ಶಾಲಾ
ಶಿಕ್ಷಣಕ್ಕೆ ಸಂಬಂಧಿಸಿದಂತೆ ಜನರ ಬೇಡಿಕೆಯಿದ್ದದ್ದು ಎಲ್ಲ ಮಕ್ಕಳಿಗೆ ಸಮಾನ ಅವಕಾಶದ ಮೂಲಕ ಸಮಾನ ಗುಣಮಟ್ಟದ ಶಿಕ್ಷಣ ಒದಗಿಸ ಬಹುದಾದ ಶಿಕ್ಷಣ ವ್ಯವಸ್ಥೆಯನ್ನು ಕಟ್ಟಿಕೊಡ ಬೇಕೆಂಬುದು.
ಆದರೆ, ಮುಖ್ಯಮಂತ್ರಿಯವರು ಮಂಡಿಸಿದ ಆಯವ್ಯಯ ನಿರಾಶಾ ದಾಯಕ ಮಾತ್ರವಲ್ಲದೆ, ಜನರನ್ನು ದಾರಿತಪ್ಪಿಸುವ ಮತ್ತು ಹಿಡಿಯಾಗಿ ನೋಡಬೇಕಿದ್ದ ಶಿಕ್ಷಣ ವ್ಯವಸ್ಥೆಯನ್ನು ಬಿಡಿಬಿಡಿಯಾಗಿ ವಿಂಗಡಿಸಿ ಶಿಕ್ಷಣ ವ್ಯವವ್ಯಸ್ಥೆಯಲ್ಲಿ ಮತ್ತಷ್ಟು ಅರಾಜಕತೆ ಗೊಂದಲ ಸೃಷ್ಟಿಸುವ ಪ್ರಯತ್ನವಾಗಿದೆ.
276 ಕರ್ನಾಟಕ ಪಬ್ಲಿಕ ಶಾಲೆಗಳ ಮೂಲ ಸೌಕರ್ಯ ಅಭಿವೃದ್ಧಿಗೆ 100 ಕೋಟಿ ರೂ. ಅನುದಾನ ನೀಡಿ ಉಳಿದ ಸುಮಾರು 43,000 ಸಾವಿರ ಪ್ರಾಥಮಿಕ ಶಾಲೆ ಮತ್ತು ಅಲ್ಲಿ ಕಲಿಯುತ್ತಿರುವ ಮಕ್ಕಳನ್ನು ನಿರ್ಲಕ್ಷಿಸಲಾಗಿದೆ. ಶಿಕ್ಷಣಕ್ಕೆ 29,768 ಕೋಟಿ ಮೀಸಲಿಡುವ ಮೂಲಕ ಕಳೆದ ಬಾರಿಗಿಂತ 1617 ಕೋಟಿ ಅನುದಾನ ಹೆಚ್ಚಿಸಲಾಗಿದೆ. ಸರಕಾರಿ ಶಾಲೆಗಳ ಸಬಲೀಕರಣಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅತ್ಯಂತ ವೈಜ್ಞಾನಿಕ ಮತ್ತು ಸಮಗ್ರ ವರದಿ ಸಲ್ಲಿಸಿ 3 ವರ್ಷ ಕಳೆದರೂ ಅನುಷ್ಠಾನದ ಮಾತಾಡಿಲ್ಲ.
ಕನ್ನಡ ಶಾಲೆಗಳನ್ನು ಆಂಗ್ಲಮಾಧ್ಯಮ ಶಾಲೆಗಳನ್ನಾಗಿ ಮಾಡಿದ್ದನ್ನು ವಿಸ್ತರಿಸಿ 400 ಸರಕಾರಿ ಉರ್ದು ಶಾಲೆಗಳಲ್ಲಿ ಉರ್ದು ಮಾಧ್ಯಮದೊಂದಿಗೆ ಆಂಗ್ಲ ಮಾಧ್ಯಮ ಪ್ರಾರಂಭಕ್ಕೆ ಸರಕಾರ ಮುಂದಾಗಿರುವುದು ದೇಶೀ ಸಂಸ್ಕೃತಿಯ ಮಾತೃ ಭಾಷೆಯಲ್ಲಿ ಶಿಕ್ಷಣವನ್ನು ಒದಗಿ ಸಲು ನಾವು ಸಿದ್ಧರಿಲ್ಲ ಎಂಬುದನ್ನು ಸರಕಾರ ಅಧಿಕೃತವಾಗಿ ಸ್ಪಷ್ಟಿಸಿದಂತಿದೆ.
ಮಕ್ಕಳ ಆಯವ್ಯಯ ಮಂಡಿಸುವ ಕ್ರಮ ಶ್ಲಾಘನೀಯ ಎನಿಸಿದರೂ , ಮಕ್ಕಳಿಗೆ ಹೆಚ್ಚಿನ ಅನುದಾನ ಕೊಡುವ ಬದಲು ವಿವಿಧ ಇಲಾಖೆಗಳು ಮಕ್ಕಳಿಗೆ ಖರ್ಚು ಮಾಡುತ್ತಿದ್ದ ಹಣವನ್ನು ಒಟ್ಟಿಗೆ ಕೂಡಿಸಿ ಅದನ್ನು ಮಕ್ಕಳ ಆಯವ್ಯಯ ಎಂದು ಕರೆಯುವುದರಲ್ಲಿ ಯಾವ ಸಾರ್ಥಕತೆಯಿಲ್ಲ. ಬದಲಿಗೆ ರಾಜ್ಯದ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಆಯವ್ಯಯದಲ್ಲಿ ಕನಿಷ್ಠ ಶೇಕಡಾ 30ರಷ್ಟನ್ನಾದರೂ ಅನುದಾನ ಒದಗಿಸುವ ಪ್ರಯತ್ನ ವಾಗಿದ್ದರೆ ಅದು ನಿಜಕ್ಕೂ ಮಕ್ಕಳ ಆಯ ವ್ಯಯ ಕಲ್ಪನೆಗೆ ಹೊಸ ಅರ್ಥ ತರುತಿತ್ತು.
-ಡಾ.ವಿ.ಪಿ.ನಿರಂಜನಾರಾಧ್ಯ
ಶಿಕ್ಷಣ ತಜ್ಞ