Advertisement
ಆ. 25 ರಂದು ಬೆಳಗ್ಗೆ ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ನಡೆದ ಬಂಟರ ಸಂಘ ಮುಂಬಯಿ ಇದರ 91ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘಕ್ಕೆ ಬಂಟರ ಮಹಾದಾನಿಗಳ ನೆರವು ಅಭಿನಂದನೀಯವಾಗಿದೆ. ಸಂಘದ ಸದಸ್ಯತ್ವವನ್ನು ಹೆಚ್ಚಿಸುವ ಕಾರ್ಯ ಭರದಿಂದ ಸಾಗುತ್ತಿದ್ದು, ಸದಸ್ಯತ್ವ ಸಮಿತಿ ಕಾರ್ಯಾಧ್ಯಕ್ಷ ಎನ್. ಸಿ. ಶೆಟ್ಟಿ ಅವರ ಸಮರ್ಥ ನೇತೃತ್ವದಲ್ಲಿ ಒಟ್ಟು ಸುಮಾರು 50 ಸಾವಿರ ಸದಸ್ಯರನ್ನು ಸಂಘಕ್ಕೆ ಪರಿಚಯಿಸುವ ಪ್ರಯತ್ನ ಜಾರಿಯಲ್ಲಿದೆ. ಸಂಘದ ವಿವಾಹ ಸಹಾಯ ಸಮಿತಿಯ ವಧು ವರರ ಚಾವಡಿ ಮೂಲಕ ಹಲವಾರು ವಿವಾಹ ಸಂಬಂಧಗಳನ್ನು ಸುರೇಶ್ ಎನ್. ಶೆಟ್ಟಿ ಅವರ ನೇತೃತ್ವದ ಸಮಿತಿಯು ಕಾರ್ಯಪ್ರವೃತ್ತವಾಗಿದೆ. ಸಂಘದ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಉಳ್ತೂರು ಮೋಹನ್‌ದಾಸ್ ಶೆಟ್ಟಿ ಮತ್ತವರ ತಂಡದ ನೇತೃತ್ವದಲ್ಲಿ ಜರಗಿದ ಮೆಗಾ ಆರ್ಥಿಕ ಸಹಾಯ ಮೇಳ ಹಿಂದೆಂದೂ ಕಂಡರಿಯದ ರೀತಿಯಲ್ಲಿ ನಡೆದಿದ್ದು, ಅಧಿಕ ಸಂಖ್ಯೆಯಲ್ಲಿ ಬಂಟ ಬಾಂಧವರಿಗೆ ಸಹಾಯ ನೀಡಿದೆ. ಸಮಾಜಕ್ಕಾಗಿ ತನ್ನ ಜೀವನವನ್ನೇ ಮೀಸಲಿಟ್ಟಿರುವ ಐಕಳ ಹರೀಶ್ ಶೆಟ್ಟಿ ಅವರ ಸಾಧನೆ ಅಪಾರವಾಗಿದೆ. ಸಂಘದ ಪ್ರಾದೇಶಿಕ ಸಮಿತಿಗಳ ಕಾರ್ಯಕ್ರಮಗಳು ಶ್ಲಾಘನೀಯವಾಗಿದೆ ಎಂದು ನುಡಿದು ಸಂಸ್ಥೆಯ ವಾರ್ಷಿಕ ಪ್ರಶಸ್ತಿ, ಸಮ್ಮಾನ, ಬಹುಮಾನಗಳನ್ನು ಪಡೆದ ಎಲ್ಲರನ್ನೂ ಅಭಿನಂದಿಸಿದರು.
