Advertisement

ಕೃಷ್ಣ ಉಳಿಸಿಕೊಳ್ಳುವ ಪ್ರಯತ್ನಕ್ಕೆ ತಾತ್ಕಾಲಿಕ ತಡೆ

03:45 AM Feb 03, 2017 | Team Udayavani |

ಬೆಂಗಳೂರು: ಕಾಂಗ್ರೆಸ್‌ ಪಕ್ಷಕ್ಕೆ ಗುಡ್‌ಬೈ ಹೇಳಿರುವ ಹಿರಿಯ ರಾಜಕಾರಣಿ ಎಸ್‌.ಎಂ.ಕೃಷ್ಣ ತಮ್ಮ ರಾಜೀನಾಮೆ ನಿರ್ಧಾರ ಅಚಲ ಎಂದು ಹೈಕಮಾಂಡ್‌ ಗೆ ಸ್ಪಷ್ಟಪಡಿಸಿದ್ದು, ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಎರಡು ಬಾರಿ ದೂರವಾಣಿ ಮೂಲಕ ಮಾತನಾಡಿ
ಮನವೊಲಿಸಲು ಯತ್ನಿಸಿದ ನಂತರವೂ ಕೃಷ್ಣ ಅವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸದ ಕಾರಣ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳುವ ಪ್ರಯತ್ನಕ್ಕೆ ಹೈಕ ಮಾಂಡ್‌ ತಾತ್ಕಾಲಿಕ ವಿರಾಮ ಹಾಕಿದೆ.

Advertisement

ಈ ಹಿನ್ನೆಲೆಯಲ್ಲಿ ಎಸ್‌. ಎಂ.ಕೃಷ್ಣ ಅವರನ್ನು ಭೇಟಿ ಮಾಡಿ  ಮನವೊಲಿಸುವ ಯತ್ನವನ್ನು ಸಿಎಂ ಸಿದ್ದರಾಮಯ್ಯ ಸಹ ಕೈ ಬಿಟ್ಟಿದ್ದಾರೆ.
ಕಳೆದ ಒಂದು ವಾರದಿಂದ ಕೃಷ್ಣ ಅವರ ಮೇಲೆ ಪಕ್ಷದಲ್ಲೇ ಇರುವಂತೆ ಒತ್ತಡ ಹೇರುತ್ತಿದ್ದ ಕಾಂಗ್ರೆಸ್‌ ಮುಖಂಡರು ಈಗ ಒಬ್ಬೊಬ್ಬರೇ ಕೃಷ್ಣ ವಿರುದಟಛಿ ವಾಗ್ಧಾಳಿ ಪ್ರಾರಂಭಿಸಿದ್ದಾರೆ. ಈ ಬೆಳವಣಿಗೆ ನಡುವೆ ಕೆಲವು ಕಾಂಗ್ರೆಸ್‌ನ ಹಿರಿಯ ಮುಖಂಡರು ಎಸ್‌.ಎಂ.ಕೃಷ್ಣ ಕಾಂಗ್ರೆಸ್‌ನಲ್ಲೇ ಇರಬೇಕು. ಅವರು ಪಕ್ಷ ತ್ಯಜಿಸಬಾರದೆಂದು ಹೇಳಿಕೆ ನೀಡುತ್ತಿದ್ದವರು, ಈಗ ರಾಗ ಬದಲಿಸಿ ಕೃಷ್ಣ ಅವರಿಗೆ
ಕಾಂಗ್ರೆಸ್‌ ಪಕ್ಷ ಎಲ್ಲವನ್ನೂ ಕೊಟ್ಟಿದೆ. ಇನ್ನೂ ಕೊಡಲು ಬಾಕಿ ಏನಿದೆ ಎಂದು ಪ್ರಶ್ನಿಸಿ ಕೃಷ್ಣ ಅವರ ನಡೆಯನ್ನು ಪರಾಮರ್ಶೆಗೆ ಒಳಪಡಿಸಿದ್ದಾರೆ. ಕೃಷ್ಣ ಅವರ ಪರಮಾಪ್ತ, ಹಿರಿಯ ಸಚಿವ ಡಿ.ಕೆ.ಶಿವಕುಮಾರ್‌ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಸಹ ಮನವೊಲಿಸಲು ವಿಫ‌ಲರಾಗಿ ಪ್ರಯತ್ನದಿಂದ ಹಿಂದೆ ಸರಿದಿದ್ದಾರೆ.

