Advertisement

ಸಂತ್ರಸ್ತರಲ್ಲಿ ಸಮಾಲೋಚನೆಯಿಂದ ಆತ್ಮವಿಶ್ವಾಸ ತುಂಬಲು ಪ್ರಯತ್ನ

07:00 AM Aug 23, 2018 | Team Udayavani |

ಮಡಿಕೇರಿ:  ಕೊಡಗು ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದ ಆಸ್ತಿ-ಪಾಸ್ತಿ ನಷ್ಟ, ಜೀವ ಹಾನಿ ಅನುಭವಿಸಿರುವ ಕುಟುಂಬಗಳಲ್ಲಿ ಅತ್ಮವಿ ಶ್ವಾಸ ತುಂಬುವ ಮೂಲಕ ಬದುಕಿನಲ್ಲಿ ಭರವಸೆ ಮೂಡಿಸಲು ಮಾನಸಿಕ ತಜ್ಞರಿಂದ ಸಂತ್ರಸ್ತರಿಗೆ ಸಮಾಲೋಚನೆ ಮಾಡಿಸುವ ಕಾರ್ಯವನ್ನು ಆರಂಭಿಸಲಾಗಿದೆ.

Advertisement

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುರುವ ಮಾನಸಿಕ ತಜ್ಞ ಡಾ|ರೂಪೇಶ್‌ ಗೋಪಾಲ್‌ ಅವರು  ಮಂಗಳವಾರ ಜಿಲ್ಲಾಸ್ಪತ್ರೆಯ ಸಭಾಂಗಣದಲ್ಲಿ  ಜಿಲ್ಲೆಯ ವೈದ್ಯರುಗಳು, ಮಾನಸಿಕ ತಜ್ಞರು ಹಾಗೂ ಎಂಎಸ್‌ಡಬ್ಲ್ಯೂ 
ವಿದ್ಯಾರ್ಥಿಗಳಿಗೆ ಈ ಕುರಿತು ತರಬೇತಿ ಕಾರ್ಯಾಗಾರ ನಡೆಸಿಕೊಟ್ಟರು.

ಸಂತ್ರಸ್ತರೊಂದಿಗೆ ಸಮಾಲೋಚನೆ  
ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಆಸ್ತಿ-ಪಾಸ್ತಿ ನಷ್ಟ ಅನುಭವಿಸಿ ಕಣ್ಣ ಮುಂದೆಯೇ ಎಲ್ಲವನ್ನೂ ಕಳೆದುಕೊಂಡಿರುವ ಸಂತ್ರಸ್ತರ ದೇಹದ ಆರೋಗ್ಯ ಕಾಪಾಡುವುದರ ಜೊತೆಗೆ ಅವರಲ್ಲಿ ಮಾನಸಿಕ ಸ್ಥೈರ್ಯವನ್ನು ತುಂಬಿ  ಆರೋಗ್ಯ ಪೂರ್ಣ ಮನಸ್ಸುಗಳನ್ನು ನಿರ್ಮಿಸುವ ಮೂಲಕ ಸಂತ್ರಸ್ತರಲ್ಲಿ ಬದುಕಿನ ಬಗ್ಗೆ ಭರವಸೆ ಮೂಡಿಸುವ ಕಾರ್ಯವನ್ನು ಆರಂಭಿಸಲಾಗಿದೆ.
ಆ ನಿಟ್ಟಿನಲ್ಲಿ ಸರ್ಕಾರದಿಂದ ಪ್ರಾರಂಭಿಸಲಾಗಿರುವ ಪರಿಹಾರ ಕೇಂದ್ರಗಳಲ್ಲಿ ಸಂತ್ರಸ್ತರೊಂದಿಗೆ ಸಮಾಲೋಚನೆ ನಡೆಸುವ ಕಾರ್ಯ ಮಂಗಳವಾರದಿಂದಲೇ ಆರಂಭಿಸಲಾಗಿದೆ.

