Advertisement

ಕನ್ನಡದ ಉಳಿವಿಗೆ ಶೈಕ್ಷಣಿಕ ಉಪಕ್ರಮ ಅಗತ್ಯ

11:16 PM Nov 15, 2022 | Team Udayavani |

ಒಂದು ಭಾಷೆಯ ನೆಲೆಯಲ್ಲಿ ರಾಜ್ಯ ತನ್ನನ್ನು ಗುರುತಿಸಿಕೊಳ್ಳುವುದರ ಜತೆಗೆ ತನ್ನೊಳಗಿನ ಹಲವು ಉಪಭಾಷೆಗಳನ್ನು, ಸಂಸ್ಕೃತಿಯ ಮೂಲಾಂಶಗಳನ್ನು ಉಳಿಸಿಕೊಳ್ಳುವುದೂ ನಾಡಿನ ಶ್ರೀಮಂತಿಕೆಗೆ ಮತ್ತು ವಿಕಾಸಕ್ಕೆ ಬಹಳ ಮುಖ್ಯವೆಂಬ ಅರಿವು ನಮಗಿರಬೇಕು. ನೆಲಮೂಲದ ಸಂಸ್ಕೃತಿಯು ಸಂಸ್ಕಾರ ರೂಪದಲ್ಲಿ ನಮ್ಮ ಮೈಮನಗಳನ್ನು ತುಂಬಿಕೊಂಡು, ನಮ್ಮ ಬದುಕಿನ ಜೀವ ದ್ರವ್ಯವಾಗುವುದೇ ಭಾಷೆಯ ಮೂಲಕ. ಸ್ಥಳೀಯವಾಗಿರುವುದೇ ನಿಜವಾದ ಬದುಕು ಮತ್ತು ಜಾಗತಿಕ ದೃಷ್ಟಿಕೋನ. ಕನ್ನಡ ಶಾಲೆಗಳ ಅಭಿವೃದ್ಧಿ, ಭಾಷೆಯನ್ನು ಕಲಿಸುವ ಉತ್ತಮ ವ್ಯವಸ್ಥೆ, ಸಾಂಸ್ಕೃತಿಕ ಒಲವು ಮೂಡಿಸುವ ಪ್ರೇರಣೆ, ಕನ್ನಡ ಭಾಷೆ ಮತ್ತು ಸಾಹಿತ್ಯದ ಅಭಿರುಚಿ ಉಳಿಸಿ, ಬೆಳೆಸಿಕೊಳ್ಳಲು ಶೈಕ್ಷಣಿಕ ಮತ್ತು ಔದ್ಯೋಗಿಕ ಉಪಕ್ರಮಗಳು ಇಂದಿನ ಅಗತ್ಯವಾಗಿದೆ.

Advertisement

ವೈವಿಧ್ಯತೆಯೇ ನಮ್ಮ ದೇಶದ ವಿಶೇಷತೆ. ಅಂತಹ ವೈವಿಧ್ಯತೆಯ ಮೂಲ ಪರಿಕಲ್ಪನೆಯಲ್ಲಿ, ದೇಶದ ಪ್ರತಿಯೊಂದೂ ರಾಜ್ಯವೂ ವಿಜೃಂಭಿಸಬೇಕು. ಆ ಮೂಲಕ ದೇಶ ಪ್ರಜ್ವಲಿಸಬೇಕೆಂಬುದು ನಮ್ಮೆಲ್ಲರ ಮಾತ್ರವಲ್ಲ ಸಾಂವಿಧಾನಿಕ ಆಶಯವೂ ಆಗಿದೆ.

