ಮುಂಬಯಿ : ಸುನೀಲ್ ಚೆಟ್ರಿ ನಾಯಕತ್ವದ ಭಾರತ ಫುಟ್‌ಬಾಲ್ ತಂಡ ಇತ್ತೀಚೆಗೆ ಸತತ ಮೂರು ಜಯ ಗಳಿಸಿ ಏಷ್ಯಾ ಕಪ್ ಫುಟ್‌ಬಾಲ್‌ಗೆ ಅರ್ಹತೆ ಪಡೆದಿದೆ. ಇಂತಹ ಹೊತ್ತಿನಲ್ಲಿ ತಂಡದ ಕೋಚ್ ಇಗರ್ ಸ್ಟಿಮಾಕ್ ಹಲವು ಗಂಭೀರ ಸಂಗತಿಗಳನ್ನು ಪ್ರಸ್ತಾಪಿಸಿದ್ದಾರೆ. ಭಾರತದ ದೇಶೀಯ ಫುಟ್‌ಬಾಲ್ ಲೀಗ್ ಅನ್ನು (ಐಎಸ್‌ಎಲ್) ಐಪಿಎಲ್ ವೇಳಾಪಟ್ಟಿ ನೋಡಿಕೊಂಡು ಆಯೋಜಿಸಲಾಗುತ್ತಿದೆ; ಕ್ರಿಕೆಟ್‌ಗೊಸ್ಕರ ಫುಟ್‌ಬಾಲನ್ನು ಬಲಿಕೊಡಬಾರದು ಎಂದು ನೇರವಾಗಿ ಹೇಳಿದ್ದಾರೆ.
ಫುಟ್‌ಬಾಲನ್ನು ಭಾರತದಲ್ಲಿ ಜನಪ್ರಿಯಗೊಳಿಸ ಬೇಕೆಂದಾದರೆ ಅದನ್ನು ಸ್ವತಂತ್ರವಾಗಿಯೇ ನಡೆಸಬೇಕು. ಬೇರೆ ಕೂಟಗಳ ವೇಳಾಪಟ್ಟಿ ನೋಡಿಕೊಂಡು ಐಎಸ್‌ಎಲ್ ವೇಳಾಪಟ್ಟಿ ರೂಪಿಸುವುದನ್ನು ನಿಲ್ಲಿಸಬೇಕು. ಭಾರತ ಕ್ರಿಕೆಟ್‌ನಂತಹ ಜನಪ್ರಿಯ ಕ್ರೀಡೆಯನ್ನು ಹೊಂದಿರುವುದು ಖುಷಿಯ ವಿಚಾರ. ಆದರೆ ಇನ್ನೊಂದು ಕ್ರೀಡೆಯೂ ಅಷ್ಟೇ ಜನಪ್ರಿಯತೆ ಪಡೆಯುತ್ತದೆ ಎಂದು ಹೆದರಬಾರದು. ಕ್ರಿಕೆಟ್‌ಗಾಗಿ ಫುಟ್‌ಬಾಲ್ ನಷ್ಟ ಅನುಭವಿಸಬಾರದು ಎಂದು ಸ್ಟಿಮಾಕ್ ಹೇಳಿದರು.
ಭಾರತದಲ್ಲಿ ಐಪಿಎಲ್ ನೇರಪ್ರಸಾರ ಮಾಡುವ ವಾಹಿನಿಯೇ ಫುಟ್‌ಬಾಲ್ ಲೀಗನ್ನೂ ಪ್ರಸಾರ ಮಾಡುತ್ತದೆ. ಇವನ್ನೆಲ್ಲ ನೋಡಿಕೊಂಡೇ ಈ ಕೂಟವನ್ನು ಏರ್ಪಡಿಸಲಾಗುತ್ತಿದೆ. ಫುಟ್‌ಬಾಲ್ ಸುಧಾರಿಸಬೇಕಾದರೆ ಇವನ್ನೆಲ್ಲ ಬದಿಗಿಟ್ಟು ಯೋಚಿಸಬೇಕು ಎಂದಿದ್ದಾರೆ.
ಸವಾಲುಗಳು…
“ನಾನು ಭಾರತದ ಕೋಚ್ ಹುದ್ದೆ ವಹಿಸಿ ಕೊಂಡಾಗ ನಿರೀಕ್ಷೆ ಮಾಡಿದ ಸ್ಥಿತಿ ಬೇರೆಯೇ ಇತ್ತು. ಪ್ರತಿಯೊಬ್ಬರೂ ಭಾರತ ತಂಡವನ್ನು ಔನ್ನತ್ಯಕ್ಕೇರಿ ಸುವುದಕ್ಕೆ ಭಾರೀ ಬದ್ಧತೆ ಹೊಂದಿದ್ದಾರೆಂದು ನಾನು ಭಾವಿಸಿದ್ದೆ. ಆದರೆ ಪರಿಸ್ಥಿತಿ ಹಾಗಿಲ್ಲ. ಪ್ರಮುಖ ಆಟಗಾರರು ಕೆಲವೊಮ್ಮೆ ಶಿಬಿರಕ್ಕೆ ಬರುವಾಗ ತಮ್ಮ ಕ್ಲಬ್‌ಗಳ ಕರ್ತವ್ಯ ಮುಗಿಸಿ ಕೇವಲ ಒಂದು ಅಥವಾ ಅರ್ಧ ಗಂಟೆ ಮುಂಚೆ ಬಂದಿದ್ದೂ ಇದೆ. ಇನ್ನು ಕೆಲವೊಮ್ಮೆ ಬಹುಮುಖ್ಯ ಆಟಗಾರರು ಶಿಬಿರಗಳ ವೇಳೆ ಗಾಯವಾಗಿದೆ ಎಂದು ದಿಢೀರ್ ಮಾಹಿತಿ ನೀಡಿದ್ದಾರೆ. ಹಾಗಾಗಿ ಆಡುವ 11 ಮಂದಿಯಲ್ಲಿ ಹೊಂದಾಣಿಕೆ ಮಾಡಿಕೊಳ್ಳುವ ಪರಿಸ್ಥಿತಿ ಬರುತ್ತಿತ್ತು’ ಎಂದು ಸ್ಟಿಮಾಕ್ ತಾವೆದುರಿಸಿದ ಸವಾಲನ್ನು ವಿವರಿಸಿದ್ದಾರೆ.