ಚೆನ್ನೈ: ಜಗತ್ತಿನ ವಿವಿಧೆಡೆ ಕೋವಿಡ್ 19 ವೈರಸ್ ಗೆ ಲಸಿಕೆ ಸಂಶೋಧನೆ ವೇಗ ಪಡೆದಿದೆ.
ಇತ್ತ ಭಾರತದಲ್ಲೂ ಸಾಂಪ್ರದಾಯಿಕ ಔಷಧಗಳ ಪ್ರಯೋಗಗಳು ಭರವಸೆ ಹುಟ್ಟಿಸುತ್ತಿವೆ.
ತಮಿಳುನಾಡಿನ ತಂಬರಂನ ‘ಸಿದ್ಧ’ ವೈದ್ಯರು ತಯಾರಿಸಿರುವ ‘ಕಬಾಸೂರ ಕುದಿನೀರ್’ ಕಷಾಯ ಹಲವು ಸೋಂಕಿತರನ್ನು ಚೇತರಿಸಿಕೊಳ್ಳುವಂತೆ ಮಾಡಿದೆ.
ಒಣಶುಂಠಿ, ಹಿಪ್ಪಲಿ, ಓಮ, ಕಡುಕ್ಕೈ, ಅಮತಬಳ್ಳಿ ಮುಂತಾದ ಗಿಡಮೂಲಿಕೆಗಳ ಮಿಶ್ರಣವನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ, ಕಾಲು ಭಾಗದವರೆಗೆ ಬತ್ತಿದ ಮೇಲೆ ಕಷಾಯದ ರೂಪದಲ್ಲಿ ಇದನ್ನು ಸೋಂಕಿತರಿಗೆ ನೀಡಲಾಗಿತ್ತು.
ನಿತ್ಯ 60 ಮಿ.ಲೀ. ಕಷಾಯ ಕುಡಿದ 42 ರೋಗಿಗಳಲ್ಲಿ ಕೆಮ್ಮು, ಜ್ವರ, ದಣಿವು ಬೇಗನೆ ಶಮನಗೊಂಡಿತ್ತು. 14 ದಿನಗಳ ಸಿದ್ಧ ಚಿಕಿತ್ಸೆ ಪಡೆದ ಸೋಂಕಿತರ ಗಂಟಲ ಮಾದರಿ, ರಕ್ತ ಪರೀಕ್ಷೆ ನಡೆಸಿದಾಗ ಬಹುತೇಕರು ಕೋವಿಡ್ ಸೋಂಕಿನಿಂದ ಮುಕ್ತರಾಗಿದ್ದರು.
ಕಬಾಸೂರ ಕುದಿನೀರ್ ಕಷಾಯವು ಸುಮಾರು 64 ರೀತಿಯ ಜ್ವರಗಳಿಗೆ ರಾಮಬಾಣವಾಗಿದೆ ಎನ್ನುತ್ತಾರೆ ಸಂಸ್ಥೆಯ ತಜ್ಞರು. ಆದರೆ, ತಮಿಳುನಾಡು ಸರಕಾರ ‘ಇದನ್ನು ಕೇವಲ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಬಳಸಬಹುದು, ಕೋವಿಡ್ ಸೋಂಕಿಗೆ ಇದು ಪರಿಪೂರ್ಣ ಔಷಧವಲ್ಲ’ ಎಂದು ಹೇಳಿದೆ.