Advertisement

ಜಿಲ್ಲೆಯಲ್ಲಿ ತಂಬಾಕು ನಿಷೇಧ ಕಾಯ್ದೆ ಪರಿಣಾಮಕಾರಿ ಜಾರಿಯಾಗಲಿ: ಡಿಸಿ

02:24 PM Sep 17, 2019 | Team Udayavani |

ಚಿತ್ರದುರ್ಗ: ಜಿಲ್ಲೆಯನ್ನು ತಂಬಾಕು ನಿಷೇಧ ಕಾಯ್ದೆಯ ಉನ್ನತ ಅನುಷ್ಠಾನ ಕೇಂದ್ರವನ್ನಾಗಿ ಮಾಡಲು ಮುಂದಾಗಿದ್ದು, ಕಾಯ್ದೆ ಪರಿಣಾಮಕಾರಿಯಾಗಿ ಜಾರಿಯಾಗಬೇಕು ಎಂದು ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಸೂಚನೆ ನೀಡಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ತಂಬಾಕು ನಿಯಂತ್ರಣ ಸಮನ್ವಯ ಸಮಿತಿಯ ತ್ತೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ, ಶಿಕ್ಷಣ ಸಂಸ್ಥೆಗಳ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಸೇರಿದಂತೆ ಕಾಯ್ದೆಯ ಉಲ್ಲಂಘನೆ ಪ್ರಕರಣಗಳನ್ನು ಪತ್ತೆ ಹಚ್ಚಿ ತಪ್ಪಿತಸ್ಥರಿಗೆ ದಂಡ ವಿಧಿಸಿ ದೂರು ದಾಖಲಿಸಬೇಕು. ಯಾವುದೇ ಪ್ರಕರಣಗಳನ್ನು ಕೇವಲ ದಂಡದಲ್ಲಿ ಮುಕ್ತಾಯ ಮಾಡಬಾರದು. ಜಿಲ್ಲೆಯಾದ್ಯಂತ ತಹಶೀಲ್ದಾರರು ಹಾಗೂ ತಾಲೂಕು ವೈದ್ಯಾಧಿಕಾರಿಗಳು ದಾಳಿ ನಡೆಸಬೇಕು. ಜಿಲ್ಲೆಯ ಎಲ್ಲ ಸರ್ಕಾರಿ ಕಚೇರಿಗಳು, ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ನಿಲ್ದಾಣಗಳ ಆವರಣದಲ್ಲಿ ತಂಬಾಕು ನಿಷೇಧದ ಫಲಕವನ್ನು ಅಳವಡಿಸಬೇಕು ಎಂದರು.

ದಾಳಿ ನಡೆಸದ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ತಂಬಾಕು ನಿಯಂತ್ರಣ ಕಾಯ್ದೆ ಅನ್ವಯ ಯಾವುದೇ ಶಾಲೆ, ಕಾಲೇಜು ಶಿಕ್ಷಣ ಸಂಸ್ಥೆ ಆವರಣದಿಂದ 100 ಮೀಟರ್‌ ಅಂತರದಲ್ಲಿ ಸಿಗರೇಟ್, ಬೀಡಿ ಅಥವಾ ಇತರೆ ಯಾವುದೇ ಬಗೆಯ ತಂಬಾಕು ಉತ್ಪನ್ನಗಳ ಮಾರಾಟವನ್ನು ನಿಷೇಧಿಸಲಾಗಿದೆ. ಕಾಯ್ದೆ ಉಲ್ಲಂಘನೆಯಾದಲ್ಲಿ ಶಿಕ್ಷಾರ್ಹ ಅಪರಾಧವಾಗುತ್ತದೆ. ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳು, ಶಿಕ್ಷಣ ಸಂಸ್ಥೆಗಳ ಗೋಡೆಗಳ ಮೇಲೆ ಎಚ್ಚರಿಕೆ ಸಂದೇಶವನ್ನು ಬರೆಸಬೇಕು. ಎಲ್ಲ ಶಾಲಾ- ಕಾಲೇಜುಗಳ ಗೋಡೆಗಳ ಮೇಲೆ ಗೋಡೆಬರಹ ಬರೆಸಿದ ಕುರಿತು ಫೋಟೋ ಸಹಿತ ವರದಿಯನ್ನು ಡಿಡಿಪಿಐ ಹಾಗೂ ಡಿಡಿಪಿಯು ಅವರು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬೇಕು. ಕಾಯ್ದೆ ಉಲ್ಲಂಘನೆಯಾಗದ ರೀತಿ ಜಾಗ್ರತೆ ವಹಿಸುವುದು ಆಯಾ ಶಾಲಾ-ಕಾಲೇಜುಗಳ ಮುಖ್ಯಸ್ಥರ ಹೊಣೆ. ತಪ್ಪಿದಲ್ಲಿ ಆಯಾ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರನ್ನೇ ಹೊಣೆಯಾಗಿಸಿ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.

