Advertisement

ಆರ್‌ಟಿಐ ಜಾರಿಯಿಂದ ಶಿಕ್ಷಣ ಮೂಲ ಹಕ್ಕು

12:31 PM Mar 02, 2018 | Team Udayavani |

ಹುಣಸೂರು: ಅಂಬೇಡ್ಕರ್‌ ಸಂವಿಧಾನದಲ್ಲಿ ಶಿಕ್ಷಣವನ್ನು ಮೂಲಭೂತ ಹಕ್ಕನ್ನಾಗಿಸಲು ಯತ್ನಿಸಿದ್ದರೂ ಅಂದು ಬೆಂಬಲ ಸಿಕ್ಕಿರಲಿಲ್ಲ. ಆದರೆ 2010ರಲ್ಲಿ ಸರ್ಕಾರ ಆರ್‌ಟಿಐ ಜಾರಿಗೊಳಿಸುವ ಮೂಲಕ ಶಿಕ್ಷಣವನ್ನು ಮೂಲಭೂತ ಹಕ್ಕನ್ನಾಗಿಸಲಾಗಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ವೈ.ಮರಿಸ್ವಾಮಿ ತಿಳಿಸಿದರು.

Advertisement

ನಗರದ ಶಿಕ್ಷಕರ ಭವನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಉಪವಿಭಾಗ ಮಟ್ಟದ ಸರ್ಕಾರಿ ಶಾಲೆಗಳ ಉನ್ನತೀಕರಣಕ್ಕಾಗಿ ಹಳೆಯ ವಿದ್ಯಾರ್ಥಿಗಳ ಸಂಘದ ರಾಯಬಾರಿಗಳ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.

 ಮೆಕಾಲೆ ಶಿಕ್ಷಣ ಪದ್ಧತಿ ಜಾರಿಗೊಳಿಸಿದ್ದರೂ ಸಮರ್ಪಕ ಜಾರಿಗೆ ಸರ್ಕಾರಗಳು ಮುಂದಾಗಿರಲಿಲ್ಲ, ಆರ್‌ಟಿಐ ಜಾರಿಯಿಂದಾಗಿ ಬಡ ಮಕ್ಕಳು ಖಾಸಗಿ ಶಾಲೆಯಲ್ಲಿ ಓದುವಂತಾಗಿರುವುದು ಸಂತಸದ ಸಂಗತಿಯಾಗಿದ್ದರೂ  ಅವರ ಬಳಿಯೂ ಶುಲ್ಕ ವಸೂಲಿ ಶಾಲೆಗಳಿವೆ ಎಂದು ವಿಷಾದಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಎಚ್‌.ಪಿ.ಮಂಜುನಾಥ್‌, ಸರ್ಕಾರಿ ಶಾಲೆಗಳಲ್ಲಿ ಓದಿದವರೇ ಎಲ್ಲಾ ರಂಗಗಳಲ್ಲಿ ಸಾಧನೆಮಾಡಿದ  ಉದಾಹರಣೆ ನಮ್ಮ ಮುಂದಿದೆ, ಆದರೆ ಇಲ್ಲಿ ಕಲಿತು ಉನ್ನತ ಸ್ಥಾನಕ್ಕೇರಿದವರು ತಾವು ಕಲಿತ ಶಾಲೆಯನ್ನೇ ಮರೆಯುತ್ತಿರುವುದು ದುರದೃಷ್ಟಕರ. ಹೀಗಾಗಿ ಹಳೆಯ ವಿದ್ಯಾರ್ಥಿಗಳು ತಮ್ಮ ಕೈಲಾದ ಸಹಾಯ ಮಾಡುವ ಮೂಲಕ ಭವಿಷ್ಯದ ದೇಶದ ಸದೃಢ ಪ್ರಜೆಗಳನ್ನು ಕಟ್ಟುವ ಕಾರ್ಯದಲ್ಲಿ ಪಾಲ್ಗೊಳ್ಳಬೇಕಿದೆ ಎಂದು ಹೇಳಿದರು.

