ಬಜಪೆ: ಕಳೆದ ಒಂದು ವಾರದಲ್ಲಿ 5.40 ರೂ. ಇದ್ದ ಮೊಟ್ಟೆ ರಖಂ ದರ ಒಮ್ಮೆಲೇ 5.90 ರೂ.ಗೆ ಏರಿಕೆ ಕಂಡಿದೆ. ಕಿಸ್ಮಸ್ ಹಬ್ಬ ಸಮೀಪಿಸುತ್ತಿರುವಂತೆ ಕೇಕ್‌ಗಾಗಿ ಮೊಟ್ಟೆ ದರ ಯಾವಾಗಲೂ ಏರಿಕೆಯಾಗುವುದು ಸಾಮಾನ್ಯ. ಅದರೆ ಈಗಲೇ ಏರಿಕೆ ಕಂಡಿರುವುದು ಡಿಸೆಂಬರ್ ತಿಂಗಳಲ್ಲಿ 7 ರೂ. ತನಕ ಸಮೀಪಿಸುವ ಸಾಧ್ಯತೆ ಕಂಡು ಬರುತ್ತಿದೆ.
ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ವಾರದಲ್ಲಿ 2 ದಿನ ಮೊಟ್ಟೆ, ಅಪೌಷ್ಟಿಕ ಮಕ್ಕಳಿಗೆ ವಾರದಲ್ಲಿ 5 ದಿನ ಮೊಟ್ಟೆ, ಅಂಗನವಾಡಿ ಶಿಕ್ಷಕಿ,ಸಹಾಯಕಿ, ಗರ್ಭಿಣಿ, ಬಾಣಂತಿ ಯರಿಗೆ ತಿಂಗಳಿಗೆ 25 ಮೊಟ್ಟೆ, ಸರಕಾರಿ ಶಾಲೆಯ 1ರಿಂದ 8ನೇ ತರಗತಿಯ ಮಕ್ಕಳಿಗೆ ನವೆಂಬರ್‌ನಿಂದ ಮಾರ್ಚ್ ತನಕ 8 ಮೊಟ್ಟೆಗ ಳನ್ನು ನೀಡಲಾಗುತ್ತಿದೆ. ಈ ಎಲ್ಲ ಕಾರಣಗಳಿಂದ ಮೊಟ್ಟೆಗೆ ಬೇಡಿಕೆ ಬಂದಿದೆ. ದೊಡ್ಡ ಫಾರ್ಮ್ಗಳ ಮುಚ್ಚುಗಡೆಯಿಂದ ಮೊಟ್ಟೆಗಳ ಉತ್ಪಾದನೆಯಲ್ಲಿ ಇಳಿಕೆಯಾಗಿರು ವುದೂ ದರ ಏರಲು ಕಾರಣವಾಗಿದೆ.
ಈಗ ಸ್ಪರ್ಧೆ ಇಲ್ಲ ಟೆಂಪೊಗಳಲ್ಲಿ ಮೊಟ್ಟೆ ಲೈನ್ ಮಾಡುವವರಲ್ಲಿ ಈಗ ಸ್ಪರ್ಧೆ ಕಾಣುತ್ತಿಲ್ಲ.ಮೊನ್ನೆತನಕ ಕಡಿಮೆ ದರದಲ್ಲಿ ಅಂಗಡಿಯವರಿಗೆ ಕೊಟ್ಟು ಹೋಗುತ್ತಿದ್ದ ಲೈನ್ ಸೇಲ್ ಟೆಂಪೊಗಳು ಈಗ ಕಾಣಿಸುತ್ತಿಲ್ಲ. ಎಲ್ಲ ಕಡೆ ದರ ಒಂದೇ ಆಗಿರುತ್ತದೆ.
ಸ್ಥಳೀಯ ಮೀನು ಸಂಸ್ಕರಣ ಘಟಕಗಳು ಮುಚ್ಚಿರುವುದರಿಂದ ಮೀನು ಹೊರಗಡೆ ಬೇರೆ ರಾಜ್ಯಕ್ಕೆ ಹೋಗದೆ ಇಲ್ಲಿಯೇ ಮಾರಾಟ ವಾಗುತ್ತಿರುವುದರಿಂದ ಮೊಟ್ಟೆದರ ಅಷ್ಟು ಏರಿಕೆಯಾಗಿಲ್ಲ. ಡಿಸೆಂಬರ್‌ನಲ್ಲಿ ಕ್ರಿಸ್ಮಸ್ ಕೇಕ್‌ಗಾಗಿ ಮೊಟ್ಟೆಗೆ ಬೇಡಿಕೆ ಬರುವ ಕಾರಣ 7 ರೂ. ಆಗುವ ಲಕ್ಷಣಗಳು ಕಾಣುತ್ತಿದೆ ಎಂದು ಸ್ಥಳೀಯ ಮೊಟ್ಟೆ ವ್ಯಾಪಾರಿ ನಿತ್ಯಾನಂದ ಶೆಟ್ಟಿ ತಿಳಿಸಿದ್ದಾರೆ.