Advertisement

ಜೀವಜಲ ಸಂರಕ್ಷಣೆಗೆ ಕೃವಿವಿ ಮಹತ್ವದ ಹೆಜ್ಜೆ

01:01 PM Sep 22, 2017 | Team Udayavani |

ಹುಬ್ಬಳ್ಳಿ: ಜಗತ್ತಿನ ಪ್ರತಿ ಜೀವಿಗೂ ನೀರು ಅನಿವಾರ್ಯ. ಆದರೆ ಜಲ ಕೊರತೆ ಜಾಗತಿಕವಾಗಿ ಬಹುದೊಡ್ಡ ಸಮಸ್ಯೆ, ಸವಾಲಾಗಿ ಪರಿಣಮಿಸಿದೆ. ಜಲ ಸಂರಕ್ಷಣೆ, ಸದ್ಬಳಕೆ ನಿಟ್ಟಿನಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಹಲವು ಮಾದರಿ ಯತ್ನಗಳೊಂದಿಗೆ ಜಾಗತಿಕ ಮಟ್ಟದಲ್ಲಿ ತನ್ನ ಹೆಸರು ನಮೂದಿಸಿದ್ದು, ಜಲ ಜಾಗೃತಿಗೆ ಮಹತ್ವದ ಕೊಡುಗೆ ನೀಡತೊಡಗಿದೆ. 

Advertisement

ಜಲ ಸಂರಕ್ಷಣೆ, ಜಲ ಜಾಗೃತಿ ವಿಚಾರದಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯ ದೇಶದ ಇತರೆ ಕೃಷಿ ವಿಶ್ವವಿದ್ಯಾಲಯಗಳಿಗೆ ಮಾದರಿಯಾಗಿಯಾಗುವ ಹಲವು ಪ್ರಯೋಗ, ಕಾರ್ಯಗಳನ್ನು ಕೈಗೊಂಡಿದೆ. ಜಾಗತಿಕ ಜಲ ತಜ್ಞರ ಸಮಾವೇಶ, ಜಾಗತಿಕ ಜಲ ವೇದಿಕೆ, ಬರ ಮುಕ್ತ ಭಾರತ, ಜಲ ಸಂರಕ್ಷಣೆ ಜಾಗೃತಿ ಹೀಗೆ ಹಲವು ಕಾರ್ಯಗಳಿಗೆ ಧಾರವಾಡ ಕೃವಿವಿ ವೇದಿಕೆಯಾಗಿದೆ. ಈ ಬಾರಿಯ ಕೃಷಿ ಮೇಳವನ್ನು “ಜಲ ವೃದ್ಧಿ-ಕೃಷಿ ಅಭಿವೃದ್ಧಿ’ ಧ್ಯೇಯ ವಾಕ್ಯದಡಿ ಕೈಗೊಳ್ಳುವ ಮೂಲಕ ಜಲಕ್ಕೆ ಮೊದಲಾದ್ಯತೆ ನೀಡಿದೆ.

ಸಂಕಷ್ಟ ಸ್ಥಿತಿ: ಜಲ ಸಮಸ್ಯೆ ಕೇವಲ ಉತ್ತರ ಕರ್ನಾಟಕ, ಕರ್ನಾಟಕ, ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ಜಾಗತಿಕವಾಗಿ ಕಾಡುತ್ತಿರುವ ಸಮಸ್ಯೆಯಾಗಿದ್ದು, ಜಲ ಕೊರತೆ ಹಾಗೂ ಹವಾಮಾನ ಬದಲಾವಣೆ ಇಡೀ ಜಗತ್ತು ಚಿಂತಾಕ್ರಾಂತವಾಗುವಂತೆ ಮಾಡಿದೆ.

ದೇಶದಲ್ಲಿ ಸುಮಾರು 400 ನದಿಗಳು ಅಂದಾಜು 1,860 ಬಿಲಿಯನ್‌ ಕ್ಯುಬಿಕ್‌ ಮೀಟರ್‌ನಷ್ಟು ನೀರು ಹೊತ್ತು ಸಾಗುತ್ತಿದ್ದರೂ ಇಡೀ ದೇಶ ಇಂದು ನೀರಿಗಾಗಿ ಹಾಹಾಕಾರ ಪಡುವಂತಹ ಸ್ಥಿತಿ ಎದುರಾಗಿದೆ. ನೀರಿನ ಸಮರ್ಪಕ ನಿರ್ವಹಣೆ, ಸದ್ಬಳಕೆ ಕೊರತೆ, ಪರಿಸರ ನಾಶ ಇವೆಲ್ಲವೂ ನೀರಿನ ಕೊರತೆಗೆ ಮಹತ್ವದ ಕೊಡುಗೆ ನೀಡತೊಡಗಿವೆ.