ವರ್ಷಗಳ ಲೆಕ್ಕಾಚಾರದಲ್ಲಿ ನಮ್ಮ ರಾಜ್ಯ ರಚನೆಯಾಗಿ ಅರವತ್ತೈದು ಕಳೆಯಿತು. ಅರುವತ್ತು ದಾಟಿರುವುದು ಯಾವುದರ ಲಕ್ಷಣ?, ವೃದ್ಧಾಪ್ಯವೇ? ವಯಸ್ಸು ದೇಹಕ್ಕೇ ಹೊರತು ಮನಸ್ಸಿಗಲ್ಲವೆಂದು ನಾವೆಲ್ಲರೂ ಉಸುರುತ್ತೇವೆ. ಆದರೆ ಅದನ್ನು ಪಕ್ವತೆಯ ಪರಿಪಾಕದ ಪರಿಧಿಯೊಳಗೆ ಗ್ರಹಿಸಿದರೆ, ನಮ್ಮ ನಾಡು, ನುಡಿ, ಸಂಸ್ಕೃತಿಯ ಹಿರಿಮೆ ಕೊನೆಯ ಪಕ್ಷ ಮೇರುಶೃಂಗವಲ್ಲದಿದ್ದರೂ ಊರ ಗಡಿಯ ಸಹ್ಯಾದ್ರಿಯ ಮಟ್ಟದಲ್ಲಾದರೂ ಕಂಗೊಳಿಸಬೇಕಿತ್ತು. ಪ್ರಶ್ನೆ ಇರುವುದೇ ಇಲ್ಲಿ. ಪ್ರಸ್ತುತ ನಮ್ಮ ನಾಡು, ನೆಲಮೂಲದ ಸಂಸ್ಕೃತಿಯ ತಲ್ಲಣದ ದಟ್ಟ ಅನುಭವವನ್ನು ನೀಡುತ್ತಾ ಸಾಂಸ್ಕೃತಿಕ ಜೀವಂತಿಕೆಗಿಂತಲೂ ಆರ್ಥಿಕ ಲೆಕ್ಕಾಚಾರದ ಪಥದತ್ತ ಮುಖಮಾಡಿದೆ ಎನ್ನೋಣವೇ?
ಕನ್ನಡ ಶಾಲೆಗಳು ಉಳಿಯಬೇಕು ನಾಡು ಉಳಿಯಬೇಕಾದರೆ ಸಂಸ್ಕೃತಿ ಉಳಿಯ ಬೇಕು. ಸಂಸ್ಕೃತಿ ಉಳಿಯಬೇಕಾದರೆ ಭಾಷೆ ಉಳಿಯ ಬೇಕು. ಭಾಷೆ ಉಳಿಯಬೇಕಾದರೆ ಕನ್ನಡ ಶಾಲೆಗಳು ಉಳಿಯಬೇಕು ಅಲ್ಲವೇ? ಭಾಷಾಂಧತೆ, ಗಡಿ, ನೀರು, ಉದ್ಯೋಗ, ನಿಸರ್ಗ…ಹೀಗೆಲ್ಲ ತಕರಾರು ಒಂದೆಡೆ ಇದೆ. ಭಾರತೀಯತೆಯ ಚೌಕಟ್ಟಿನಲ್ಲಿ ಹಾಗೂ ಸಾಂವಿಧಾನಿಕ ನೆಲೆಗಟ್ಟಿನಲ್ಲಿ ನಮ್ಮ ನಾಡು-ನುಡಿಯ ಅಸ್ಮಿತೆಯನ್ನು ಉಳಿಸಿ ಕೊಳ್ಳುವ ಮತ್ತು ಬೆಳೆಸಿಕೊಳ್ಳುವ ಅಗತ್ಯತೆ ಇಂದಿ ನದು. ಇದು ಕೇವಲ ಕನ್ನಡ ನೆಲಕ್ಕೇ ಎಂದಲ್ಲ. ಎಲ್ಲ ಭಾಷಾ ಪರಿಧಿಯೊಳಗಿನ ನೆಲಕ್ಕೂ ಅನ್ವಯ. ಪ್ರಸ್ತುತ ಕನ್ನಡ ನಾಡು, ನುಡಿ, ಸಂಸ್ಕೃತಿಯು ಕೆಲವಾರು ಸವಾಲುಗಳನ್ನು ಎದುರಿಸುತ್ತಿದೆ.

