Advertisement

ಬಡವಾದ ಕೃಷಿ ಉತ್ಪನ್ನ ಮಾರುಕಟ್ಟೆ  ; ವಿಲೀನ ಭೀತಿ

01:13 AM Feb 01, 2022 | Team Udayavani |

ಪುತ್ತೂರು: ಕರ್ನಾಟಕ ಕೃಷಿಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)ಗಳ ಕಾಯ್ದೆಗೆ ತಿದ್ದುಪಡಿ ತಂದ ಪರಿಣಾಮ ಎಪಿಎಂಸಿಗಳ ಆದಾಯ ಶೇ. 70ಕ್ಕೂ ಹೆಚ್ಚು ಕುಸಿತ ಕಂಡಿದ್ದು, ಎಪಿಎಂಸಿ ಅಸ್ತಿತ್ವದ ಮೇಲೆ ತೂಗುಗತ್ತಿ ಇದೆ.
2020ರಲ್ಲಿ ರಾಜ್ಯದಲ್ಲಿ ಮಾರುಕಟ್ಟೆ ವ್ಯವಹಾರ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯ್ದೆ-1966ಕ್ಕೆ ಮೂರು ತಿದ್ದುಪಡಿ ತರಲಾಗಿದ್ದು, ಪರಿಣಾಮ ಎಪಿಎಂಸಿ ಆದಾಯ ಸಂಗ್ರಹದ ಮೇಲೆ ಭಾರೀ ಹೊಡೆತ ಬಿದ್ದಿದೆ.

ಸೆಸ್‌ ಸಂಗ್ರಹಕ್ಕೆ ಆಘಾತ

ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವುದಕ್ಕೆ ಮುನ್ನ ಎಪಿಎಂಸಿ ಆಡಳಿತ ಮಂಡಳಿಗೆ ಮಾರುಕಟ್ಟೆ ಪ್ರಾಂಗಣದೊಳಗೆ ಮತ್ತು ಹೊರಗೆ ನಡೆಯುವ ಕೃಷಿ ಉತ್ಪನ್ನಗಳ ಸಗಟು ವಹಿವಾಟಿನ ಮೇಲೆ ಮಾರುಕಟ್ಟೆ ಶುಲ್ಕ ಮತ್ತು ಬಳಕೆದಾರರ ಶುಲ್ಕ (ಸೆಸ್‌) ಸಂಗ್ರಹಿಸಲು ಅವಕಾಶವಿತ್ತು. ತಿದ್ದುಪಡಿಯ ಅನಂತರ ಸೆಸ್‌ ಸಂಗ್ರಹಣೆ ಪ್ರಾಂಗಣದೊಳಗಿನ ವಹಿವಾಟಿಗೆ ಸೀಮಿತವಾಗಿದೆ. ಮಾರುಕಟ್ಟೆ ಶುಲ್ಕ ಮತ್ತು ಬಳಕೆದಾರರ ಶುಲ್ಕ ಸಂಗ್ರಹವೂ ಕಡಿಮೆಯಾಗಿದೆ.

Advertisement

ವಿಲೀನ ಭೀತಿ
ಆದಾಯದ ಇಳಿಕೆ, ಖರ್ಚುವೆಚ್ಚ ವಿಪರೀತ ಹೆಚ್ಚಳದ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಲ್ಲಿ ಎಪಿಎಂಸಿಗಳ ವಿಲೀನಕ್ಕೆ ಚಿಂತನೆ ನಡೆದಿತ್ತು. ಪುತ್ತೂರು, ಮಂಗಳೂರು ಬಿಟ್ಟು ಉಳಿದ ಎಪಿಎಂಸಿಗಳನ್ನು ಇವೆರಡರ ಜತೆ ವಿಲೀನಗೊಳಿಸಲು ನಿರ್ಧರಿಸಲಾಗಿತ್ತು. ಆದರೆ ಕೇಂದ್ರ ಸರಕಾರ ಎಪಿಎಂಸಿ ಕಾಯ್ದೆ ಸೇರಿದಂತೆ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆದ ಕಾರಣ ರಾಜ್ಯ ಸರಕಾರವೂ ತಿದ್ದುಪಡಿ ಕೈಬಿಟ್ಟು ಯಥಾಸ್ಥಿತಿ ಕಾಯ್ದುಕೊಳ್ಳಲು ಅವಕಾಶ ಇದೆ. ಆದರೆ ರಾಜ್ಯ ಸರಕಾರ ತಿದ್ದುಪಡಿಯನ್ನು ಹಿಂದೆಗೆದುಕೊಳ್ಳದಿದ್ದರೆ ವಿಲೀನ ಅನಿವಾರ್ಯವಾಗಲಿದೆ.

