Advertisement

ಹಣದ ಸುತ್ತ ಸುತ್ತುತ್ತಿದೆ ಶೈಕ್ಷಣಿಕ ‌ವ್ಯವಸ್ಥೆ-ನಿರಂಜನಾನಂದಶ್ರೀ

05:44 PM Feb 13, 2024 | Team Udayavani |

ಉದಯವಾಣಿ ಸಮಾಚಾರ 
ಬ್ಯಾಡಗಿ: ಶೈಕ್ಷಣಿಕ ವ್ಯವಸ್ಥೆ ಹಣದ ಸುತ್ತಲೂ ಸುತ್ತುತ್ತಿದೆ. ಇಂತಹ ಶೈಕ್ಷಣಿಕ ವ್ಯವಸ್ಥೆಗಳಿಂದ ಸಮಾಜ ಮತ್ತು ದೇಶ ಏನನ್ನು ನಿರೀಕ್ಷಿಸಲು ಸಾಧ್ಯ. ಬದುಕುವುದಕ್ಕೂ ಒಂದು ರೀತಿ, ನೀತಿಯಿದೆ. ಅದು ಹುಟ್ಟಿದ ಮನೆಯಲ್ಲಿ ಸಿಗದಿದ್ದರೇ ಕನಿಷ್ಟ ಶಾಲೆಗಳಲ್ಲಾದರೂ ಸಿಗಲೇಬೇಕು. ಇಲ್ಲದಿದ್ದರೇ ಮುಂದೊಂದು  ದಿನ ಕಲಿತವರು ಅಬ್ಬೇಪಾರಿಗಳು, ಕಲಿಸಿದವರು ಆನಾ ಥಶ್ರಮದ ಸದಸ್ಯರಾಗಬೇಕಾಗುತ್ತದೆ ಎಂದು ಕನಕಗುರುಪೀಠದ ನಿರಂಜನಾನಂದ ಶ್ರೀಗಳು ಖೇದ ವ್ಯಕ್ತಪಡಿಸಿದರು.

Advertisement

ತಾಲೂಕಿನ ಕಾಗಿನೆಲೆಯಲ್ಲಿ ಕನಕ ಗುರುಪೀಠದ ಆವರಣದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯು ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಣ ಸಂಸ್ಥೆಗಳು ಉದ್ದಿಮೆಗಳಾಗುತ್ತಿವೆ. ವೇತನಕ್ಕೆ ತಕ್ಕಂತೆ ಪಾಠ  ಹೇಳದಿರುವ ಶಿಕ್ಷಕ, ಹಣಗಳಿಸುವುದಕ್ಕಾಗಿ ಶಿಕ್ಷಣ ಕೊಡಿಸುತ್ತಿರುವ ಪಾಲಕರ ಮನಸ್ಥಿತಿಯಿಂದ
ಶೈಕ್ಷಣಿಕ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಬಂಡವಾಳ ಹೂಡಿ ಸರ್ಟಿಫಿಕೇಟ್‌ ಪಡೆಯುವ ಪದವೀಧರ ಇನ್ಯಾವ ಅನ್ವೇಷಣೆ ಕುರಿತು ಚಿಂತಿಸಲು ಸಾಧ್ಯ? ಎಂದು ಪ್ರಶ್ನಿಸಿದರು.

ಶಿಕ್ಷಣದ ಉದ್ದೇಶ ಬದಲಾಗಬೇಕು:
ಭೂತಕಾಲದಲ್ಲಿನ ಸಂಗತಿಗಳು, ವರ್ತಮಾನದಲ್ಲಿ ಚಿಂತನೆಗೊಳಪಡಬೇಕು. ಅಂದಾಗ ಮಾತ್ರ ಭವಿಷ್ಯದ ಬದುಕಿಗೆ ಪರಿಹಾರ ಕಂಡುಹಿಡಿಯಲು ಸಾಧ್ಯ. ಇದನ್ನೇ ನಾವು ಸಹ ಶಿಕ್ಷಣವೆಂದು ಪ್ರತಿಪಾದಿಸುತ್ತಿದ್ದೇವೆ. ಆದರೆ ವಾಸ್ತವ ಬದುಕಿಗೆ ಮತ್ತು ವೈಜ್ಞಾನಿಕ ಚಿಂತನೆಗಳಿಗೆ ಪ್ರಸ್ತುತ ಶೈಕ್ಷಣಿಕ ವ್ಯವಸ್ಥೆಯಲ್ಲಿ ಅವಕಾಶ ನೀಡುತ್ತಿಲ್ಲ. ಶಿಕ್ಷಣದ ಉದ್ದೇಶ ಇಂದಿನಿಂದಲೇ ಬದಲಾವಣೆ ಆಗಬೇಕಾಗಿದೆ. ಇಲ್ಲದಿದ್ದರೇ ಮುಂದೆಯೂ ಸಾಧ್ಯವಿಲ್ಲ ಎಂದರು.