ಸದ್ಯದ ಪರಿಸ್ಥಿತಿಯಲ್ಲಿ ಕರುನಾಡಿನೊಳಗಿದ್ದೂ ಇಲ್ಲದವರಂತೆ ಚೌಕಟ್ಟು ಮೀರಿ ವರ್ತಿಸುವ ಜನ, ನಮ್ಮ ನೆಲಕ್ಕೂ ನೆಲದ ಭಾಷೆಗೂ ಹೊಡೆತ ನೀಡುತ್ತಿರುವುದನ್ನು ಕಾಣುತ್ತಿದ್ದೇವೆ. ಇನ್ನೊಂದು ವಿಷಯವೇನೆಂದರೆ ಅತೀ ಎನಿಸುವ ಭಾಷಾಭಿಮಾನ. ಇದು ಇತರ ಭಾಷಿಗರನ್ನು, ಭಾಷೆಯನ್ನು ಕನಿಷ್ಠ ಗೌರವಿಸುವ ಮಾನವತೆಯನ್ನು ಮರೆತು ವರ್ತಿಸುವಂತೆ ಮಾಡುತ್ತಿದೆ.

ನಮ್ಮದು ಒಕ್ಕೂಟ ವ್ಯವಸ್ಥೆಯ ಆಡಳಿತ. ಒಕ್ಕೂಟದ ವ್ಯವಸ್ಥೆಯಲ್ಲಿ ಎಲ್ಲ ರಾಜ್ಯಗಳೂ ಭಾಷೆ, ಗಡಿ, ನೀರಿನ ವಿಚಾರಗಳಲ್ಲಿ ರಾಜಧರ್ಮ ಮತ್ತು ಮಾನವತೆಯ ನೀತಿಗೆ ವಿರುದ್ಧವಾಗಿ ನಿರ್ಣಯ ಕೈಗೊಳ್ಳುವುದು, ಕಿಡಿ ಹಚ್ಚುವುದು, ದ್ವೇಷದ ಕೀಳು ರಾಜಕಾರಣ ಮಾಡುವುದು ಹಾಗೂ ಪಕ್ಷ, ಪಂಗಡ, ಜಾತಿ ಧರ್ಮದ ನೆಲೆಯಲ್ಲಿ ಒಡೆದು ಆಳುವುದು ಅತ್ಯಂತ ಅಪಾಯಕಾರಿ ಬೆಳವಣಿಗೆ. ಇದು ದೇಶದ ಸಾಂಸ್ಕೃತಿಕ ಅನನ್ಯತೆಗೆ ಹೊಡೆತ ನೀಡುವುದು ಮಾತ್ರವಲ್ಲದೆ ರಾಜ್ಯದ ಐಕಮತ್ಯದ ಮೇಲೂ ಪರಿಣಾಮ ಬೀರುವ ಅಂಶವಾಗಿದೆ. ಒಂದು ಭಾಷೆಯ ನೆಲೆಯಲ್ಲಿ ರಾಜ್ಯ ತನ್ನನ್ನು ಗುರುತಿಸಿ ಕೊಳ್ಳು ವುದರ ಜತೆಗೆ ತನ್ನೊಳಗಿನ ಹಲವು ಉಪಭಾಷೆಗಳನ್ನು, ಸಂಸ್ಕೃತಿಯ ಮೂಲಾಂಶಗಳನ್ನು ಉಳಿಸಿಕೊಳ್ಳುವುದೂ ನಾಡಿನ ಶ್ರೀಮಂತಿಕೆಗೆ ಮತ್ತು ವಿಕಾಸಕ್ಕೆ ಬಹಳ ಮುಖ್ಯವೆಂಬ ಅರಿವು ನಮಗಿರಬೇಕು.