1951ರಲ್ಲಿ ಒಬ್ಬ ವ್ಯಕ್ತಿಗೆ ವಾರ್ಷಿಕವಾಗಿ ಸುಮಾರು 5,200 ಕ್ಯುಬಿಕ್‌ ಮೀಟರ್‌ನಷ್ಟು ನೀರು ಬಳಕೆಗೆ ಲಭ್ಯವಿತ್ತು. ತಜ್ಞರ ಪ್ರಕಾರ 2050 ವೇಳೆಗೆ ಒಬ್ಬ ವ್ಯಕ್ತಿಗೆ ವಾರ್ಷಿಕವಾಗಿ ದೊರೆಯುವ ನೀರಿನ ಪ್ರಮಾಣ ಕೇವಲ 1,191ಕ್ಯುಬಿಕ್‌ ಮೀಟರ್‌ ಎಂದು ಅಂದಾಜಿಸಲಾಗಿದೆ. ಭೂ ಮಂಡಲದಲ್ಲಿ ಶೇ.97.2ರಷ್ಟು ನೀರು ಸಮುದ್ರದ ರೂಪದಲ್ಲಿದ್ದರೆ, ಶೇ.2.8ರಷ್ಟು ಬಳಕೆಗೆ ಲಭ್ಯವಿದೆ.

Advertisement

ಇದರಲ್ಲಿ ಶೇ.85.3ರಷ್ಟು ನೀರಾವರಿ ರೂಪದಲ್ಲಿ ಕೃಷಿಗೆ ಬಳಕೆಯಾದರೆ, ಶೇ.6.5ರಷ್ಟು ಗೃಹ ಬಳಕೆಗೆ, ಶೇ.1.3ರಷ್ಟು ಕೈಗಾರಿಕೆಗೆ, ಶೇ.03ರಷ್ಟು ವಿದ್ಯುತ್‌ ಉತ್ಪಾದನೆಗೆ ಬಳಕೆ ಆಗುತ್ತಿದೆ. ದೇಶದಲ್ಲಿ ಜನಸಂಖ್ಯೆ ಹಾಗೂ ಕೃಷಿ ಕ್ಷೇತ್ರದ ನೀರಾವರಿ ಪ್ರದೇಶದ ಹೆಚ್ಚಳ ಆಗುತ್ತಿದೆ. 2020ರ ವೇಳೆಗೆ ದೇಶದ ಒಟ್ಟು ಜನಸಂಖ್ಯೆ 1,439 ಮಿಲಿಯನ್‌ ಆಗಲಿದ್ದು, ಆ ವೇಳೆಗೆ ಅಂದಾಜು 276 ಮಿಲಿಯನ್‌ ಟನ್‌ನಷ್ಟು ಆಹಾರ ಧಾನ್ಯಗಳು ಬೇಕಾಗುತ್ತದೆ. 

ಆದರೆ 2020ರ ವೇಳೆಗೆ ಆಹಾರ ಧಾನ್ಯಗಳ ಉತ್ಪಾದನೆಯ ಗುರಿ 313.18 ಮಿಲಿಯನ್‌ ಟನ್‌ ಆಗಿರಬೇಕಾಗುತ್ತದೆ. 1951ರಲ್ಲಿ 23 ಮಿಲಿಯನ್‌ ಹೆಕ್ಟೇರ್‌ ಇದ್ದ ಕೃಷಿ ನೀರಾವರಿ ಪ್ರದೇಶ ಇದೀಗ 88-90 ಮಿಲಿಯನ್‌ ಹೆಕ್ಟೇರ್‌ನಷ್ಟು ಹೆಚ್ಚಳವಾಗಿದೆ. ಇವೆಲ್ಲವುದಕ್ಕೂ ನೀರು ಪೂರೈಕೆ ಅತ್ಯವಶ್ಯವಾಗಿದೆ.