ಕನಕಗುರುಪೀಠದ ಕಿರಿಯ ಶ್ರೀಗಳಾದ ಅಮೋಘ ಸಿದ್ದೇಶ್ವರ ಶ್ರೀಗಳು ಮಾತನಾಡಿ, ಶಿಕ್ಷಣವನ್ನು ನಾವು ಸಹ ಗೌರವಿಸುತ್ತೇವೆ.
ಸಮಾಜದ ಪ್ರತಿಯೊಂದು ವರ್ಗದ ಮಕ್ಕಳಿಗೆ ಶಿಕ್ಷಣದಲ್ಲಿ ಸಮಾನ ಅವಕಾಶ ಸಿಗುವಂತೆ ನೋಡಿಕೊಳ್ಳಬೇಕು. ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡದಿದ್ದರೂ ಪರವಾಗಿಲ್ಲ, ಆದರೆ ಭಾರತದಂತಹ ಸಾಂಸ್ಕೃತಿಕ ದೇಶದಲ್ಲಿ ಧರ್ಮ ಮತ್ತು ಶಿಕ್ಷಣ ಎರಡನ್ನೂ ಸಮನಾಗಿ ತೆಗೆದುಕೊಂಡು ಹೋಗುವ ಶೈಕ್ಷಣಿಕ ವ್ಯವಸ್ಥೆ ಅವಶ್ಯವಿದೆ. ಇದರಲ್ಲಿ ನಾವು ಎಡವುತ್ತಿರುವುದರಿಂದ ಪಾಶ್ವಾತ್ಯ ಸಂಸ್ಕೃತಿ ಸದ್ದಿಲ್ಲದೇ ನುಸುಳುತ್ತಿದ್ದು, ಕ್ರಮೇಣವಾಗಿ ಅಧಿಪತ್ಯ ಸಾಧಿಸುತ್ತಿದೆ ಎಂದರು.

ಉಪನ್ಯಾಸ ನೀಡಿದ ಡಾ| ಓಂಕಾರ್‌ ನಾಯ್ಕ ಮಾತನಾಡಿ, ವಿದ್ಯಾವಂತರು ದೇಶದ ಅಮೂಲ್ಯ ಆಸ್ತಿ. ಗುಣಮಟ್ಟದ ಶಿಕ್ಷಣ ಪಡೆದವರಿಂದ ದೇಶ ಮುನ್ನಡೆಸಲು ಸಹಾಯ ಮಾಡುತ್ತದೆ. ಸುಶಿಕ್ಷಿತರು ಉದ್ಯೋಗಗಳನ್ನು ತೆಗೆದುಕೊಂಡು ಜೀವನದಲ್ಲಿ ಯಶಸ್ವಿಯಾಗಬಹುದು. ಆದರೆ ಶೈಕ್ಷಣಿಕ ಅಸಮರ್ಥ ವಿದ್ಯಾರ್ಥಿಗಳಿಗೆ ಗೌರವಯುತವಾಗಿ ಬದುಕುವ, ಶೋಷಣೆಗೊಳಗಾಗದಂತೆ ರಕ್ಷಿಸಿಕೊಳ್ಳುವ ಅವಕಾಶವನ್ನಾದರೂ ಶಿಕ್ಷಣದಲ್ಲಿ ಕಲ್ಪಿಸಬೇಕಾಗಿದೆ ಎಂದರು. ವೇದಿಕೆಯಲ್ಲಿ ಎಸ್‌ಎಫ್‌ಎನ್‌ ಗಾಜೀಗೌಡ್ರ, ರಾಜೇಂದ್ರ ಹಾವೇರಣ್ಣವರ, ಮಾಲತೇಶ ಬಣಕಾರ, ಎಸ್‌.ಎನ್‌. ಮಾತನವರ, ಮಾರುತಿ ಹರಿಹರ, ಸದಾನಂದಗೌಡ ಪಾಟೀಲ, ಹಳದಪ್ಪ ಕಂಬಳಿ, ಪಿಎಸ್‌ಐ ಭಾರತಿ ಹಾಗೂ ಶಿಕ್ಷಕ ಸಿಬ್ಬಂದಿ ಉಪಸ್ಥಿತರಿದ್ದರು. ಪ್ರಾಚಾರ್ಯ ಬೀರಪ್ಪ ಸ್ವಾಗತಿಸಿದರು. ಮುಖ್ಯಶಿಕ್ಷಕ ರವಿ ಆನ್ವೇರಿ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next