ಬೆಂಗಳೂರು: ಪ್ರವಾಹ ಹಿನ್ನೆಲೆಯಲ್ಲಿ ಬೆಳಗಾವಿ, ಶಿವಮೊಗ್ಗ, ಕೊಡಗು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ತುರ್ತು ಕಾಮಗಾರಿ ಹಾಗೂ ಪರಿಹಾರಕ್ಕಾಗಿ ಆಗತ್ಯ ಹಣ ಬಿಡುಗಡೆ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಗುರುವಾರ ವಿಧಾನಸೌಧದ ಕಚೇರಿಯಲ್ಲಿ ಪೂಜೆ ಸಲ್ಲಿಸಿದ ನಂತರ ಮಾತನಾಡಿದ ಅವರು, ಸರ್ಕಾರ ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸ್ಥಾಪಿಸಿರುವ ಗಂಜಿ ಕೇಂದ್ರಗಳನ್ನು ಕಾಳಜಿ ಕೇಂದ್ರಗಳನ್ನಾಗಿ ಪರಿವರ್ತಿಸಲಾಗುವುದು. ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ 20 ರಿಂದ 30 ಎಕರೆ ಪ್ರದೇಶದಲ್ಲಿ ಸುಸಜ್ಜಿತ ಮನೆಗಳನ್ನು ನಿರ್ಮಿಸಿ ಕೊಡಲಾಗುವುದು. ಅಲ್ಲಿ ಎಲ್ಲ ರೀತಿಯ ಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು.
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ತುರ್ತು ಕಾಮಗಾರಿ ಹಾಗೂ ಪರಿಹಾರಕ್ಕಾಗಿ ಬೆಳಗಾವಿಗೆ 30 ಕೋಟಿ ರೂ.ಬಿಡುಗಡೆ ಮಾಡಲಾಗಿದೆ. ಶಿವಮೊಗ್ಗ ಹಾಗೂ ಕೊಡಗು ಜಿಲ್ಲೆಗಳಿಗೂ ಹಣ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
ಮಹಾರಾಷ್ಟ್ರದಿಂದ ಮತ್ತೆ ನೀರು ಬಿಡುಗಡೆ ಮಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬೆಳಗಾವಿ, ಬಾಗಲಕೋಟೆ, ವಿಜಯಪುರ ಭಾಗದ ಜನರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ ಎಂದರು.
ತಮಗೆ ಶುಭಾಶಯ ಕೋರಲು ಕಚೇರಿಗೆ ಆಗಮಿಸಿದ ಕಾರ್ಯರ್ತರು, ಮುಖಂಡರಿಗೆ ಹೂಗುಚ್ಛ ತರದಂತೆ ಸೂಚಿಸಿದ್ದ ಆರ್.ಅಶೋಕ್, ಅದರ ಬದಲು ಪ್ರವಾಹ ಸಂತ್ರಸ್ತರ ನಿಧಿಗೆ ಪರಿಹಾರ ನೀಡುವಂತೆ ಮನವಿ ಮಾಡಿದರು. ಕಚೇರಿಯಲ್ಲಿ ಅದಕ್ಕಾಗಿ ಡಬ್ಬಿ ಸಹ ಇಡಲಾಗಿತ್ತು. ‘ಹಾರ-ತುರಾಯಿ ಬೇಡ, ಪ್ರವಾಹ ಸಂತ್ರಸ್ತರಿಗೆ ನೆರವು ನೀಡಿ’ ಎಂದು ಮನವಿ ಮಾಡಲಾಗಿತ್ತು.