ಹಿಂದೆ ಹೀಗಿತ್ತು
ಹಿಂದಿನ ನಿಯಮ ಪ್ರಕಾರ ರೈತರಿಂದ ವ್ಯಾಪಾರಸ್ಥರು ಉತ್ಪನ್ನ ಖರೀದಿಸಿದರೆ 100 ರೂ.ಗೆ 1.5 ರೂ. ಮಾರುಕಟ್ಟೆ ಶುಲ್ಕವನ್ನು ಎಪಿಎಂಸಿಗೆ ನೀಡಬೇಕಿತ್ತು. ಇದರಲ್ಲಿ 50 ಪೈಸೆ ಆವರ್ತ ನಿಧಿಗೆ, 50 ಪೈಸೆ ಸರಕಾರಕ್ಕೆ ಸಲ್ಲಿಸಿ ಉಳಿದ 50 ಪೈಸೆಯಲ್ಲಿ ಎಪಿಎಂಸಿಗಳು ತಮ್ಮ ಕಾರ್ಯ ನಿರ್ವಹಣೆ ಮಾಡುತ್ತಿದ್ದವು. ಆವರಣ ಅಥವಾ ವ್ಯಾಪ್ತಿಯ ಹೊರಗೆ ವಹಿವಾಟು ನಡೆಸಿದರೂ ವ್ಯಾಪಾರಸ್ಥರು ಎಪಿಎಂಸಿಗಳಿಗೆ ಮಾರುಕಟ್ಟೆ ಶುಲ್ಕ ಭರಿಸಬೇಕಿತ್ತು.

ತಿದ್ದುಪಡಿಯ ಬಳಿಕ
100 ರೂ.ಗೆ 1.50 ರೂ. ಇದ್ದ ಮಾರುಕಟ್ಟೆ ಶುಲ್ಕವನ್ನು ಮೂರು ತಿದ್ದುಪಡಿಗಳಲ್ಲಿ 35 ಪೈಸೆಗೆ, ಆ ಬಳಿಕ 1 ರೂ.ಗೆ ಸದ್ಯ 60 ಪೈಸೆಗೆ ಇಳಿಸಲಾಗಿದೆ. ಈ 60 ಪೈಸೆಯಲ್ಲಿ 43 ಪೈಸೆ ಮಾತ್ರ ಎಪಿಎಂಸಿಗಳು ಬಳಕೆ ಮಾಡಿಕೊಳ್ಳಲು ಅವಕಾಶ. ಇದರಿಂದ ವಾರ್ಷಿಕ ಆದಾಯ ದಲ್ಲಿ ಶೇ. 70ರಷ್ಟು ಕುಸಿದಿದೆ. ಕಾಯ್ದೆಗೆ ತಿದ್ದುಪಡಿಯ ಪರಿಣಾಮ ಎಪಿಎಂಸಿಗಳ ಅಧಿಕಾರ ವ್ಯಾಪ್ತಿ ಮತ್ತು ಮಾರುಕಟ್ಟೆ ಶುಲ್ಕ ದಲ್ಲೂ ಇಳಿಕೆಯಾಗಿದೆ. ಈಗ ಪ್ರಾಂಗಣದ ಹೊರಗಡೆಯ ವ್ಯಾಪಾರ-ವಹಿವಾಟಿಗೆ ಮಾರುಕಟ್ಟೆ ಶುಲ್ಕ ಸಂಗ್ರಹ ಮಾಡುವಂತಿಲ್ಲ.

7 ಕೋಟಿ ರೂ. ಆದಾಯ ಹೊಂದಿದ್ದ ಪುತ್ತೂರು ಎಪಿಎಂಸಿ ಕಳೆದ ಬಾರಿ 4 ಕೋ.ರೂ.ಗಳನ್ನಷ್ಟೇ ಸಂಗ್ರಹಿಸಿತು. ಈ ಬಾರಿ 2.81 ಕೋ.ರೂ. ಮಾತ್ರ ಆದಾಯ ನಿರೀಕ್ಷಿಸಲಾಗಿದೆ. ರಾಜ್ಯ ಸರಕಾರ ತಿದ್ದುಪಡಿ ಕಾಯ್ದೆ ಹಿಂದೆಗೆದುಕೊಂಡು ಹಿಂದಿನಂತೆ ಯಥಾಸ್ಥಿತಿಗೆ ಅವಕಾಶ ನೀಡಿದರೆ ಎಪಿಎಂಸಿಗೆ ಆದಾಯ ದೊರೆಯಲಿದೆ.
– ದಿನೇಶ್‌ ಮೆದು,
ಅಧ್ಯಕ್ಷ, ಎಪಿಎಂಸಿ ಪುತ್ತೂರು

Advertisement

ಎಪಿಎಂಸಿಗಳಲ್ಲಿ ಪ್ರಸ್ತುತ 100 ರೂ.ಗೆ 60 ಪೈಸೆ ಮಾರುಕಟ್ಟೆ ಶುಲ್ಕ ಸಂಗ್ರಹಕ್ಕೆ ಅವಕಾಶ ಇದೆ. ಇದನ್ನು ಈ ಹಿಂದಿನಂತೆ 1.50 ರೂ.ಗೆ ಏರಿಸುವ ಬಗ್ಗೆ ಸದ್ಯಕ್ಕೆ ಯಾವುದೇ ಸೂಚನೆ ಇಲ್ಲ. ಎಪಿಎಂಸಿಗಳಿಂದಲೂ ಬೇಡಿಕೆ ಬಂದಿಲ್ಲ.
– ಕರೀಗೌಡ, ವ್ಯವಸ್ಥಾಪಕ ನಿರ್ದೇಶಕ,
ಕರ್ನಾಟಕ ರಾಜ್ಯ ಕೃಷಿ ಮಾರುಕಟ್ಟೆ ಮಂಡಳಿ

– ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next