ಭರವಸೆ ಮೂಡಿಸಬೇಕು
ಎಲ್ಲವನ್ನೂ ಕಳೆದುಕೊಂಡಿರುವ ಸಂತ್ರಸ್ತರಿಗೆ ಸದ್ಯ ಆ ಆಘಾತದಿಂದ ಹೊರತರುವ ಕಾರ್ಯ ಆಗಬೇಕಿದೆ. ದಿಢೀರ್‌ ತೊಂದರೆಗೆ ಒಳಗಾದವರ ಮನಸ್ಸು, ಬುದ್ಧಿ ಚುರುಕಾಗಿರುವುದಿಲ್ಲ. ದೇಹದ ಹಾರ್ಮೋನ್‌ನಲ್ಲಿ ವ್ಯತ್ಯಾಸವಾಗುವುದರಿಂದ ಅವರಲ್ಲಿ ಯೋಚನಾ ಶಕ್ತಿ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ. ಈಗಾಗಲೆ ಬಹಳಷ್ಟು ಜನ ಇದಕ್ಕೆ ಒಳಗಾಗಿರುವ ಸಾಧ್ಯತೆ ಇದ್ದು, ಗಾಬರಿ, ಹೆದರಿಕೆ ಅವರ ಮೊದಲ ಸಮಸ್ಯೆಯಾಗಿದೆ.  ಇದು ಮಾನಸಿಕ ತೊಂದರೆಯ ಮೊದಲ ಗುಣ ಲಕ್ಷಣವಾಗಿದ್ದು, ಕಿರಿಕಿರಿ, ಸಿಟ್ಟು, ಮಕ್ಕಳ ಮೇಲೆ, ತಂದೆ-ತಾಯಿ, ಗಂಡ-ಹೆಂಡತಿಯರ ನಡುವೆ ಆಸಕ್ತಿ ಮತ್ತು ಸಿಟ್ಟಾಗುವುದು ಇಂತಹ ಲಕ್ಷಣಗಳು ಕಂಡುಬರುವ ಸಾಧ್ಯತೆ ಇರುತ್ತದೆ.  ಪ್ರೀತಿ ಪಾತ್ರರನ್ನು ಅಥವಾ ಮನೆಗಳನ್ನು ಕಳೆದುಕೊಂಡು, ಮುಂದೇನು ಎನ್ನುವ ಭಯ ಅವರಲ್ಲಿ ಆವರಿಸಿರುತ್ತದೆ.  ಇಂತಹವರಿಗೆ ಸಮಾಲೋಚನೆ ನಡೆಸುವ ಮೂಲಕ, ಸರ್ಕಾರ ನಿಮ್ಮೊಂದಿಗೆ ಸದಾ ಇದೆ.  ಪರಿಹಾರ ಕಾರ್ಯಗಳನ್ನು ಮಾಡುತ್ತಿದೆ.  ಸದ್ಯ ಸರ್ಕಾರ ಜನರ ಪ್ರಾಣ ರಕ್ಷಣೆಗೆ ಮೊದಲ ಆದ್ಯತೆ ನೀಡುತ್ತಿದ್ದು, ಆಸ್ತಿ-ಪಾಸ್ತಿ ನಷ್ಟದ ಬಗ್ಗೆ ಮಾಹಿತಿ ಪಡೆದು, ಶೀಘ್ರದಲ್ಲೇ ಪುನರ್ವಸತಿ ಕಾರ್ಯ, ಮನೆ ಕಳೆದುಕೊಂಡವರಿಗೆ ಮನೆ, ಜೀವ ಹಾನಿ ಅನುಭವಿಸಿರುವವರಿಗೆ ಹಣಕಾಸಿನ ನೆರವು ಪರಿಹಾರ ದೊರಕಿಸುವ ಬಗ್ಗೆ ಮನವರಿಕೆ ಮಾಡಿಕೊಡಬೇಕಿದೆ ಎಂದು ರೂಪೇಶ್‌ ತಿಳಿಸಿದರು.

