಯಲ್ಲಿ ಕೋಳಿ ಫಾರ್ಮ್ಗಳು ಅತ್ಯಧಿಕ ಸಂಖ್ಯೆಯಲ್ಲಿದ್ದು, ಅಲ್ಲಿನ ಮಾರುಕಟ್ಟೆಯನ್ನು ಹೊಂದಿಕೊಂಡು ಕರಾವಳಿಯಲ್ಲಿ ಮೊಟ್ಟೆ ದರ ಏರಿಳಿತ ಕಾಣುತ್ತದೆ. ಬೆಂಗಳೂರು, ಮೈಸೂರು, ಚೆನ್ನೈ ಮಾರುಕಟ್ಟೆಗಳೂ ಇಲ್ಲಿಯ ಮೊಟ್ಟೆ ದರದ ಮೇಲೆ ಪರಿಣಾಮ ಬೀರುತ್ತವೆ. ದಾವಣಗೆರೆಯಲ್ಲಿ ಜೋಳ, ಸೂರ್ಯಕಾಂತಿ ಹಿಂಡಿ ಹಾಗೂ ಇತರ ಕೋಳಿ ಆಹಾರಗಳು ಸಾಕಷ್ಟು ಸಿಗುವ ಕಾರಣ ಅಲ್ಲಿ ಕೋಳಿ ಫಾರ್ಮ್ಗಳು ಹೆಚ್ಚಿವೆ. ಮೈಸೂರು, ಬೆಂಗಳೂರುಗಳಲ್ಲಿ ಹವಾಮಾನ ತಂಪು. ಆದರೆ ದಾವಣಗೆರೆಯಲ್ಲಿ ಸೆಕೆ ಜಾಸ್ತಿಯಾಗಿದೆ. ಇದಕ್ಕಾಗಿ ಛಾವಣಿಗೆ ನೀರು ಸಿಂಪಡಣೆ ಮಾಡಲಾಗುತ್ತದೆ. 

ಸೆಕೆ ಜಾಸ್ತಿಯಾದಷ್ಟು ಮೊಟ್ಟೆ ಉತ್ಪಾದನೆ ಕೂಡ ಕಡಿಮೆ. ಪ್ರದೇಶವನ್ನು ಹೊಂದಿಕೊಂಡು ಮೊಟ್ಟೆಗೆ ಬೇಡಿಕೆ ಇರುತ್ತದೆ. ಸಮಾರಂಭಗಳ ಋತುವಿನಲ್ಲಿ ಬೇಡಿಕೆ ಹೆಚ್ಚು. ಕರಾವಳಿಯಲ್ಲಿಯೂ ಈಗ ಸೆಕೆ ಇರುವ ಕಾರಣ ಮೊಟ್ಟೆಯ ಉತ್ಪಾದನೆ ಕೂಡ ಕಡಿಮೆಯಾಗುತ್ತಿದೆ. ಸೆಕೆಯಿಂದ ಕೋಳಿಗಳನ್ನು ರಕ್ಷಿಸಲು ಕೋಳಿ ಫಾರ್ಮ್ ಛಾವಣಿಗೆ ನೀರು ಸಿಂಪಡಣೆ, ನೆನೆಸಿದ ಗೋಣಿ ಚೀಲ ಹಾಸುವುದು, ಸ್ಪ್ರಿಂಕ್ಲರ್‌ ಮೂಲಕ ನೀರು ಹಾಯಿಸಬೇಕಾದ ಪರಿಸ್ಥಿತಿಯಲ್ಲಿ ಫಾರ್ಮ್ನ ಮಾಲಕರು ಇದ್ದಾರೆ. 

ಮೊಟ್ಟೆ ಉಷ್ಣ , ತಿನ್ನುವವರು ಕಡಿಮೆ
ಈಗ ತಾಪಮಾನ ಹೆಚ್ಚಿದ್ದು, ಮೊಟ್ಟೆ ಉಷ್ಣ ಪ್ರಕೃತಿಯ ಆಹಾರ ಎಂಬ ನಂಬಿಕೆಯೂ ಮೊಟ್ಟೆ ಬಳಕೆ ಕುಸಿಯಲು ಕಾರಣವಾಗಿದೆ. ಸೆಕೆಯಿಂದಾಗಿ ಮೊಟ್ಟೆ ತಿನ್ನುವವರು ಕಡಿಮೆ, ಇದರಿಂದ ಬೇಡಿಕೆ ಕಡಿಮೆಯಾಗಿದೆ. ಇದು ದರ ಕುಸಿತಕ್ಕೆ ಒಂದು ಕಾರಣ ಎನ್ನುವ ಅಭಿಪ್ರಾಯವಿದೆ. ಮಾರುಕಟ್ಟೆಯಲ್ಲಿ ಫಾಸ್ಟ್‌ ಫ‌ುಡ್‌, ಚೈನೀಸ್‌ ಫ‌ುಡ್‌ ಜನಪ್ರಿಯತೆ ಹೆಚ್ಚಿದ್ದು, ಮೊಟ್ಟೆ ಮತ್ತು ಮೊಟ್ಟೆಯಿಂದ ತಯಾರಿಸುವ ತಿನಿಸುಗಳು ಜನಪ್ರಿಯತೆ ಕಳೆದುಕೊಂಡಿವೆ. ಶಾಲೆ, ವಿದ್ಯಾರ್ಥಿ ನಿಲಯಗಳಲ್ಲಿ ಮೊಟ್ಟೆ ನೀಡಲಾಗುತ್ತಿದ್ದು, ಈಗ ರಜೆ ಬಂದಿರುವುದರಿಂದ ಗಮನಾರ್ಹ ಪ್ರಮಾಣದಲ್ಲಿ ಬೇಡಿಕೆ ಕುಸಿತವಾಗಿದೆ. ಸೆಕೆಗೆ ಮೊಟ್ಟೆ ಬೇಗನೆ ಹಾಳಾಗುತ್ತದೆ, ಕೊಂಡು ತಂದರೆ ಎರಡು ದಿನ ದೊಳಗೆ ಉಪಯೋಗಿಸಬೇಕಾಗುತ್ತದೆ. ಹೀಗಾಗಿ ಒಮ್ಮೆಗೆ ಹೆಚ್ಚು ಮೊಟ್ಟೆ ಖರೀದಿಸುವಂತಿಲ್ಲ. ದರ ಕಡಿಮೆಯಾಗಲು ಇದೂ ಕಾರಣ ಎನ್ನುವುದು ಕೆಲವು ಗೃಹಿಣಿಯರ ಮಾತು.

