ಕಾಪು: ಸಮಾನತೆಯೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯ ಉದೇªಶವಾಗಿದೆ. ಅಸ್ಪೃಶ್ಯತೆ ನಿವಾರಣೆಗಾಗಿ ಸಂಘ ಬಹಳಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಾ ಬರುತ್ತಿದೆ. ಜನರು ಕೂಡಾ ತಮ್ಮ ಮನೆ, ದೇವಸ್ಥಾನ, ಸ್ಮಶಾನಗಳನ್ನು ಎಲ್ಲರಿಗೂ ಮುಕ್ತವಾಗಿ ದೊರಕಿಸಿಕೊಡುವ ಮೂಲಕ ಅಸ್ಪೃಶ್ಯತೆ ನಿವಾರಣೆಯ ಪ್ರಯತ್ನದೊಂದಿಗೆ ಕೈ ಜೋಡಿಸಲು ಸಾಧ್ಯವಿದೆ ಎಂದು ಸಂಘದ ವಿಭಾಗ ಕುಟುಂಬ ಪ್ರಬೋಧನ್ ಪ್ರಮುಖ್ ಗಜಾನನ ಪೈ ಹೇಳಿದರು.
ಕಾಪು ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ ಜರಗಿದ ಶ್ರೀ ಗುರುಪೂಜಾ ಉತ್ಸವ ಕಾರ್ಯಕ್ರಮದಲ್ಲಿ ಬೌದ್ಧಿಕ್ ನಡೆಸಿ ಕೊಟ್ಟರು.
ಆರ್.ಎಸ್.ಎಸ್ ಒಂದು ಶಿಸ್ತುಬದ್ಧವಾದ ಸಂಘಟನೆಯಾಗಿದ್ದು ಸಮಾಜದ ಪ್ರತಿಯೋರ್ವರಲ್ಲಿ ಹಿಂದುತ್ವದ ಅರಿವನ್ನು ಮೂಡಿಸುವಲ್ಲಿ ಸಂಘದ ಪ್ರಯತ್ನದ ಬಲವಿದೆ ಎಂದರು.
ಕಾರ್ಯಕರ್ತರೇ ಸಂಘದ ಬಲವಾಗಿದ್ದು ಕಾರ್ಯಕರ್ತರಲ್ಲಿರುವ ಸಂಘಟನ ಚಟುವಟಿಕೆ ಎಲ್ಲರಿಗೂ ಮಾದರಿಯಾಗಿದೆ. ಸಮಾಜದ ಮುನ್ನಡೆಗೆ ಸ್ವಾರ್ಥ ರಹಿತವಾದ ನೇತೃತ್ವ ವಹಿಸುವುದರ ಜೊತೆಗೆ ಸಾವಿರಾರು ಮಂದಿ ಕಾರ್ಯಕರ್ತರ ಸಮರ್ಪಣಾ ಮನೋಭಾವದ ಸೇವೆ ಸಂಘದ ಬೆಳವಣಿಗೆಗೆ ಪೂರಕವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಉಪ ತಹಶೀಲ್ದಾರ್ ಪಿ. ಬಾಬು ಮಲ್ಲಾರು ಮಾತನಾಡಿ, ಆರ್‌ಎಸ್‌ಎಸ್‌ನ ಚಟುವಟಿಕೆಗಳನ್ನು ದೂರದಲ್ಲಿ ನಿಂತು ನೋಡುವುದರ ಬದಲಾಗಿ, ಅದರ ಹತ್ತಿರ ಬಂದು ನೋಡಿದಾಗಲೇ ಅದರ ಕುರಿತಾಗಿ ಪ್ರೀತಿ ಹೆಚ್ಚಲು ಕಾರಣವಾಗುತ್ತದೆ. ಗುರುಪೂಜಾ ಉತ್ಸವದ ಮೂಲಕ ಎಲ್ಲರಿಗೂ ಸಮರ್ಪಣೆಗೆ ಅವಕಾಶ ಮಾಡಿಕೊಡುವ ಮೂಲಕ ರಾಷ್ಟ್ರೀಯತೆಯನ್ನು ಪೋಷಿಸುವ ಕಾರ್ಯದಲ್ಲಿ ನಮಗೂ ಕೂಡಾ ಅವಕಾಶ ಮಾಡಿಕೊಟ್ಟಂತಾಗಿದೆ ಎಂದರು.
ಕಾಪು ತಾಲೂಕು ಸಂಘ ಸಂಚಾಲಕ ತಾರಾನಾಥ ವಿ. ಕೋಟ್ಯಾನ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾಪು ಶಾಖಾ ಕಾರ್ಯವಾಹ ಸುದೀಶ್ ಪರಿಚಯಿಸಿ, ನಿರೂಪಿಸಿದರು. ಕಾಪು ತಾಲೂಕು ಕುಟುಂಬ ಪ್ರಬೋಧನ್ ಪ್ರಮುಖ್ ಶಾಂತರಾಮ ಪ್ರಭು ಕಲ್ಯ ವಂದಿಸಿದರು.