ಹೊಸದಿಲ್ಲಿ: ದೇಶದ ಕಾರು ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಮಾರುತಿ ಸುಜುಕಿ ತನ್ನ ಎಲ್ಲ ವಿಧದ ಕಾರುಗಳ ದರವನ್ನು ಜನವರಿಯಿಂದ ಹೆಚ್ಚಿಸಲಿದೆ. ಕಚ್ಚಾ ವಸ್ತುಗಳ ಬೆಲೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಂಸ್ಥೆಯು ಈ ನಿರ್ಧಾರಕ್ಕೆ ಬಂದಿದೆ. ಕಳೆದ ಒಂದು ವರ್ಷದಿಂದ ಕಚ್ಚಾ ವಸ್ತುಗಳ ಬೆಲೆ ನಿರಂತರವಾಗಿ ಹೆಚ್ಚುತ್ತಿದೆ.
ಕಚ್ಚಾ ವಸ್ತುಗಳ ಬೆಲೆ ಹೆಚ್ಚುತ್ತಿರುವ ಕಾರಣ ಕಾರು ತಯಾರಿಕೆಗೆ ಸಂಸ್ಥೆ ಹೆಚ್ಚು ಖರ್ಚು ಮಾಡಬೇಕಾಗಿದೆ. ಹೀಗಾಗಿ ಇದು ಕಾರುಗಳ ಬೆಲೆಯ ಮೇಲೆ ಪರಿಣಾಮ ಬೀರುತ್ತಿದೆ. ಹೆಚ್ಚುತ್ತಿರುವ ಇನ್‌ಪುಟ್ ವೆಚ್ಚದಿಂದಾಗಿ ಕಾರಿನ ದರವನ್ನು ಹೆಚ್ಚಳ ಮಾಡಬೇಕಾಗಿದ್ದು ಈ ವೆಚ್ಚವನ್ನು ಗ್ರಾಹಕರು ಭರಿಸಬೇಕು ಎಂದು ಸಂಸ್ಥೆ ಹೇಳಿದೆ.
ಪ್ರಸ್ತುತ ಮಾರುತಿ ಸುಜುಕಿ ಆಲ್ಟೋದಂತಹ ಸಣ್ಣ ಕಾರುಗಳು ಸೇರಿದಂತೆ ಅನಂತರದ ದೊಡ್ಡ ಕಾರುಗಳ ದರಗಳು ಹೆಚ್ಚಾಗಲಿವೆ. ಕೋವಿಡ್ -19ರ ಬಳಿಕ ಕಾರು ಕಂಪನಿಗಳು ಚೇತರಿಸಿಕೊಳ್ಳುತ್ತಿರುವ ಸಮಯದಲ್ಲಿ ಕಂಪನಿಯು ಈ ನಿರ್ಧಾರಕ್ಕೆ ಬಂದಿದೆ. ದೇಶೀಯ ಕಾರುಗಳ ಮಾರಾಟವು ನವೆಂಬರ್‌ನಲ್ಲಿ ಶೇ. 2.4ರಷ್ಟು ಕುಸಿದಿದೆ. ಇದು ಈ ವರ್ಷ ಒಟ್ಟು 1.35 ಲಕ್ಷ ಕಾರುಗಳನ್ನು ಮಾರಾಟ ಮಾಡಿತ್ತು. ಆದರೆ ಕಳೆದ ವರ್ಷ ಇದೇ ಅವಧಿಯಲ್ಲಿ 1.39 ಲಕ್ಷ ಕಾರುಗಳನ್ನು ಮಾರಾಟ ಮಾಡಿದೆ.
ಹಬ್ಬದ ಋತುವಿನ ಬಳಿಕ ಕಾರುಗಳ ಮಾರಾಟ ನಿರೀಕ್ಷಿತ ಮಟ್ಟ ತಲುಪಿಲ್ಲ ಎಂದು ಭಾರತದ ಅತಿದೊಡ್ಡ ಕಾರು ತಯಾರಕ ಸಂಸ್ಥೆ ಮಾರುತಿ ಸುಜುಕಿ ಇಂಡಿಯಾ ಹೇಳಿದೆ. ಮುಂದಿನ ದಿನಗಳಲ್ಲಿ ಆರ್ಥಿಕತೆಯು ಸುಧಾರಿಸಿದಂತೆ ಮತ್ತು ಬೆಳವಣಿಗೆಯ ವೇಗ ಹೆಚ್ಚಾದಂತೆ, ಕಾರುಗಳ ಮಾರಾಟವೂ ಸುಧಾರಿಸಲಿ ಎಂಬ ಆಶಾವಾದ ಇದೆ ಎಂದು ಸಂಸ್ಥೆ ಹೇಳಿದೆ.
ಡಿಸೆಂಬರ್ ತಿಂಗಳಿನಲ್ಲಿ ವಾಹನ ಮಾರಾಟ ವಲಯ ಚೇತರಿಯಾಗುವ ಸಾಧ್ಯತೆ ಇದೆ. ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ ಪ್ರಕಾರ ಪ್ರಯಾಣಿಕರ ವಾಹನ ಚಿಲ್ಲರೆ ಮಾರಾಟವು ಈ ವರ್ಷದ ನವೆಂಬರ್‌ನಲ್ಲಿ ಶೇ. 4.17 ರಷ್ಟು ಹೆಚ್ಚಳ ಕಂಡಿದ್ದು, 2.91 ಲಕ್ಷ ತಲುಪಿದೆ. 2019 ರ ನವೆಂಬರ್‌ನಲ್ಲಿ 2 ಲಕ್ಷ 79 ಸಾವಿರ 365 ಯುನಿಟ್‌ಗಳು ಮಾರಾಟವಾಗಿವೆ.