ಜಲ ಕಂಟಕ ಪರಿಹಾರಕ್ಕೆ ಅಳಿಲು ಸೇವೆ: ಜಲ ಕಂಟಕ ಇಡೀ ಜಗತ್ತನ್ನೇ ಕಾಡುತ್ತಿರುವ ಇಂದಿನ ಸ್ಥಿತಿಯಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯ ಇದಕ್ಕೆ ಪರಿಹಾರ ರೂಪದಲ್ಲಿ ತನ್ನ ಅಳಿಲು ಸೇವೆಗೆ ಮುಂದಾಗಿದೆ. ಇದರ ಭಾಗವಾಗಿಯೇ ಕಳೆದ ವರ್ಷದ ಅಕ್ಟೋಬರ್‌ 24-26ರವರೆಗೆ ಧಾರವಾಡ ಕೃವಿವಿಯಲ್ಲಿ ನಡೆದ ಜಾಗತಿಕ ಜಲತಜ್ಞರ ಸಮಾವೇಶದಲ್ಲಿ 20 ದೇಶಗಳ ಸುಮಾರು 150ಕ್ಕೂ ಅಧಿಕ ವಿವಿಧ ತಜ್ಞರು ಹಾಗೂ ಜಲ ಕಾರ್ಯಕರ್ತರು ಇದರಲ್ಲಿ ಪಾಲ್ಗೊಂಡಿದ್ದರು.

ಇಲ್ಲಿ ಕೈಗೊಂಡ “ಧಾರವಾಡ ಡಿಕ್ಲರೇಶನ್‌’ ಮೊರ್ಯಾಕ್ಕೊ ದೇಶದ ಮರಾಕೇಶದಲ್ಲಿ ವಿಶ್ವ ಸಂಸ್ಥೆ ಪ್ರಾಯೋಜಿತ ಕಾಪ್‌-22 ಶೃಂಗಸಭೆಯಲ್ಲಿ ಧಾರವಾಡ ಡಿಕ್ಲರೇಶನ್‌ ಪ್ರಸ್ತುತ ಪಡಿಸುವ ಮೂಲಕ ಧಾರವಾಡ ಕೃವಿವಿ ವಿಶ್ವದ ಗಮನ ಸೆಳೆದಿತ್ತು. ಬರ ಮುಕ್ತ ಭಾರತಕ್ಕಾಗಿ ರಾಷ್ಟ್ರೀಯ ಜಲ ಸಮ್ಮೇಳನ ಇದೇ ವರ್ಷದ ಆಗಸ್ಟ್‌ 15-18ರವರೆಗೆ ಐತಿಹಾಸಿಕ ನಗರ ವಿಜಯಪುರದಲ್ಲಿ ನಡೆದಿತ್ತು. ಇದರಲ್ಲಿಯೂ ಧಾರವಾಡ ಕೃವಿವಿ ಸಕ್ರಿಯ ಪಾತ್ರ ನಿರ್ವಹಿಸಿತ್ತು. 

ಕೃಷಿ ಭಾಗ್ಯಕ್ಕೆ ಬುನಾದಿ: 1987ರಲ್ಲಿಯೇ ಧಾರವಾಡ ಕೃವಿವಿ ವಿಜಯಪುರ ಜಿಲ್ಲೆಯ ಯರನಾಳ ಜಲಾನಯನ ಯೋಜನೆಗೆ ರಾಷ್ಟ್ರೀಯ ಉತ್ಪಾದಕಾ ಪ್ರಶಸ್ತಿ ಪಡೆದಿತ್ತಲ್ಲದೆ, ಸವಳು-ಜವಳು ನಿವಾರಣೆಗೆ ಮಹತ್ವದ ಕೊಡುಗೆ ನೀಡಿತ್ತು. ಕೃವಿವಿಯ ಅಂದಿನ ತಂತ್ರಜ್ಞಾನವೇ ಪ್ರಸ್ತುತ ರಾಜ್ಯ ಸರಕಾರದ ಕೃಷಿಹೊಂಡ ನಿರ್ಮಾಣದ ಕೃಷಿಭಾಗ್ಯ ಯೋಜನೆಗೆ ಬುನಾದಿಯಾಗಿದೆ. ಕೃವಿವಿ ಅಗ್ರಿಕ್ಲೈಮೆಟ್‌ ವಿಭಾಗವನ್ನು ಸಹ ಇತ್ತೀಚೆಗೆ ಆರಂಭಿಸಿದೆ. 

* ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next