Advertisement

ನಾಡು, ನಾಡಿನ ಶ್ರೀಮಂತಿಕೆ ಎಂದರೆ ಕೇವಲ ಹಣ, ಸೊತ್ತು, ನಿರ್ಮಾಣ, ಭೌತಿಕ ರಚನೆಗಳು…ಎಂದಲ್ಲ. ಅದರೊಳಗಿನ ನಮ್ಮ ನಿಸರ್ಗ, ಭಾಷೆ ಮತ್ತು ಭಾಷೆಯ ಮೂಲಕ ಪ್ರವಹಿಸುವ ಎಲ್ಲ ಮಾನವಿಕ ಅಂಶಗಳೂ ಅಷ್ಟೇ ಮುಖ್ಯ. ನೆಲಮೂಲದ ಸಂಸ್ಕೃತಿಯು ಸಂಸ್ಕಾರ ರೂಪದಲ್ಲಿ ನಮ್ಮ ಮೈಮನಗಳನ್ನು ತುಂಬಿಕೊಂಡು, ನಮ್ಮ ಬದುಕಿನ ಜೀವ ದ್ರವ್ಯ ವಾಗುವುದೇ ಭಾಷೆಯ ಮೂಲಕ. ಸ್ಥಳೀಯ ವಾಗಿರುವುದೇ ನಿಜವಾದ ಬದುಕು ಮತ್ತು ಜಾಗತಿಕ ದೃಷ್ಟಿಕೋನ. ಆದರೆ ಇಂದಿನ ದಿನಮಾನದಲ್ಲಿ ಆಡಳಿತಗಾರರಿಂದ ಭಾಷೆಯೂ ವ್ಯಾಪಾರದ, ಅಧಿ ಕಾರದ ಸರಕಾಗಿ ಮಾರ್ಪಾಟು ಹೊಂದಿರುವುದು ನಾಡಿನ ದುರಂತ.

ಭಾಷೆ ಅನ್ನ ನೀಡಬೇಕೆಂಬುದು ಮೂಲ ಆಶಯವಲ್ಲ. ಪ್ರಸ್ತುತ ಮೂಲಭೂತ ಆವಶ್ಯಕತೆಗಳ ಪೂರೈಕೆಯ ಪ್ರಶ್ನೆಯೇ ಭಾಷೆಯಾಗಿದೆ. ಒಪ್ಪಿ ಕೊಳ್ಳೋಣ, ಅನಿವಾರ್ಯವೂ ಹೌದು. ನಾವು ಸೋತದ್ದೆಲ್ಲಿಯೆಂದರೆ ; ನಾಡಿನ ಭಾಷೆಯನ್ನು ಶಿಕ್ಷಣದ ಮೂಲಕ ಮತ್ತು ಅನ್ಯ ಭಾಷೆಯ ಮೂಲಕ ಅಪ್ರಸ್ತುತ ಗೊಳಿಸಿದ್ದು. ಭಾಷೆಯನ್ನು ಸಮರ್ಥ ಮಾಧ್ಯಮವಾಗಿ ಮತ್ತು ಬಹುರೂಪಿ ನೆಲೆಯಲ್ಲಿ ಭಾಷೆಗೆ ವ್ಯಾಪ್ತಿಯನ್ನು ನೀಡುವಲ್ಲಿ ವಿಫಲವಾದದ್ದು. ಈ ಕಾರಣದಿಂದಲೇ ಇದೀಗ ನಾವು ನಾಡು- ನುಡಿಯನ್ನು ಆಚರಣೆಯ ಹಂತಕ್ಕೆ ತಂದು ನಿಲ್ಲಿಸಿದ್ದೇವೆ.

ಆಶಾದಾಯಕ ಬೆಳವಣಿಗೆ
ಭಾಷೆ ಆಚರಣೆಯ ಸರಕಲ್ಲ. ಅದು ಬದುಕಿನ ಒಸರು. ಸದ್ಯ ನಮ್ಮ ಭಾಷೆಯ ಮೇಲೆ ನಾನಾ ರೂಪ ದಲ್ಲಿ ಸವಾರಿ ನಡೆಯುತ್ತಿದೆ. ಜಾಗತಿಕ ಮಾರು ಕಟ್ಟೆಗಾಗಿ ಹಾಗೂ ಆರ್ಥಿಕ ನೋಟಕ್ಕಾಗಿ ಇಡೀ ಶೈಕ್ಷಣಿಕ ವ್ಯವಸ್ಥೆಯನ್ನು ವ್ಯಾಪಾರದ ಅಂಗಳವನ್ನಾಗಿಸಿ “ಭಾಷೆ ಅನ್ನ ನೀಡಬೇಕಲ್ಲ’ ಎಂಬ ಹೊಸ ವ್ಯಾಖ್ಯೆಯೊಂದಿಗೆ ಕನ್ನಡ ಭಾಷೆಯನ್ನು ಬದಿಗೆ ತಳ್ಳಿಬಿಟ್ಟಿದ್ದೇವೆ. ಆಡಳಿತದಲ್ಲಿ ಕನ್ನಡ ಎಂಬುದು ಕೇವಲ ಸುತ್ತೋಲೆಗೆ ಸೀಮಿತ ವಾಗಿದೆ ಎಂಬ ಅನುಭವ ದಟ್ಟವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಆಯಾ ರಾಜ್ಯ ಭಾಷೆ ಯಲ್ಲೂ ಉನ್ನತ ಮತ್ತು ವೃತ್ತಿಪರ ಶಿಕ್ಷಣದ ಕೆಲವು ಉಪಕ್ರಮಗಳು ಆಶಾದಾಯಕ ಬೆಳವಣಿಗೆಯಾಗಿದೆ.