Related Articles
Advertisement
ಪ್ರಶಸ್ತಿ ಪುರಸ್ಕೃತರ ಹೆಸರನ್ನು ಬಂಟರ ಸಂಘದ ಉಪಾಧ್ಯಕ್ಷ ಚಂದ್ರಹಾಸ್ ಕೆ. ಶೆಟ್ಟಿ ವಾಚಿಸಿದರು. ಎಚ್ಎಸ್‌ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಸಂಘದ ಜೊತೆ ಕಾರ್ಯದರ್ಶಿ ಮಹೇಶ್ ಎಸ್. ಶೆಟ್ಟಿ ಮತ್ತು ಸಂಘದ ಜೊತೆ ಕೋಶಾಧಿಕಾರಿ ಗುಣಪಾಲ್ ಆರ್. ಶೆಟ್ಟಿ ವಿದ್ಯಾರ್ಥಿಗಳ ಯಾದಿಯನ್ನು ಓದಿದರು. ಇದೇ ಸಂದರ್ಭದಲ್ಲಿ ಸಂಘದ ವಿಶ್ವಸ್ತರು, ಮಾಜಿ ಅಧ್ಯಕ್ಷರುಗಳು, ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆಯರು, ಉಪ ಸಮಿತಿಗಳ ಕಾರ್ಯಾಧ್ಯಕ್ಷರುಗಳು, ಪ್ರಾದೇಶಿಕ ಸಮನ್ವಯಕರು, ಪ್ರಾದೇಶಿಕ ಕಾರ್ಯಾಧ್ಯಕ್ಷರುಗಳು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಲೆಕ್ಕ ಪರಿಶೋಧಕರನ್ನು ಗೌರವಿಸಲಾಯಿತು.
ಆರಂಭದಲ್ಲಿ ಜಯಲಕ್ಷ್ಮೀ ಜೆ. ಶೆಟ್ಟಿ ಪ್ರಾರ್ಥನೆಗೈದರು. ಬಂಟ ಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು. ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ ಸ್ವಾಗತಿಸಿದರು. ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಸಂಜೀವ ಶೆಟ್ಟಿ ಗತ ವಾರ್ಷಿಕ ಮಹಾಸಭೆಯ ವರದಿ ಮಂಡಿಸಿ ಅನುಮೋದಿಸಿಕೊಂಡರು. 2018-2019ನೇ ವಾರ್ಷಿಕ ವರದಿಯನ್ನು ಗೌರವ ಪ್ರಧಾನ ಕಾರ್ಯದರ್ಶಿ ಮಂಡಿಸಿ ಅನುಮೋದಿಸಿಕೊಂಡರು. ವಾರ್ಷಿಕ ಶಾಸಕಬದ್ಧ ಲೆಕ್ಕಪತ್ರ, ಬ್ಯಾಲೆನ್ಸ್ ಶೀಟ್, ಲೆಕ್ಕಪರಿಶೋಧಕರ ವರದಿಯನ್ನು ಹಾಗೂ 2019-2020ರ ಸಾಲಿನ ಶಾಸನಬದ್ಧ ಲೆಕ್ಕಪರಿಶೋಧಕರ ನೇಮಕದ ಬಗ್ಗೆ ಗೌರವ ಕೋಶಾಧಿಕಾರಿ ಪ್ರವೀಣ್ ಭೋಜ ಶೆಟ್ಟಿ ಸಭೆಗೆ ತಿಳಿಸಿ ಮಂಜೂರಾತಿ ಪಡೆದರು. ಬಳಿಕ ಮುಂದಿನ ವರ್ಷದ ಬಜೆಟ್ ಮಂಡಿಸಿ ಮಂಜೂರಾತಿ ಪಡೆಯಲಾಯಿತು.
ಬಂಟರ ಸಂಘ ಪೊವಾಯಿ ಶಿಕ್ಷಣ ಸಮಿತಿಯ ವರದಿಯನ್ನು ಸಮಿತಿಯ ಉಪ ಕಾರ್ಯಾಧ್ಯಕ್ಷ ಬಿ. ಆರ್. ಶೆಟ್ಟಿ ಮತ್ತು ಸಂಘದ ಉನ್ನತ ಶಿಕ್ಷಣ ಸಮಿತಿಯ ವರದಿಯನ್ನು ಕಾರ್ಯದರ್ಶಿ ಭಾಸ್ಕರ್ ಶೆಟ್ಟಿ ಕಾರ್ನಾಡ್, ನೂತನ ಶಿಕ್ಷಣ ಸಮಿತಿಯ ವರದಿಯನ್ನು ಕಾರ್ಯದರ್ಶಿ ಜಯ ಎ. ಶೆಟ್ಟಿ ವಾಚಿಸಿದರು. ವರದಿ ವರ್ಷದಲ್ಲಿ ನಿಧನರಾದ ಸಮಾಜ ಬಾಂಧವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಸಂಜೀವ ಶೆಟ್ಟಿ ವಂದಿಸಿದರು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.
ಚಿತ್ರ-ವರದಿ : ಪ್ರೇಮನಾಥ್ ಶೆಟ್ಟಿ ಮುಂಡ್ಕೂರು