Advertisement

ಕಾಲಕಾಲಕ್ಕೆ ಬದಲಾಗದ ಶೈಕ್ಷಣಿಕ ಪದ್ಧತಿ

07:29 PM Mar 22, 2021 | Team Udayavani |

ಯಾದಗಿರಿ: ಶೈಕ್ಷಣಿಕ ಪದ್ಧತಿ ಕಾಲಕಾಲಕ್ಕೆ ಬದಲಾವಣೆ ತರಬೇಕಾಗಿತ್ತು. ಆದರೆ ಅದು ಸಾಧ್ಯವಾಗಿಲ್ಲ. ಪರಿಣಾಮ ಭಾಷೆ ಬೆಳವಣಿಗೆಗೆ ಕಂಟಕವಾಗಿ ಪರಿಣಮಿಸಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ರಾಜ್ಯಾಧ್ಯಕ್ಷ ಟಿ.ಎಸ್‌. ನಾಗಾಭರಣ ವಿಷಾದ ವ್ಯಕ್ತಪಡಿಸಿದರು.

Advertisement

ನಗರದ ಹೃದಯ ಭಾಗದಲ್ಲಿ ನಿರ್ಮಾಣವಾದ ನೂತನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸಕ್ತ ದಿನಗಳಲ್ಲಿ ರಾಜ್ಯದ ಗಡಿಭಾಗಗಳ ಪ್ರದೇಶಗಳ ಮೇಲೆ ನೆರೆ ರಾಜ್ಯಗಳ ಭಾಷೆ ಪ್ರಭಾವ ಹೆಚ್ಚಾಗಿ ಬೀರುತ್ತಿವೆ. ಕಾರಣ ನಾವೂ ಜಾಗೃತರಾಗಿ, ಸ್ವಾಭಿಮಾನಿ ಸಂಘಟಿತರಾಗಿ ಕನ್ನಡ ಭಾಷೆ ಗಟ್ಟಿಯಾಗಿ ಬೆಳವಣಿಗೆಗೆ ಶ್ರಮಿಸಬೇಕು. ಅಂದಾಗ ಮಾತ್ರ ನಾಡು ಸುರಕ್ಷಿತ ಎಂದು ವ್ಯಾಖ್ಯಾನಿಸಿದರು.