 ಮೈಸೂರಿನ ಬರ್ಡ್ಸ್‌ ಸಂಸ್ಥೆ ನಿರ್ದೇಶಕ ವೆಂಕಟೇಶ್‌, 1989ರಲ್ಲಿ ವಿಶ್ವಸಂಸ್ಥೆ ಮಕ್ಕಳ ಹಕ್ಕುಗಳ ಒಡಂಬಡಿಕೆಗೆ ಭಾರತ 1992ರಲ್ಲಿ ಒಪ್ಪಿ ಜಾರಿಗೊಳಿಸಿತು. ಅದನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಮಕ್ಕಳ ಹಕ್ಕುಗಳ ರಕ್ಷಣೆಗೆ ಸರ್ಕಾರ, ಇಲಾಖೆ ಜೊತೆಗೆ ಸಾರ್ವಜನಿಕರೂ ಜವಾಬ್ದಾರಿ ಹೊರಬೇಕೆಂದರು.

Advertisement

ಡಿಡಿಪಿಐ ಮಮತಾ, ಹಳೆಯ ವಿದ್ಯಾರ್ಥಿಗಳ ರಾಯಭಾರಿಗಳು ಸರ್ಕಾರಿ ಶಾಲೆಗಳ ಕುರಿತು ಪೋಷಕರಲ್ಲಿರುವ ನಕಾರಾತ್ಮಕ ಅಂಶಗಳನ್ನು ತಿದ್ದುವ, ಬಿಸಿಯೂಟ ಯೋಜನೆ ಜಾರಿಯಲ್ಲಿ ಸಾಮಾಜಿಕ ಅಡೆತಡೆ ಮೆಟ್ಟಿನಿಲ್ಲಲು ಸಹಕಾರ ಕೋರುತ್ತೇವೆ ಎಂದರು.

ಇದೇ ವೇಳೆ ತಾವು ಓದಿದ ಶಾಲೆಗೆ ವಿವಿಧ ರೀತಿಯ ಸಹಕಾರ ನೀಡಿದ ಅಣ್ಣೂರು ಗಿರಿಜನ ಕಾಲೋನಿ ಚಲುವರಾಜು, ಹುಣಸೂರು ತಾಲೂಕು ಅಸ್ವಾಳು ಗ್ರಾಮದ ಎನ್‌.ಸತೀಶ್‌, ಕೆ.ಆರ್‌.ನಗರದ  ಕಗ್ಗೆರೆ ಹಿರಿಯಣ್ಣ ಮತ್ತು ರಾವಂದೂರು ಗ್ರಾಮದ ನಾಗರಾಜು ಅವರನ್ನು ಸನ್ಮಾನಿಸಲಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಎಸ್‌.ರೇವಣ್ಣ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಎಚ್‌.ಕಮಲಾ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸಂತೋಷ್‌ಕುಮಾರ್‌, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಶಶಿಕುಮಾರ್‌, ಶಿಕ್ಷಣ ಸಂಯೋಜಕ ಜೆ.ಮಹದೇವ್‌, ಸಿಆರ್‌ಪಿ ಮಾದುಪ್ರಸಾದ್‌ ಇದ್ದರು.

ಗೊಂದಲ: ಕಾರ್ಯಕ್ರಮ ಮುಕ್ತಾಯ ಹಂತಕ್ಕೆ ತಲುಪುತ್ತಿದ್ದಂತೆ ಕೆಲವರು ವೇದಿಕೆ ಏರಿ ಇಲ್ಲಿ ಭಾಷಣ ಮಾಡುತ್ತಿರುವ ಹಾಗೂ ಕುಳಿತಿರುವ ಅಧಿಕಾರಿಗಳಲ್ಲಿ ಎಷ್ಟು ಮಂದಿ ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿದ್ದೀರಾ ಮೊದಲು ಹೇಳಿ ಆ ಮೇಲೆ ಸರ್ಕಾರಿ ಶಾಲೆಗಳ ಅಭಿವೃದ್ಧಿ ಬಗ್ಗೆ ಮಾತನಾಡಿ  ಎಂದಾಗ ಕೆಲಕಾಲ ಗೊಂದಲ ಮೂಡಿತು.

Advertisement

Udayavani is now on Telegram. Click here to join our channel and stay updated with the latest news.

Next