ಮಂಗಳೂರು: ಇಲಾಖೆಗಳ ಅಧಿಕಾರಿಗಳು ತಂಡವಾಗಿ ಕಾರ್ಯತಂತ್ರ ರೂಪಿಸಿ ಸಮರ್ಪಕ ವಾಗಿ ಅನುಷ್ಠಾನಿಸಿದರೆ ಯಾವುದೇ ರೀತಿಯ ವಿಕೋಪಗಳು ಎದುರಾದರೂ ಯಶಸ್ವಿಯಾಗಿ ನಿಭಾಯಿಸಬಹುದು ಎಂದು ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಮೈಸೂರಿನ ಆಡಳಿತ ತರಬೇತಿ ಸಂಸ್ಥೆ ಹಾಗೂ ಜಿಲ್ಲಾ ತರಬೇತಿ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ “ಎ’ ಮತ್ತು “ಬಿ’ ವೃಂದದ ಅಧಿಕಾರಿಗಳಿಗೆ ಗುರುವಾರ ಹಮ್ಮಿಕೊಂಡಿದ್ದ ಜಿಲ್ಲಾ ವಿಪತ್ತು ನಿರ್ವಹಣೆ ಯೋಜನೆ ಪರಿ ಷ್ಕರಣೆ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ವಿಕೋಪಗಳನ್ನು ಏಕಾಂಗಿಯಾಗಿ ಎದುರಿಸಲು ಸಾಧ್ಯವಿಲ್ಲ, ವಿಕೋಪಗಳ ಸಂದರ್ಭದಲ್ಲಿ ಸಂಬಂಧಪಟ್ಟ ಇಲಾಖೆಗಳು ತಂಡದಂತೆ ಯೋಜನೆ ರೂಪಿಸಿ ಅದರಂತೆ ಕಾರ್ಯಪ್ರವೃತ್ತರಾದಾಗ ಯಶಸ್ವಿಯಾಗಿ ನಿಭಾಯಿಸಲು ಸಾಧ್ಯ ಎಂದ ಅವರು, ಕಾರ್ಯಾಗಾರಕ್ಕೆ ನಿಜವಾದ ಅರ್ಥ ಬರಬೇಕೆಂದರೆ ಅಧಿಕಾರಿಗಳು ಕ್ರಿಯಾಶೀಲರಾಗಿ ಪಾಲ್ಗೊಳ್ಳಬೇಕು. ತಮ್ಮಲ್ಲಿನ ಉಪಯುಕ್ತ ವಿಚಾರ, ಮಾರ್ಗಸೂಚಿ ಹಾಗೂ ಯೋಜನೆಗಳನ್ನು ಇತರರೊಂದಿಗೆ ಹಂಚಿಕೊಂಡು, ಅವರಲ್ಲಿನ ಹೊಸ ವಿಚಾರಗಳನ್ನು ಕಲಿತುಕೊಳ್ಳಬೇಕು. ಪ್ರಸ್ತುತ ಸಂಭವಿಸಿರುವ ಪ್ರಕೃತಿ ವಿಕೋಪಗಳನ್ನು ಅಧ್ಯಯನ ನಡೆಸಿ ಮುಂದೆ ಇಂತಹ ವಿಕೋಪಗಳು ಸಂಭವಿಸಿದಾಗ ಸಮರ್ಥವಾಗಿ ಎದುರಿಸಲು ಅವಶ್ಯ ಕಾರ್ಯಯೋಜನೆಗಳನ್ನು ಸಿದ್ಧಪಡಿ ಸಿಟ್ಟಿರಬೇಕು ಎಂದರು.
ಪ್ರತಿಯೊಂದು ಇಲಾಖೆಗಳು ತಮ್ಮ-ತಮ್ಮ ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಿದರೆ ಅತ್ಯುತ್ತಮ ಆಡಳಿತ ರೂಪುಗೊಳ್ಳುತ್ತದೆ. ಈ ಕಾರ್ಯಾಗಾರದಿಂದ ಅಧಿಕಾರಿಗಳಿಗೆ ಹಾಗೂ ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೂ ಉಪ ಯೋಗವಾಗಲಿ ಎಂದರು.
ಎಡಿಸಿ ಕೃಷ್ಣಮೂರ್ತಿ, ಮೈಸೂರು ಆಡಳಿತ ತರಬೇತಿ ಸಂಸ್ಥೆಯ ನಿರ್ದೇಶಕ ಚಂದ್ರನಾಯಕ್, ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ವೆಂಕಟೇಶ್ ಉಪಸ್ಥಿತರಿದ್ದರು.