ಶೈಕ್ಷಣಿಕ ಮತ್ತು ಔದ್ಯೋಗಿಕ
ಉಪಕ್ರಮಗಳು ಅಗತ್ಯ
ಗುಣಮಟ್ಟದ ಶಿಕ್ಷಣಭಾಷೆಯನ್ನು ಉಳಿಸಲು ರಿಯಾಯಿತಿಗಳು ಬೇಕಾಗಿಲ್ಲ. ಕೇವಲ ಕನ್ನಡ ಪರ ಕಾರ್ಯಕ್ರಮಗಳೂ ಅಲ್ಲ. ಕನ್ನಡ ಶಾಲೆಗಳ ಅಭಿವೃದ್ಧಿ, ಭಾಷೆಯನ್ನು ಕಲಿಸುವ(ಎಲ್ಲ ವಿಷಯಗಳನ್ನೂ) ಉತ್ತಮ ವ್ಯವಸ್ಥೆ, ಸಾಂಸ್ಕೃತಿಕ ಒಲವು ಮೂಡಿಸುವ ಪ್ರೇರಣೆ, ಕನ್ನಡ ಭಾಷೆ ಮತ್ತು ಸಾಹಿತ್ಯದ ಅಭಿರುಚಿ ಉಳಿಸಿ ಬೆಳೆಸಿಕೊಳ್ಳಲು ಶೈಕ್ಷಣಿಕ ಮತ್ತು ಔದ್ಯೋಗಿಕ ಉಪಕ್ರಮಗಳು ಅಗತ್ಯವಾಗಿದೆ.

ಗುಣಮಟ್ಟದ ಶಿಕ್ಷಣದ ಹೆಸರಿನಲ್ಲಿ ಆಂಗ್ಲ ಭಾಷಾ ಮಾಧ್ಯಮವನ್ನು ಆರಂಭಿಸುವುದು, ಖಾಸಗಿ ಕನ್ನಡ ಶಾಲೆಗಳು ಮತ್ತು ಸರಕಾರಿ ಶಾಲೆಗಳ ಮಧ್ಯೆ ತಾರತಮ್ಯ ನೀತಿಯ ಅನುಸರಣೆ ಕನ್ನಡ ಭಾಷೆಗೆ ಮಾಡುವ ಅವಮಾನ ಮತ್ತು ಕುಠಾರಪ್ರಾಯವಾಗಿದೆ.

ಶೈಕ್ಷಣಿಕ, ಆಡಳಿತಾತ್ಮಕ ಮತ್ತು ಅಭಿವೃದ್ಧಿ ಬಗೆಗಿನ ನಮ್ಮ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳಬೇಕಾದ ಮತ್ತು ಅವಲೋಕನ ನಡೆಸಬೇಕಿರುವುದು ಇಂದಿನ ಅಗತ್ಯ. ಆ ಮೂಲಕವಾದರೂ ಕನ್ನಡ ಭಾಷೆಯ ಬೆಳವಣಿಗೆ ಮತ್ತು ಕನ್ನಡ ಶಾಲೆಗಳ ಉಳಿಸುವಿಕೆಯ ದಿಸೆಯಲ್ಲಿ ನಮ್ಮೆಲ್ಲರ ಪ್ರಯತ್ನಗಳು ಸಾಗಲಿ.

-ರಾಮಕೃಷ್ಣ ಭಟ್‌ ಚೊಕ್ಕಾಡಿ, ಬೆಳಾಲು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next