Advertisement

ಗರಿಷ್ಠ ದರ, ಕನಿಷ್ಠ ದರ
ಕಳೆದ ಡಿಸೆಂಬರ್‌ ಮೊದಲ ವಾರದಲ್ಲಿ ಮೊಟ್ಟೆ ಗರಿಷ್ಠ ದರವನ್ನು ತಲಪಿತ್ತು. ಆಗ ರಖಂ ದರ 5.70ಕ್ಕೆ ಆಗಿತ್ತು. ಆಗ ಚಿಲ್ಲರೆ ದರ 6.50 ರೂ. ಇತ್ತು. ಕ್ರಿಸ್ಮಸ್‌ ವೇಳೆ ದರ ಇಳಿಕೆ ಕಂಡಿತ್ತು. ಈಗ ಎಂಟು ವರ್ಷಗಳ ಹಿಂದಿನ ಕನಿಷ್ಠ ದರಕ್ಕೆ ತಲುಪಿದೆ.

ಕೋಳಿ ಮಾಂಸದ ದರವೂ ಕುಸಿತ 
ಮೊಟ್ಟೆ ದರ ಕುಸಿತದಿಂದಾಗಿ ಕೋಳಿ ಫಾರ್ಮ್ ಮಾಲಕರು ನಷ್ಟ ಅನುಭವಿಸುತ್ತಿದ್ದಾರೆ. ಇರುವ ಕೋಳಿಗಳನ್ನು ಸಿಕ್ಕಿದ ಬೆಲೆಗೆ ಮಾರಾಟ ಮಾಡಿ ಫಾರ್ಮ್ ಮುಚ್ಚುವ ಪರಿಸ್ಥಿತಿಯಲ್ಲಿದ್ದಾರೆ. ಇದರಿಂದಾಗಿ ಪರೋಕ್ಷವಾಗಿ ಕೋಳಿಮಾಂಸ ದರದ ಮೇಲೂ ಪರಿಣಾಮ ಉಂಟಾಗಿದ್ದು, ದರ ಇಳಿಕೆಯಾಗಿದೆ. ಎಪ್ರಿಲ್‌-ಮೇ ತಿಂಗಳಿನಲ್ಲಿ ಸಭೆ ಸಮಾರಂಭಗಳು ಹೆಚ್ಚು ಇರುವುದರಿಂದ ದರದಲ್ಲಿ ಏರಿಕೆ ಉಂಟಾಗಬಹುದು ಎಂಬ ನಿರೀಕ್ಷೆಯಲ್ಲಿ ಫಾರ್ಮ್ ಮಾಲಕರಿದ್ದಾರೆ.

ಹೋಳಿ ಹಬ್ಬ ಆಚರಣೆ ಹಾಗೂ ಕ್ರೈಸ್ತರ 40 ದಿನಗಳ ವ್ರತಾ ಚಾರಣೆಯ ಸಂದರ್ಭದಲ್ಲಿ ಶುಭ ಸಮಾರಂಭಗಳು ನಡೆಯದೆ ಇದ್ದುದೂ ಮೊಟ್ಟೆ ದರ ಕುಸಿಯಲು ಒಂದು ಕಾರಣವಾಗಿದೆ. ಇದರ ಜತೆ ಮಾರುಕಟ್ಟೆ, ವ್ಯಾಪಾರ ವಹಿವಾಟು ಕುಸಿತ, ಸೆಕೆ ಇನ್ನಿತರ ಕಾರಣಗಳಾಗಿವೆ. ಶಾಲಾ-ಕಾಲೇಜು ರಜೆಯಿಂದಲೂ ವ್ಯಾಪಾರಕ್ಕೆ ಪೆಟ್ಟು ಬಿದ್ದಿದೆ. 8 ವರ್ಷಗಳ ಹಿಂದೆ ಕೋಳಿ ಫಾರ್ಮ್ ಹೊಂದಿದ್ದೆ, ಆಗ ಮೊಟ್ಟೆ ದರ ಕುಸಿದ ಕಾರಣ ನಷ್ಟ ಅನುಭವಿಸಿ ಫಾರ್ಮ್ ಮುಚ್ಚ ಬೇಕಾಯಿತು. ಈಗ ದಾವಣಗೆರೆ, ಮೈಸೂರು ಗಳಿಂದ ಮೊಟ್ಟೆ ತರಿಸಿ, ಲೈನ್‌ ಸೇಲ್‌ ಮಾಡುತ್ತಿದ್ದೇನೆ ಎಂದು ಬಜಪೆ ಸುಂಕದ ಕಟ್ಟೆಯ ನಿತ್ಯಾನಂದ ರೈ ಅವರು ಹೇಳುತ್ತಾರೆ.

ಸುಬ್ರಾಯ ನಾಯಕ್‌ ಎಕ್ಕಾರು

Advertisement

Udayavani is now on Telegram. Click here to join our channel and stay updated with the latest news.

Next