11 ಕಡೆಗಳಲ್ಲಿ ಪರಿಹಾರ ಕೇಂದ್ರ
ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನಲ್ಲಿಯೇ ಅತವೃಷ್ಟಿಯಿಂದ ಹೆಚ್ಚು ಹಾನಿ ಸಂಭವಿಸಿದೆ.  ಮಡಿಕೇರಿಯಲ್ಲಿ ಸಂತ್ರಸ್ತರಿಗಾಗಿ 11 ಕಡೆಗಳಲ್ಲಿ ಪರಿಹಾರ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಮೈತ್ರಿ ಹಾಲ್‌, ಕೂರ್ಗ್‌ ಕಮ್ಯುನಿಟಿ ಹಾಲ್‌, ಅಂಬೇಡ್ಕರ್‌ ಭವನ, ಚೌಡೇಶ್ವರಿ ಹಾಲ್‌, ಬ್ರಾಹ್ಮಣರ ಕಲ್ಯಾಣ ಮಂಟಪ, ಗೆಜ್ಜೆ ಸಂಗಪ್ಪ ಕಲ್ಯಾಣ ಮಂಟಪ, ಕೊಡವ ಸಮಾಜ, ಓಂಕಾರ ಸದನ, ಜಿ.ಪಂ ವಿದ್ಯಾನಗರ, ಜನರಲ್‌ ತಿಮ್ಮಯ್ಯ ಸ್ಕೂಲ್‌, ಜೋಸೆಫ್‌ ಸ್ಕೂಲ್‌ಗ‌ಳಲ್ಲಿ  ಸ್ಥಾಪಿಸಲಾಗಿರುವ ಪರಿಹಾರ ಕೇಂದ್ರಗಳಲ್ಲಿ ಮಾನಸಿಕ ಸಮಾಲೋಚನೆಗಾಗಿ ತಂಡವನ್ನು ರಚಿಸಿ, ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.

Advertisement

ಏಕಾಏಕಿ ಸುರಿದ ಭಾರಿ ಮಳೆಯಿಂದ ಎಲ್ಲವನ್ನೂ ಕಳೆದುಕೊಂಡು ನಿರಾಶ್ರಿತರಾದವರಿಗೆ ಮಾನಸಿಕವಾಗಿ ಮೊದಲು ಕಂಡುಬರುವ ಹೆದರಿಕೆ, ಬೇಜಾರು ಮತ್ತು ಸಿಟ್ಟು, ಈ ಮೂರು ಅಂಶಗಳನ್ನು ನಿವಾರಿಸುವ ಗುರುತರ ಕಾರ್ಯ ಮಾನಸಿಕ ತಜ್ಞ ಸಮಾಲೋಚಕರು ಮಾಡಬೇಕಿದೆ.  ಸಂತ್ರಸ್ತರ ಮಾತುಗಳನ್ನು ತಾಳ್ಮೆಯಿಂದ ಕೇಳಿ, ಬೇಸರಿಸಿಕೊಳ್ಳದೆ ಅವರಲ್ಲಿ ಮಾನಸಿಕ ಸ್ಥೈರ್ಯ ತುಂಬಲು ಇದೇ ಸೂಕ್ತ ಸಮಯವಾಗಿದೆ.  

ಇಲ್ಲದಿದ್ದಲ್ಲಿ, ಅವರ ಯೋಚನಾ ಲಹರಿ ಋಣಾತ್ಮಕ ಅಂಶಗಳತ್ತ ಸೆಳೆಯುವ ಸಾಧ್ಯತೆಗಳಿರುತ್ತವೆ.  ಖನ್ನತೆ, ಮಾದಕಗಳತ್ತ ಮನಸ್ಸು ಜಾರುವುದನ್ನು ತಡೆಗಟ್ಟುವುದು ಸಮಾಲೋಚಕರ ಕರ್ತವ್ಯವಾಗಿದೆ. ಕೆಲ ಕಿಡಿಗೇಡಿಗಳು ಸಮಾಜದ ಸ್ವಾಸ್ಥ ಕೆಡಿಸುವ ಕಾರ್ಯ ಮಾಡುವ ಸಾಧ್ಯತೆಗಳಿರುತ್ತವೆ.  ಮಾನಸಿಕ ಸ್ಥೈರ್ಯ ತುಂಬುವ ಸಮಯದಲ್ಲಿ ಸಮಾಲೋಚಕರು ಇಂತಹ ಸಾಧ್ಯತೆಗಳ ಬಗ್ಗೆ ಸಂತ್ರಸ್ತರಲ್ಲಿ ಮನವರಿಕೆ ಮಾಡಿಕೊಡಬೇಕು ಎಂದು ಅವರು ವಿವರಿಸಿದರು. 

ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತರಲ್ಲಿ ಮಹಿಳೆಯರು ಮತ್ತು ಮಕ್ಕಳನ್ನು ಗುರುತಿಸಿ ಅವರಿಗೆ ಗುಂಪು ಅಥವಾ ವೈಯಕ್ತಿಕ ಸೃಜನಶೀಲ ಚಟುವಟಿಕೆಗಳಾದ ಹಾಡಿನ ಸ್ಪರ್ಧೆ, ಕ್ರೀಡೆಗಳು,  ಮಕ್ಕಳಿಗೆ ಆಟಿಕೆ ಸಾಮಾಗ್ರಿಗಳನ್ನು ನೀಡಿ, ಮನಸ್ಸು ಉಲ್ಲಸಿತಗೊಳಿಸುವಂತಹ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಜಿಲ್ಲಾಡಳಿತ ನೆರವು ನೀಡಲು ಸಿದ್ಧವಿದೆ.  ಪುರುಷರು ಮಾದಕ ಹವ್ಯಾಸಗಳತ್ತ ಜಾರದಂತೆ ನೋಡಿಕೊಳ್ಳಬೇಕಿದೆ.  ಸಮಾಲೋಚಕರು ಈ ಕುರಿತು ಕಾರ್ಯ ಕೈಗೊಳ್ಳಬೇಕು  ಎಂದು ಡಾ.ರೂಪೇಶ್‌ ಸಲಹೆ ನೀಡಿದರು. ಮಾನಸಿಕ ರೋಗ ತಜ್ಞರಾಗಿರುವ ಡಾ. ರೂಪೇಶ್‌ ಗೋಪಾಲ್‌ ಅವರು ಭಾರತೀಯ ಸೇನೆಯಲ್ಲಿ ಐದು ವರ್ಷಗಳ ಕಾಲ ಮಾನಸಿಕ ರೋಗ ತಜ್ಞರಾಗಿ ಸೇವೆ ಸಲ್ಲಿಸಿದ್ದು, ಸೈನ್ಯದಲ್ಲೂ ಸೈನಿಕರಿಗೆ ಮಾನಸಿಕ ಸ್ಥೈರ್ಯ ತುಂಬುವಂತಹ ಕಾರ್ಯವೆಸಗಿದ ಅಪಾರ ಅನುಭವ ಹೊಂದಿದವರು. 

ಯೋಗಾಭ್ಯಾಸ ಬಲ 
ವಿಚಲಿತಗೊಂಡ  ಮನಸ್ಸನ್ನು ಶಾಂತ ಗೊಳಿಸಲು, ಸಮಾಧಾನ ಗೊಳಿಸಲು ಯೋಗ ಒಳ್ಳೆಯ ಮಾರ್ಗ.  ಸಂತ್ರಸ್ತರ ಪರಿಹಾರ ಕೇಂದ್ರ‌ಗಳಲ್ಲಿ, ಸಂತ್ರಸ್ತರ ಮನಸ್ಸನ್ನು ಸಮಾಧಾನಪಡಿಸುವ ನಿಟ್ಟಿನಲ್ಲಿ 30 ಜನರ ತಂಡ ಕೊಡಗು ಜಿಲ್ಲೆಗೆ ಆಗಮಿಸಿದ್ದು, ಅವರು ಪರಿಹಾರ ಕೇಂದ್ರಗಳಲ್ಲಿ ಮಹಿಳೆಯರು, ಮಕಳ ಸಹಿತ ಎಲ್ಲರಿಗೂ ಯೋಗಾಭ್ಯಾಸ ಮಾಡಿಸಲಿದ್ದಾರೆ ಎಂದು ಡಾ| ರೂಪೇಶ್‌ ಅವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next