ಪಕ್ಷದ ಬಗ್ಗೆ ಬೇಸರಗೊಂಡಿರುವ ಕೃಷ್ಣ ಅವರನ್ನು ಒಂದು ಹಂತದವರೆಗೆ ಹೈಕಮಾಂಡ್‌ ಮನವೊಲಿಸಲು ತನ್ನ ಎಲ್ಲ ಶಕ್ತಿಯನ್ನೂ ಬಳಸಿ ಫ‌ಲಿತಾಂಶ ಸಿಗದೆ ಮೌನವಾಗಿದೆ. ಕೆಲವು ರಾಜ್ಯ ಕಾಂಗ್ರೆಸ್‌ ಮುಖಂಡರು ಹೈಕಮಾಂಡ್‌ ಮೇಲೆ ಕೃಷ್ಣ ಅವರನ್ನು ಕಾಂಗ್ರೆಸ್‌ನಲ್ಲಿ ಉಳಿಸಿಕೊಳ್ಳಲು ಇನ್ನೂ ಒತ್ತಡವನ್ನು ಹಾಕುತ್ತಲೇ ಇದ್ದಾರೆ. ಈ ನಡುವೆ ಕೆಲವು ಅತೃಪ್ತ ಕಾಂಗ್ರೆಸ್‌ ಮುಖಂಡರು ಕೃಷ್ಣ ಅವರನ್ನು ಭೇಟಿ ಮಾಡಿ ಅವರ ಮನವೊಲಿಸುವ ಹಾಗೂ ಕಾಂಗ್ರೆಸ್‌ ತೊರೆದಿರುವ ನಿಮ್ಮ ನಿರ್ಧಾರ ಸರಿಯೆಂದು ಕೃಷ್ಣ ಅವರ ಹೆಜ್ಜೆಯನ್ನು ಬೆಂಬಲಿಸುವ ಪ್ರಯತ್ನ ಗುರುವಾರವೂ ನಡೆಯಿತು. ಹಿರಿಯ ನಾಯಕ ಸಿ.ಕೆ.ಜಾಫ‌ರ್‌ಷರೀಫ್, ವಿಧಾನ ಸಭಾ ಉಪ ಸಭಾಧ್ಯಕ್ಷ ಶಿವಶಂಕರ ರೆಡ್ಡಿ ಹಾಗೂ ಮಾಜಿ ಸಚಿವೆ ಮೋಟಮ್ಮ, ಎಸ್‌.ಎಂ.ಕೃಷ್ಣ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಕೈ ಬಿಟ್ಟ ಪ್ರಯತ್ನ
ತಮ್ಮ ರಾಜೀನಾಮೆ ನಿರ್ಧಾರದಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ ಎಂದು ಸೋನಿಯಾ ಗಾಂಧಿಯವರಿಗೆ ಎಸ್‌.ಎಂ. ಕೃಷ್ಣ ನೇರವಾಗಿಯೇ ತಿಳಿಸಿದ್ದಾರೆ. ನಿಮ್ಮ ಬಗ್ಗೆ ನನಗೆ ಗೌರವ ಇದೆ, ರಾಜೀನಾಮೆ ವಿಷಯ ಬಿಟ್ಟು ಬೇರೇನಾದರೂ ಮಾತನಾಡಿ, ಆ ವಿಷಯದಲ್ಲಿ ನನ್ನ ನಿರ್ಧಾರ ಬದಲಿಸಲು ಸಾಧ್ಯವಿಲ್ಲ. ನಾನು ಈಗ ಅಸಹಾಯಕ ಎಂದು ಕೃಷ್ಣ ಸ್ಪಷ್ಟಪಡಿಸಿದ್ದಾರೆ. ಈ
ಬೆಳವಣಿಗೆ ಹಿನ್ನೆಲೆಯಲ್ಲಿ ಅವರನ್ನು ಪಕ್ಷಕ್ಕೆ ವಾಪಸ್‌ ಕರೆತರುವ ಪ್ರಯತ್ನ ಬಹುತೇಕ ಅಂತ್ಯವಾಗಿದೆ ಎನ್ನಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next