ಇಂದು ಕನ್ನಡ ಭಾಷೆಯನ್ನು ಕೃತಿಯಲ್ಲಿ ತರಲು ನಿರ್ಧರಿಸಿದ್ದೇವೆ. ಭಾಷೆ ಶೈಕ್ಷಣಿಕ ಪ್ರಗತಿಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ತಿಳಿಸಿ, ಕನ್ನಡಿಗರು ಎಲ್ಲರನ್ನು ಪ್ರೀತಿ ವಿಶ್ವಾಸದಿಂದ ಕಾಣುವ ವಿಶಾಲ ಹೃದಯದೊಂದಿಗೆ ವಿಶ್ವ ಪರಂಪರೆ ದೃಷ್ಟಿ ಹೊಂದಿದ್ದಾರೆ. ಕನ್ನಡ ಭಾಷೆ ಮನುಕುಲ ಇರುವ ವರೆಗೆ ಇರುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಕಸಾಪ ಹಮ್ಮಿಕೊಳ್ಳುವ ಚಟುವಟಿಕೆಗಳಿಗೆ ಪ್ರಾಧಿಕಾರದಿಂದ ಸೂಕ್ತ ಸಹಕಾರ ನೀಡಲಾಗುವುದು ಎಂದು ತಿಳಿಸಿ, ಕಚೇರಿ ಕಟ್ಟಡ ನಿರ್ಮಾಣದಿಂದ ಬರುವ ದಿನಗಳಲ್ಲಿ ಕಸಾಪ ತಂಡ ಎಲ್ಲ ಭಾಗದಲ್ಲಿ ಕ್ರಿಯಾಶೀಲವಾಗಿ ಕೆಲಸ ಮಾಡಲಿ ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಶಶೀಲ್‌ ನಮೋಶಿ ಮಾತನಾಡಿ, ರಾಜ್ಯ ಸರ್ಕಾರ ಶಿಕ್ಷಣ ಗುಣಮಟ್ಟಕ್ಕಾಗಿ ಎಲ್ಲ ಭಾಗಗಳಲ್ಲಿ ವಿಶ್ವ ವಿದ್ಯಾನಿಲಯಗಳ ಸ್ಥಾಪನೆ ಮಾಡಿದೆ. ಆದರೆ ಅವುಗಳಿಗೆ ಸೂಕ್ತ ಸಿಬ್ಬಂದಿ ನೇಮಕ ಹಾಗೂ ಹೆಚ್ಚಿನ ಅನುದಾನ ನೀಡದ ಪರಿಣಾಮ ಅಲ್ಲಿ ವಿದ್ಯಾರ್ಥಿಗಳು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅದಕ್ಕೆ ಉದಾಹರಣೆಯಾಗಿ ಹಂಪಿ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳು ಕೇವಲ ಸಂಶೋಧನೆಯಲ್ಲಿ ತೊಡಗಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ಶಾಸಕ ವೆಂಕಟರೆಡ್ಡಿ ಮುದ್ನಾಳ ಮಾತನಾಡಿ, ಬರುವ ದಿನಗಳಲ್ಲಿ ಜಿಲ್ಲೆಯಲ್ಲಿ ಯುವ ಸಾಹಿತಿಗಳಿಗೆ ಉತ್ತಮ ವೇದಿಕೆ ಕಲ್ಪಿಸಿ ಅವರಲ್ಲಿರುವ ಪ್ರತಿಭೆಗಳನ್ನು ನಾಡಿಗೆ ಪರಿಚಯಿಸಬೇಕು ಎಂದು ಸಲಹೆ ನೀಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ, ನನ್ನ ಅಧಿಕಾರ ಅವಧಿಯಲ್ಲಿ ಜಿಲ್ಲಾ ಕಸಾಪ ಘಟಕಕ್ಕೆ ಹೊಸ ಕಾಯಕಲ್ಪ ನೀಡಿ, ನಿರಂತರ ಎಲ್ಲರ ಸಹಕಾರದಿಂದ ಪರಿಷತ್ತಿನ ಚಟುವಟಿಕೆ ಹಮ್ಮಿಕೊಳ್ಳುವ ಮೂಲಕ ಪ್ರಾಮಾಣಿಕವಾಗಿ ಕೆಲಸ ಮಾಡಿದ ಆತ್ಮತೃಪ್ತಿಯಿದೆ ಎಂದರು. ಈ ಸಂದರ್ಭದಲ್ಲಿ ಪರಿಷತ್ತಿನ ಬೆಳವಣಿಗೆಗೆ ಶ್ರಮಿಸಿದ ಹಿರಿಯರಾದ ಅಯ್ಯಣ್ಣ ಹುಂಡೇಕಾರ್‌, ಎಂ.ಕೆ. ಬೀರನೂರ್‌ ಹಾಗೂ ಬಸವಂತ್ರಾಯಗೌಡ ಮಾಲಿಪಾಟೀಲ್‌ ಅವರನ್ನು ಸತ್ಕರಿಸಲಾಯಿತು.

Advertisement

ಮಾಜಿ ಶಾಸಕ ಚನ್ನಾರೆಡ್ಡಿ ಪಾಟೀಲ್‌ ತುನ್ನೂರ, ಜಿ.ಪಂ ಅಧ್ಯಕ್ಷ ಬಸನಗೌಡ ಯಡಿಯಾಪೂರ್‌, ಅಪರ ಜಿಲ್ಲಾಧಿಕಾರ ಪ್ರಕಾಶ ರಜಪೂತ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಶ ಭಗವಾನ ಸೋನಾವಣೆ, ಜಿ.ಪಂ. ಸಿಇಒ ಶಿಲ್ಪಾ ಶರ್ಮಾ, ನಗರಸಭೆ ಅಧ್ಯಕ್ಷ ವಿಲಾಸ್‌ ಪಾಟೀಲ್‌, ಯುಡಾ ಅಧ್ಯಕ್ಷ ಬಸವರಾಜ ಚಂಡರಕಿ, ತಾಪಂ ಅಧ್ಯಕ್ಷೆ ಭೀಮವ್ವ ಅಚ್ಚೋಲಾ ಸೇರಿದಂತೆ ಜಿಲ್ಲೆ ಎಲ್ಲ ತಾಲೂಕಗಳ ಕಸಾಪ ಘಟಕಗಳ ಅಧ್ಯಕ್ಷರು ಇದ್ದರು. ಡಾ| ಸುಭಾಶ್ಚಂದ್ರ ಕೌಲಗಿ ಪ್ರಾಸ್ತಾವಿಕವಾಗಿ ಮಾತನಾಡಿದರು

Advertisement

Udayavani is now on Telegram. Click here to join our channel and stay updated with the latest news.

Next