ಇದುವರೆಗೆ ಕಾಯ್ದೆ ಉಲ್ಲಂಘನೆಗೆ ಸಂಬಂಧಿಸಿದಂತೆ ತಂಬಾಕು ತನಿಖಾ ದಳದಿಂದ 778 ಪ್ರಕರಣಗಳನ್ನು ದಾಖಲಿಸಿ 62,220 ರೂ. ದಂಡ ವಸೂಲಿ ಮಾಡಲಾಗಿದೆ. ಪೊಲೀಸ್‌ ಇಲಾಖೆಯಿಂದ ಈ ವರ್ಷ 6389 ಪ್ರಕರಣಗಳನ್ನು ದಾಖಲಿಸಿ 4.30 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

Advertisement

ಸಭೆಯಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ಜಿ.ಪಿ. ರೇಣುಪ್ರಸಾದ್‌, ಜಿಲ್ಲಾ ಸಲಹೆಗಾರ ಪ್ರಭುದೇವ್‌, ತಾಲೂಕು ವೈದ್ಯಾಧಿಕಾರಿ ಡಾ| ಸಿ. ಕಂಬಾಳಿ, ಜಿಪಂ ಉಪ ಕಾರ್ಯದರ್ಶಿ ಮಹಮ್ಮದ್‌ ಮುಬೀನ್‌, ತಹಶೀಲ್ದಾರ್‌ ವೆಂಕಟೇಶಯ್ಯ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

ತಂಬಾಕು ಮುಕ್ತವಾಗಿಸಲು ಗುಲಾಬಿ ಆಂದೋಲನ:

ಗ್ರಾಮ-ನಗರಗಳನ್ನು ತಂಬಾಕು ಮುಕ್ತವಾಗಿಸಲು ತಂಬಾಕು ಉತ್ಪನ್ನಗಳ ಬಳಕೆ ಕುರಿತು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ‘ಗುಲಾಬಿ ಆಂದೋಲನ’ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಆಂದೋಲನದ ವಿಭಾಗೀಯ ಸಂಯೋಜಕ ಮಹಾಂತೇಶ್‌ ತಿಳಿಸಿದರು. ನಗರ, ಪಟ್ಟಣ ಮತ್ತು ಗ್ರಾಮಗಳಲ್ಲಿ ಒಂದೇ ದಿನದಂದು ಏಕಕಾಲಕ್ಕೆ ವಿದ್ಯಾರ್ಥಿಗಳಿಂದ ಜಾಥಾ ಏರ್ಪಡಿಸಲಾಗುವುದು. ವಿದ್ಯಾರ್ಥಿಗಳು ಅಂಗಡಿಯವರಿಗೆ ತಂಬಾಕು ಉತ್ಪನ್ನ ಮಾರಾಟ ಮಾಡದಂತೆ ವಿನಂತಿಸಿ ಗುಲಾಬಿ ಹೂವು ನೀಡಿದರೆ, ಧೂಮಪಾನ ಮಾಡುವ ಸಾರ್ವಜನಿಕರಿಗೆ ಗುಲಾಬಿ ಹೂವು ನೀಡಿ ತಂಬಾಕು ಉತ್ಪನ್ನಗಳ ಸೇವನೆ ಮಾಡದಂತೆ ಮನವಿ ಮಾಡುವರು ಎಂದು ಮಾಹಿತಿ ನೀಡಿದರು.
Advertisement

Udayavani is now on Telegram. Click here to join our channel and stay updated with the latest news.

Next